ಕರಿಪತಾಕೆ ಪ್ರದರ್ಶನ, ಧಿಕ್ಕಾರದ ನಡುವೆಯೇ ಬಿಜೆಪಿ ಸೇರಿದ ಕಾಂಗ್ರೆಸ್ ಪುಢಾರಿ ; ಪಕ್ಷದ ವಿರುದ್ಧ ಹಗೆ ಕಟ್ಟಿಕೊಂಡಿದ್ದವರಿಗೆ ಗ್ರೀನ್ ಸಿಗ್ನಲ್! ಚರ್ಚೆ ಹುಟ್ಟುಹಾಕಿದ ರಾಜ್ಯಾಧ್ಯಕ್ಷರ ನಡೆ ! 

06-12-21 05:56 pm       HK Desk news   ಕರಾವಳಿ

ಪಕ್ಷದ ಕಾರ್ಯಕರ್ತರ ವಿರೋಧ, ಕರಿಪತಾಕೆ ಪ್ರದರ್ಶನ, ಧಿಕ್ಕಾರ ಘೋಷಣೆಯ ನಡುವೆಯೇ ಕಾಂಗ್ರೆಸ್ ಪುಢಾರಿ ಒಬ್ಬರನ್ನು ಬಿಜೆಪಿಗೆ ಸೇರಿಸಿದ್ದು ಕಾರ್ಯಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಪುತ್ತೂರು, ಡಿ.6: ಪುಣಚದಲ್ಲಿ ನಡೆದ ಬಿಜೆಪಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಪಕ್ಷದ ಕಾರ್ಯಕರ್ತರ ವಿರೋಧ, ಕರಿಪತಾಕೆ ಪ್ರದರ್ಶನ, ಧಿಕ್ಕಾರ ಘೋಷಣೆಯ ನಡುವೆಯೇ ಕಾಂಗ್ರೆಸ್ ಪುಢಾರಿ ಒಬ್ಬರನ್ನು ಬಿಜೆಪಿಗೆ ಸೇರಿಸಿದ್ದು ಕಾರ್ಯಕರ್ತರ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 

ಇಂದು ಬೆಳಗ್ಗೆ ಬಿಜೆಪಿ ಪುಣಚ ಶಕ್ತಿಕೇಂದ್ರದ ವತಿಯಿಂದ ಚುನಾವಣಾ ಪ್ರಚಾರ ಸಭೆ ಇಡ್ಕಿದು ಎಂಬಲ್ಲಿ ನಡೆದಿತ್ತು. ಇದರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸಮ್ಮುಖದಲ್ಲಿ ಮಾಣಿಲ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆಯಾಗಿದ್ದಾರೆ. 

ಕಳೆದ ಒಂದು ವರ್ಷದಿಂದ ಬಿಜೆಪಿ ಸೇರ್ಪಡೆಯಾಗಲು ರಾಜೇಶ್ ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಮಾಣಿಲ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಸಂಘ ಪರಿವಾರದ ಪ್ರಮುಖರು ರಾಜೇಶ್ ಬಾಳೆಕಲ್ಲು ಪಕ್ಷ ಸೇರಲು ವಿರೋಧ ವ್ಯಕ್ತಪಡಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಲ್ಲಿ ಒಬ್ಬರಾಗಿದ್ದ ರಾಜೇಶ್ ಬಾಳೆಕಲ್ಲು ಅವರನ್ನು ಪಕ್ಷ ವಿರೋಧಿ ಚಟುವಟಿಕೆ, ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಪಕ್ಷದಿಂದ ಆರು ವರ್ಷ ಕಾಲ ಉಚ್ಚಾಟಿಸಿದ್ದರು. 

ಈ ಹಿಂದೆ ವಿಟ್ಲ ಶಾಸಕರಾಗಿದ್ದ ಕೆ.ಎಂ. ಇಬ್ರಾಹಿಂ ಜೊತೆಗೆ, ಆನಂತರ ವಿಟ್ಲ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷನಾಗಿ ಬೊಂಡಾಲ ಜಗನ್ನಾಥ ಶೆಟ್ಟಿ ಜೊತೆ ಗುರುತಿಸಿಕೊಂಡಿದ್ದ ರಾಜೇಶ್ ಬಾಳೆಕಲ್ಲು ಮಾಣಿಲ ಗ್ರಾಪಂನಲ್ಲಿ ನಾಲ್ಕು ಬಾರಿ ಗ್ರಾಪಂ ಸದಸ್ಯರಾಗಿ, ಎರಡು ಬಾರಿ ಅಧ್ಯಕ್ಷರಾಗಿದ್ದವರು. ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರ ಜೊತೆ ತೀವ್ರ ಹಗೆತನ ಹೊಂದಿದ್ದರು. ಕೇರಳ ಗಡಿಭಾಗದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಆರೋಪದಲ್ಲಿ ಮತ್ತು ಹಲ್ಲೆ , ದೊಂಬಿ ಪ್ರಕರಣದಲ್ಲಿ ಇವರ ವಿರುದ್ಧ ಹಲವು ದೂರುಗಳು ಬಿಜೆಪಿ ಕಾರ್ಯಕರ್ತರಿಂದಲೇ ವಿಟ್ಲ ಠಾಣೆಯಲ್ಲಿ ದಾಖಲಾಗಿವೆ. ಈತನ ಗೂಂಡಾ ಚಟುವಟಿಕೆ ಮತ್ತು ಅಕ್ರಮ ದಂಧೆಯಲ್ಲಿ ತೊಡಗಿಸಿದ ಬೆಂಬಲಿಗರಿಂದಾಗಿ ಬಿಜೆಪಿ ಕಾರ್ಯಕರ್ತರು ಹಲ್ಲೆಗೊಳಗಾಗಿದ್ದರು. ಇದೇ ಕಾರಣಕ್ಕೆ ಮಾಣಿಲ ಭಾಗದ ಆರೆಸ್ಸೆಸ್ ನಾಯಕರು ಸೇರಿದಂತೆ ಸಂಘ ಪರಿವಾರದ ನಾಯಕರು ರಾಜೇಶ್ ಬಾಳೆಕಲ್ಲು ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 

