ಹಿಂದು ಮಹಾಸಭಾಕ್ಕೆ ಉಚ್ಚಾಟಿತರೇ ಅಧ್ಯಕ್ಷರಾ? ನಾನೇ ಅಧ್ಯಕ್ಷ ಎನ್ನುತ್ತಿರುವ ಆ ಇಬ್ಬರು! ಬಿಜೆಪಿಗೆ ಮತ ಬ್ಯಾಂಕ್ ಒಡೆಯುವ ಭಯವಂತೆ ?!

19-09-21 04:16 pm       Mangaluru Correspondent   ಕರಾವಳಿ

ಹಿಂದುಗಳಿಗೆ ಅನ್ಯಾಯ ಮಾಡಿದ ಗಾಂಧೀಜಿಯನ್ನೇ ಬಿಟ್ಟಿಲ್ಲ. ನಿಮ್ಮನ್ನು ಬಿಡುತ್ತೇವಾ.. ಎಂದು ಬೆದರಿಕೆ ಒಡ್ಡುವ ರೀತಿ ಹೇಳಿಕೆ ನೀಡಿದ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅಮೀನ್ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ.

ಮಂಗಳೂರು, ಸೆ.19: ಹಿಂದುಗಳಿಗೆ ಅನ್ಯಾಯ ಮಾಡಿದ ಗಾಂಧೀಜಿಯನ್ನೇ ಬಿಟ್ಟಿಲ್ಲ. ನಿಮ್ಮನ್ನು ಬಿಡುತ್ತೇವಾ.. ಎಂದು ಬೆದರಿಕೆ ಒಡ್ಡುವ ರೀತಿ ಹೇಳಿಕೆ ನೀಡಿದ ಹಿಂದು ಮಹಾಸಭಾ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಅಮೀನ್ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಮೈಸೂರಿನಲ್ಲಿ ದೇವಸ್ಥಾನ ಒಡೆದು ಹಾಕಿರುವ ಕೃತ್ಯವನ್ನು ಖಂಡಿಸಿ ಸುದ್ದಿಗೋಷ್ಠಿ ನಡೆಸಿದ್ದ ಧರ್ಮೇಂದ್ರ, ಬಿಜೆಪಿಯವರನ್ನು ವಾಚಾಮಗೋಚರ ನಿಂದಿಸಿದ್ದರು. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು, ಹಿಂದುತ್ವವಾದಿಗಳು ಬಿಜೆಪಿಗೆ ಮತ ನೀಡಬಾರದು ಎಂದು ಕರೆ ನೀಡಿದ್ದರು.

ಕಳೆದ 2018ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹಿಂದು ಮಹಾಸಭಾದಿಂದ ಮಂಗಳೂರು ಸೇರಿ ಕೆಲವು ಕಡೆ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿತ್ತು. ಕಳೆದ 2015ರಲ್ಲಿ ಚುನಾವಣಾ ಆಯೋಗದಲ್ಲಿ ಅಖಿಲ ಭಾರತ ಹಿಂದು ಮಹಾಸಭಾ ಕರ್ನಾಟಕ ಎಂದು ರಾಜಕೀಯ ಪಕ್ಷವಾಗಿ ರಿಜಿಸ್ಟರ್ ಮಾಡಿಕೊಂಡಿದ್ದ ಕಾರಣ ಇತ್ತೀಚಿನ ದಿನಗಳಲ್ಲಿ ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಇಳಿದಿತ್ತು. ಇದೀಗ ಮತ್ತೆ ಚುನಾವಣೆ ಬರುತ್ತಿರುವ ಸಂದರ್ಭದಲ್ಲಿಯೇ ಹಿಂದು ಮಹಾಸಭಾ ಮುಖಂಡರು ದೇವಸ್ಥಾನ ಒಡೆದ ವಿಚಾರವನ್ನು ಮುಂದಿಟ್ಟು ಬಿಜೆಪಿಯ ಮತಬ್ಯಾಂಕನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಅಲ್ಲದೆ, ಮುಸ್ಲಿಂ ಮತ ಬ್ಯಾಂಕ್ ಗಿಟ್ಟಿಸಲು ಬಿಜೆಪಿ ದೇವಸ್ಥಾನ ಒಡೆಯಲು ಮುಂದಾಗಿತ್ತು ಎನ್ನುವ ಗಂಭೀರ ಆರೋಪವನ್ನೂ ಮಾಡಿದ್ದಾರೆ.

