ಒಮಾನಲ್ಲಿ ಚಂಡಮಾರುತ ; ಮಂಗಳೂರಿನಲ್ಲಿ ಟೇಕಾಫ್ ಆಗದ ವಿಮಾನ, ದಿನವಿಡೀ ಕಾದು ಬಸವಳಿದ ಪ್ರಯಾಣಿಕರು !

04-10-21 10:44 am       Mangaluru Correspondent   ಕರಾವಳಿ

ಶಾಹೀನ್ ಚಂಡಮಾರುತದ ಅಬ್ಬರದ ಕಾರಣ ಒಮಾನ್ ಸೇರಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರಕ್ಕೆ ತೊಡಕಾಗಿದೆ. ಚಂಡಮಾರುತದ ಕಾರಣ ಮಂಗಳೂರಿನಿಂದ ಮಸ್ಕತ್‌ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು.

ಮಂಗಳೂರು, ಅ.4 : ಶಾಹೀನ್ ಚಂಡಮಾರುತದ ಅಬ್ಬರದ ಕಾರಣ ಒಮಾನ್ ಸೇರಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರಕ್ಕೆ ತೊಡಕಾಗಿದೆ. ಒಮಾನ್ ದೇಶದಲ್ಲಿ ಭಾನುವಾರ ಮತ್ತು ಸೋಮವಾರ ಮುಂಜಾಗ್ರತಾ ಕ್ರಮವಾಗಿ ದೇಶಾದ್ಯಂತ ರಜೆ ಘೋಷಣೆ ಮಾಡಲಾಗಿತ್ತು. ಚಂಡಮಾರುತದ ಪರಿಣಾಮ ಒಮಾನ್ ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು.‌

ಆದರೆ ಚಂಡಮಾರುತದ ಕಾರಣ ಮಂಗಳೂರಿನಿಂದ ಮಸ್ಕತ್‌ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಭಾನುವಾರ ಬೆಳಗ್ಗೆ ಮಸ್ಕತ್‌ಗೆ ತೆರಳಬೇಕಾದ ವಿಮಾನ ಟೇಕಾಫ್ ಆಗದ ಕಾರಣ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ದಿನವೀಡೀ ಕಾಯುವಂತಾಯಿತು.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಭಾನುವಾರ ಬೆಳಗ್ಗೆ ಮಸ್ಕತ್‌ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಸಂಜೆಯ ವರೆಗೂ ಟೇಕಾಫ್ ಆಗಲಿಲ್ಲ. ವಿಮಾನಯಾನ ಮಾಡಲು ಬಂದಿದ್ದ 100ಕ್ಕೂ ಹೆಚ್ಚು ಜನರು ವಿಮಾನ ನಿಲ್ದಾಣದಲ್ಲೇ ಕಾದು ಕುಳಿತರು. ಈ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ ಪ್ರಯಾಣಿಕರಿಗೆ ಇರಿಸು ಮುರಿಸು ತಂದಿಟ್ಟಿದ್ದರು. 

ಏರ್ ಇಂಡಿಯಾ ವಿಮಾನ ಸಂಜೆಯವರೆಗೂ ಟೇಕಾಫ್ ಆಗುವುದಿಲ್ಲ ಎಂಬ ಮಾಹಿತಿಯನ್ನು ಪ್ರಯಾಣಿಕರಿಗೆ ನೀಡದ ಕಾರಣ ಪ್ರಯಾಣಿಕರು ಕಾದು ಕಾದು ಆಕ್ರೋಶ ವ್ಯಕ್ತಪಡಿಸಿದರು.‌ ಸಂಜೆಯ ವರೆಗೂ ಕಾದು ಕುಳಿತ ಬಳಿಕ ಮಸ್ಕತ್‌ಗೆ ತೆರಳಬೇಕಿದ್ದ ವಿಮಾನ ರದ್ದಾಗಿರುವ ಮಾಹಿತಿ ನೀಡಿದ್ದು, ಬೆಳಗ್ಗೆಯಿಂದ ಕಾದಿದ್ದ ಪ್ರಯಾಣಿಕರನ್ನು ಆಕ್ರೋಶಕ್ಕೀಡು ಮಾಡಿತ್ತು.

ರದ್ದುಗೊಂಡಿರುವ ವಿಮಾನ ಅಕ್ಟೋಬರ್‌ 7ರಂದು ಮತ್ತೆ ಯಥಾವತ್ತಾಗಿ ಮಸ್ಕತ್‌ಗೆ ಪ್ರಯಾಣ ಬೆಳೆಸಲಿದೆ ಎಂದು ಏರ್ ಇಂಡಿಯಾ ಸಂಸ್ಥೆ ಪ್ರಯಾಣಿಕರಿಗೆ ಮಾಹಿತಿ ನೀಡಿದೆ. 
 
ಆದರೆ, ವಿಮಾನ ರದ್ದು ಬಗ್ಗೆ ಸಂಜೆಯವರೆಗೂ ಮಾಹಿತಿ ನೀಡದೆ ಬೇಜವಾಬ್ದಾರಿ ತೋರಿದ ಏರ್ ಇಂಡಿಯಾ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ, ಏರ್ ಪೋರ್ಟ್ ಒಳಭಾಗದಲ್ಲಿ ನೆಲದಲ್ಲೇ ಕುಳಿತು ಪ್ರಯಾಣಿಕರು ಕಾಯುವಂತಾಗಿತ್ತು.  "ಬೆಳಗ್ಗಿನಿಂದ ಸಂಜೆಯ ವರೆಗೆ ಏರ್ ಪೋರ್ಟ್ ಒಳಗೆ ನೆಲದಲ್ಲಿ ಕುಳಿತು ಕಾದಿದ್ದೇವೆ. ಒಮಾನ್‌ನಲ್ಲಿ ಚಂಡಮಾರುತ ಕಾಣಿಸಿಕೊಂಡಿದ್ದು ಸಂಜೆ ವೇಳೆಗೆ ಅಲ್ಲ. ಏರ್ ಇಂಡಿಯಾಗೆ ಮೊದಲೇ ಮಾಹಿತಿಯಿದ್ದರೇ ಬೆಳಗ್ಗೆಯೇ ಮಾಹಿತಿ ನೀಡಬೇಕಾಗಿತ್ತು. ಆದರೆ ಸಂಜೆಯವರೆಗೂ ಕಾಯಿಸಿ, ಆ ಬಳಿಕ ಅಕ್ಟೋಬರ್ 7ರಂದು ಇದೇ ವಿಮಾನ ಮಸ್ಕತ್‌ಗೆ ಹೋಗೋದಾಗಿ ಹೇಳಿದ್ದಾರೆ. ಸಿಬ್ಬಂದಿ ನಿರ್ಲಕ್ಷ್ಯದಿಂದ ಮಹಿಳೆಯರು ಮಕ್ಕಳು ಪರದಾಡುವಂತಾಗಿದೆ" ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

Take-off of flight to Oman was delayed by a day due to Cyclone Shaheen. More than 100 passages where stranded at the airport.