ಆತ ಪಕ್ಷಕ್ಕೆ ಬಂದರೆ ನಾವು ಕೆಲಸ ಮಾಡುವುದಿಲ್ಲ ಎಂದು ಅಲ್ಲಿನ ಮಂದಿ ನೇರವಾಗಿ ಬಿಜೆಪಿ ಜಿಲ್ಲಾ ನಾಯಕರಿಗೆ ತಿಳಿಸಿದ್ದರು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್, ಎಲ್ಲವನ್ನೂ ಸ್ಥಳೀಯರ ಅನುಮತಿ ಪಡೆದು ಮಾಡಲಾಗದು. ಅದರ ಅಗತ್ಯವೂ ಇಲ್ಲ. ನಮಗೆ ಮಾಣಿಲದಂಥ ಗ್ರಾಮಗಳಲ್ಲಿ ನಾಯಕರು ಕೂಡ ಬೇಕು ಎಂದು ರಾಜೇಶ್ ಬಾಳೆಕಲ್ಲು ವಿಚಾರದಲ್ಲಿ ನಿಷ್ಠುರವಾಗಿ ನಡೆದುಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. 

ಇತ್ತೀಚಿಗೆ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಮಾಣಿಲ, ವಿಟ್ಲ ಭಾಗದ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿದ್ದರು. ಆದರೆ, ಸಂಘ ಪರಿವಾರದ ವಿರೋಧದ ಕಾರಣ ರಾಜೇಶ್ ಸೇರ್ಪಡೆಗೆ ಅವಕಾಶ ನೀಡಿರಲಿಲ್ಲ. ಆದರೆ, ಈಗ ಸದ್ದಿಲ್ಲದೆ ಪಕ್ಷಕ್ಕೆ ಬರಮಾಡಿಕೊಂಡಿದ್ದು ಬಿಜೆಪಿ ಒಳಗಡೆಯೇ ಭಾರೀ ಚರ್ಚೆಗೀಡು ಮಾಡಿದೆ.‌

ಇಂದು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲೇ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕರಿಪತಾಕೆ ಹಿಡಿದು ಧಿಕ್ಕಾರ ಕೂಗಿದ್ದಾರೆ. ಇದರಿಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್, ಉಸ್ತುವಾರಿ ಸಚಿವ ಅಂಗಾರ ಸೇರಿದಂತೆ ಜಿಲ್ಲಾ ನಾಯಕರು ತೀವ್ರ ಮುಜುಗರ ಅನುಭವಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದ್ರೆ, ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸೇರಿ ಹಲವು ನಾಯಕರು ಉಪಸ್ಥಿತರಿದ್ದರು. ಈ ರೀತಿಯ ನಡೆ ಭವಿಷ್ಯದಲ್ಲಿ ಬಿಜೆಪಿಗೆ ವಿಟ್ಲ ಭಾಗದಲ್ಲಿ ಯಾವ ರೀತಿಯ ಪರಿಣಾಮ ಆಗಲಿದೆ ಎನ್ನುವುದು ಮುಂದಿನ ಜಿಪಂ ಚುನಾವಣೆಯಲ್ಲಿ ತಿಳಿಯಲಿದೆ. 

ಕಳೆದ ಬಾರಿ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ರಾಜೇಶ್, ಬಿಜೆಪಿ ಅಭ್ಯರ್ಥಿ ವಿರುದ್ಧ ಹೀನಾಯ ಸೋಲುಂಡಿದ್ದರು. ಮುಂದಿನ ಬಾರಿ ಜಿಪಂ ಸ್ಥಾನದ ಆಕಾಂಕ್ಷಿಯಾಗಿರುವ ರಾಜೇಶ್ ಪರವಾಗಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಲಿದ್ದಾರೆಯೇ ಎನ್ನುವುದು ಕೂಡ ಕುತೂಹಲಕ್ಕೀಡಾಗಿದೆ.

Mangalore Rajesh Balekallu of Puttur joins Bjp from Congress. He was removed from congress party for going against. But now he has joined the BJP party.  Even amid BJP workers and leaders saying no he has joined the party under the influence of Nalin Kumar Kateel.