ಮಾತಿನ ಓಘದಲ್ಲಿ ಧರ್ಮೇಂದ್ರ ಅಮೀನ್ ಗಾಂಧೀಜಿಯನ್ನೇ ಬಿಟ್ಟಿಲ್ಲ. ನಿಮ್ಮನ್ನು ಬಿಡುತ್ತೇವಾ ಎಂದು ನೀಡಿದ್ದ ಹೇಳಿಕೆಯನ್ನೇ ಮುಂದಿಟ್ಟು ರಾಜಕೀಯ ವಿರೋಧಿಗಳು ಕೇಸು ದಾಖಲಿಸಿದ್ದಾರೆ. ಆದರೆ, ದೂರು ದಾಖಲು ಮಾಡಿದ್ದು ಮಾತ್ರ ಹಿಂದು ಮಹಾಸಭಾದ್ದೇ ಇನ್ನೊಬ್ಬ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿರುವ ಎಲ್.ಕೆ. ಸುವರ್ಣ ಎಂಬ ವ್ಯಕ್ತಿ. ವಿಷ್ಯ ಏನಪ್ಪಾಂದ್ರೆ, ಹಿಂದು ಮಹಾಸಭಾ ಎನ್ನುವ ಸಂಘಟನೆಯಲ್ಲಿ ಕಳೆದ ಐದಾರು ವರ್ಷದಲ್ಲಿ ತಾನೇ ರಾಜ್ಯಾಧ್ಯಕ್ಷ ಎಂದು ಹಲವರು ಹೇಳಿಕೊಂಡು ತಿರುಗಾಡಿದ್ದರು. ಈಗ ಸುರತ್ಕಲ್ ಮೂಲದ ರಾಜೇಶ್ ಪವಿತ್ರನ್ ಎಂಬವರು ರಾಜ್ಯಾಧ್ಯಕ್ಷ ಎಂದು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದವರು ಹೇಳಿಕೊಂಡಿದ್ದರು. ಧರ್ಮೇಂದ್ರ ಅಮೀನ್ ರಾಜ್ಯ ಕಾರ್ಯದರ್ಶಿ, ಇತರರು ಜಿಲ್ಲಾ ಪದಾಧಿಕಾರಿಗಳು ಎಂದಿದ್ದರು. ಆದರೆ, ಎಲ್.ಕೆ. ಸುವರ್ಣ ಎಂಬವರು 2019ರಿಂದ ತಾನೇ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಈ ಬಗ್ಗೆ ಪೊಲೀಸ್ ದೂರು ಕೊಟ್ಟಿದ್ದು, ಕೋರ್ಟಿನಲ್ಲಿ ಸಿವಿಲ್ ಸೂಟ್ ಹಾಕುವುದಾಗಿ ಹೇಳಿದ್ದಾರೆ.

