5 ಶೇ. ಬಡ್ಡಿಯಲ್ಲಿ ಹತ್ತು ಲಕ್ಷ ಲೋನ್ ; ಮೊಬೈಲ್ ಮೆಸೇಜ್ ನಂಬಿ ಆತ ಕಳಕೊಂಡಿದ್ದು ಬರೋಬ್ಬರಿ 7 ಲಕ್ಷ !

22-09-21 10:05 pm       Headline Karnataka News Network   ಕರಾವಳಿ

 5 ಶೇಕಡಾ ಬಡ್ಡಿಯಲ್ಲಿ ಹತ್ತು ಲಕ್ಷ ಲೋನ್ ಮಾಡಿಸಿಕೊಡುವ ಆಮಿಷಕ್ಕೊಳಗಾದ ವ್ಯಕ್ತಿಯೊಬ್ಬ ಬರೋಬ್ಬರಿ ಏಳು ಲಕ್ಷ ರೂಪಾಯಿ ಕಳಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುತ್ತೂರು, ಸೆ.22: 5 ಶೇಕಡಾ ಬಡ್ಡಿಯಲ್ಲಿ ಹತ್ತು ಲಕ್ಷ ಲೋನ್ ಮಾಡಿಸಿಕೊಡುವ ಆಮಿಷಕ್ಕೊಳಗಾದ ವ್ಯಕ್ತಿಯೊಬ್ಬ ಬರೋಬ್ಬರಿ ಏಳು ಲಕ್ಷ ರೂಪಾಯಿ ಕಳಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮಕುಂಜ ಗ್ರಾಮದ ಮಹಮ್ಮದ್ ನಜೀರ್ ಎಂಬವರು ಹಣ ಕಳಕೊಂಡವರು. ಕಳೆದ ಜನವರಿಯಲ್ಲಿ ತನ್ನ ಮೊಬೈಲಿಗೆ ಕ್ಯಾಪಿಟಲ್ ಇಂಡಿಯಾ ಫೈನಾನ್ಸ್ ಲಿಮಿಟೆಡ್ ಎಂಬ ಹೆಸರಲ್ಲಿ ಮೆಸೇಜ್ ಬಂದಿತ್ತು. ಅಲ್ಲದೆ, ಲೋನ್ ಪಡೆಯಲು 9582853543 ನಂಬರಿಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಸದ್ರಿ ನಂಬರಿಗೆ ಕರೆ ಮಾಡಿ ಮಾತನಾಡಿದಾಗ, 5 ಶೇ. ಬಡ್ಡಿಯಲ್ಲಿ 5 ಲಕ್ಷ ಲೋನ್ ನೀಡುವುದಾಗಿ ತಿಳಿಸಿದ್ದರು.

ಅದಕ್ಕಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಕಾಪಿ, ಫೋಟೋ ಕಳುಹಿಸಲು ಹೇಳಿದ್ದು, ಅವರು ಹೇಳಿದಂತೇ ಮಹಮ್ಮದ್ ನಜೀರ್ ಮಾಡಿದ್ದರು. ಆನಂತರ ವಿವಿಧ ಮೊಬೈಲ್ ನಂಬರ್ ಗಳಲ್ಲಿ ಕರೆ ಬಂದಿದ್ದು, ರಿಜಿಸ್ಟ್ರೇಶನ್, ಜಿಎಸ್ಟಿ ಹಾಗೂ ವಿವಿಧ ಚಾರ್ಜ್ ಹೆಸರಲ್ಲಿ ಹಣ ಕಳುಹಿಸಲು ತಿಳಿಸಿದ್ದಾರೆ. ಹಣವನ್ನು ಹಂತ ಹಂತವಾಗಿ ಕಳುಹಿಸಿದ್ದು ಒಟ್ಟು 5,20,727 ರೂಪಾಯಿ ಕಳುಹಿಸಿದ್ದಾರೆ. ಇದೇ ವೇಳೆ, ಬಜಾಜ್ ಸರ್ವ್ ಕಂಪನಿಯ ಹೆಸರಲ್ಲಿ ಮೆಸೇಜ್ ಬಂದಿದ್ದು, 7074047721 ನಂಬರಿಗೆ ಕರೆ ಮಾಡಲು ಸೂಚಿಸಲಾಗಿತ್ತು.

ಕರೆ ಮಾಡಿದಾಗ, 5 ಶೇ. ಬಡ್ಡಿಯಲ್ಲಿ 9 ಲಕ್ಷ ಲೋನ್ ತೆಗೆಸಿಕೊಡುವುದಾಗಿ ಹೇಳಿದ್ದರು. ಅಲ್ಲದೆ, ದಾಖಲಾತಿಗಳನ್ನು ಕಳುಹಿಸುವಂತೆ ತಿಳಿಸಿದ್ದರು. ರಿಜಿಸ್ಟ್ರೇಶನ್ ಮತ್ತು ವಿವಿಧ ರೀತಿಯ ಚಾರ್ಜಸ್ ಹೆಸರಲ್ಲಿ ಹಣ ಪಾವತಿಸಲು ಕೇಳಿದ್ದು, ಮಹಮ್ಮದ್ ನಜೀರ್ ಹಂತ ಹಂತವಾಗಿ 2,03,598 ರೂಪಾಯಿ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಪಾವತಿಸಿದ್ದಾರೆ. ಈ ರೀತಿಯಾಗಿ ಒಟ್ಟು ಬರೋಬ್ಬರಿ 7,24,325 ರೂಪಾಯಿ ಹಣವನ್ನು ಕಳಕೊಂಡಿದ್ದು, ಮೋಸ ಹೋಗಿದ್ದಾರೆ. ಸಾಲ ಕೇಳಲು ಹೋಗಿದ್ದ ಮಹಮ್ಮದ್ ನಜೀರ್ ತಾನೇ ಅಪಾರ ಮೊತ್ತದ ಹಣವನ್ನು ಕಳಕೊಂಡಿದ್ದರು. ಇದೀಗ ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 419, 420 ಮತ್ತು 66 (ಡಿ), 66 (ಸಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Puttur Man falls trap to Double interest of Money loose Rs Seven Lakhs case registered. He fell trapped to the scam after he received a SMS on his phone.