ಈ ಬಗ್ಗೆ ರಾಜೇಶ್ ಪವಿತ್ರನ್ ಬಳಿ ಕೇಳಿದಾಗ, ಧರ್ಮೇಂದ್ರ ಅಮೀನ್ ನೀಡಿರುವ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ನಾಯಕರು ತಮ್ಮ ಮತಬ್ಯಾಂಕಿಗೆ ಪೆಟ್ಟು ಬೀಳುವ ಭಯದಲ್ಲಿ ಈ ದೂರು ಕೊಡಿಸಿ, ಎಫ್ಐಆರ್ ಮಾಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬದಲು ಹಿಂದುತ್ವದ ಮತಗಳು ಹಿಂದು ಮಹಾಸಭಾಗೆ ಬೀಳಲಿದೆ, ಈಗಾಗ್ಲೇ ದೇವಸ್ಥಾನ ಒಡೆದ ವಿಚಾರದಲ್ಲಿ ಹಿಂದು ಸಂಘಟನೆಯ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ ಎಂದಿದ್ದಾರೆ. ಅಲ್ಲದೆ, ನಾವು ಅಖಿಲ ಭಾರತ ಹಿಂದು ಮಹಾಸಭಾ ಕರ್ನಾಟಕ ಎಂಬುದನ್ನು ಚುನಾವಣಾ ಆಯೋಗದಲ್ಲಿ 2015ರಲ್ಲೇ ರಿಜಿಸ್ಟರ್ ಮಾಡಿದ್ದೇವೆ. ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇವೆ. ಈ ಬಾರಿ ಜಿಪಂ ಚುನಾವಣೆಯಲ್ಲೂ ನಾವು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ. ಕಳೆದ ಮಾರ್ಚ್ ತಿಂಗಳಿಂದ ನಾನು ರಾಜ್ಯಾಧ್ಯಕ್ಷನಾಗಿದ್ದೇನೆ, ಧರ್ಮೇಂದ್ರ ರಾಜ್ಯ ಕಾರ್ಯದರ್ಶಿಯಾಗಿದ್ದಾರೆ. ಕೇಸು ದಾಖಲಿಸಿದ್ದರ ಹಿಂದೆ ಬಿಜೆಪಿ ನಾಯಕರ ದುರುದ್ದೇಶ, ಷಡ್ಯಂತ್ರ ಇದೆ ಎಂದಿದ್ದಾರೆ.

ಎಲ್.ಕೆ.ಸುವರ್ಣ ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ನೆಲೆಯಲ್ಲಿ 2019ರಲ್ಲಿ ವಜಾ ಮಾಡಲಾಗಿತ್ತು. ಆದರೆ, ಬೇನಾಮಿಯಾಗಿ ರಾಜ್ಯಾಧ್ಯಕ್ಷನೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ಬಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇನೆ. ಸುರತ್ಕಲ್ ಠಾಣೆಗೆ ಕರೆದು ವಿಚಾರಣೆಯನ್ನೂ ಮಾಡಿದ್ದಾರೆ. ನಮ್ಮದು ರಿಜಿಸ್ಟರ್ ಬಾಡಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯಿದೆ ಎಂದು ರಾಜೇಶ್ ಪವಿತ್ರನ್ ಹೇಳಿದ್ದಾರೆ. ಆದರೆ, ಈ ಬಗ್ಗೆ ದೂರುದಾರ ಎಲ್.ಕೆ.ಸುವರ್ಣ ಬಳಿ ಕೇಳಿದರೆ, ಸಂಪೂರ್ಣ ಉಲ್ಟಾ ಮಾತನ್ನು ಹೇಳುತ್ತಾರೆ. ನಾನು 2003ರಿಂದಲೂ ಹಿಂದು ಮಹಾಸಭಾದಲ್ಲಿದ್ದು, 2019ರಲ್ಲಿ ನನ್ನನ್ನು ರಾಜ್ಯಾಧ್ಯಕ್ಷನಾಗಿ ಕೇಂದ್ರೀಯ ಮಂಡಳಿಯವರು ಆಯ್ಕೆ ಮಾಡಿದ್ದಾರೆ. ಕರ್ನಾಟಕದಲ್ಲಿ ರಾಜಕೀಯ ಪಕ್ಷವಾಗಿ ಮಾಡಿದ್ದೇ ಸರಿಯಲ್ಲ. ಇದನ್ನು ನಾವು ಚುನಾವಣಾ ಆಯೋಗದಲ್ಲಿ ಪ್ರಶ್ನೆ ಮಾಡುತ್ತೇವೆ. ರಾಜೇಶ್ ಪವಿತ್ರನ್ ಮೇಲೆ ಬರ್ಕೆ ಠಾಣೆಯಲ್ಲಿ ಕೇಸು ಇದ್ದು ಅವರನ್ನು ಸಂಘಟನೆಯಿಂದ ಹೊರಕ್ಕೆ ಹಾಕಿದ್ದೇವೆ ಎಂದು ಹೇಳುತ್ತಾರೆ.

ಒಟ್ಟಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಆರೆಸ್ಸೆಸ್ ಸ್ಥಾಪನೆ ಮಾಡುವುದಕ್ಕೂ ಮೊದಲೇ ಹೆಡ್ಗೇವಾರ್ ಅವರಂಥವರೇ ಸೇರಿಕೊಂಡು ಸ್ವಾತಂತ್ರ್ಯ, ಹಿಂದುತ್ವದ ಹೆಸರಲ್ಲಿ ಯುವಕರನ್ನು ಬಡಿದೆಬ್ಬಿಸಿದ್ದ ಹಿಂದು ಮಹಾಸಭಾ ಈಗ ನಾಯಕರ ನಡುವಲ್ಲೇ ಕಚ್ಚಾಟಕ್ಕೆ ವೇದಿಕೆಯಾಗಿದ್ದಲ್ಲದೆ, ದೇವಸ್ಥಾನ ಒಡೆದು ಹಾಕಿದ ವಿಚಾರವನ್ನು ಖಂಡಿಸುವ ಭರದಲ್ಲಿ ಯಾರದೋ ದಾಳಕ್ಕೆ ತುತ್ತಾಗಿ ಪೊಲೀಸ್ ಕೇಸು ಜಡಿದುಕೊಂಡಿದ್ದಾರೆ. ಪ್ರಚಾರದ ಹುಚ್ಚು ಮತ್ತು ನಾಯಕರಾಗುವ ಹಪಹಪಿಯಲ್ಲಿ ನೂರು ವರ್ಷ ಹಳೇಯ ಸಂಘಟನೆ ಒಂದನ್ನು ಯಾರೋ ಕೆಲವರು ಸೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆರೆಸ್ಸೆಸ್ ಸಂಘಟನೆ ಬಲಗೊಳ್ಳುವುದಕ್ಕೂ ಮೊದಲೇ ಹಿಂದು ಮಹಾಸಭಾ ದೇಶದಲ್ಲಿ ಹಿಂದುತ್ವದ ಕಹಳೆ ಊದಿತ್ತು. ಭಾರತ - ಪಾಕ್ ವಿಭಜನೆಯಾದ ಹೊತ್ತಲ್ಲಿ ನಿಗೂಢ ಕಾರ್ಯಾಚರಣೆ ನಡೆಸಿ, ಹಿಂದುಗಳಿಗೆ ಪ್ರತ್ಯೇಕ ಪಕ್ಷ, ಸಂಘಟನೆ ಸ್ಥಾಪನೆಯ ಅಗತ್ಯವನ್ನು ಸಾರಿಹೇಳಿದ್ದ ಹಿಂದು ಮಹಾಸಭಾದ ಇಂದಿನ ಸ್ಥಿತಿ ಮಾತ್ರ ಯಾರಿಗೂ ಬೇಡ. 

Read: ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ, ಹಿಂದುಗಳಿಗೆ ಅನ್ಯಾಯ ಎಸಗಿದ ನಿಮ್ಮನ್ನು ಬಿಡುತ್ತೇವಾ – ಬಿಜೆಪಿ ವಿರುದ್ಧ ಕಿಡಿಕಾರಿದ ಹಿಂದು ಮಹಾಸಭಾ

Mangalore Hindu Mahasabha Leaders divide  after internal clash causes major trouble for Dharmendra.