ಸುಬ್ರಹ್ಮಣ್ಯ, ಧರ್ಮಸ್ಥಳ ವಾರಾಂತ್ಯ ನಿರ್ಬಂಧ ತೆರವು ; ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇದ್ದವರಿಗೆ ಮಾತ್ರ ಸೇವೆ ಅವಕಾಶ !

18-09-21 09:25 pm       Mangaluru Correspondent   ಕರಾವಳಿ

ಕೋವಿಡ್ ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ವಿಧಿಸಿದ್ದ ವಾರಾಂತ್ಯ ನಿರ್ಬಂಧಗಳನ್ನು ತೆರವುಗೊಳಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.

ಮಂಗಳೂರು, ಸೆ.18 : ಕೋವಿಡ್ ಸೋಂಕು ಇಳಿಕೆಯಾದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ವಿಧಿಸಿದ್ದ ವಾರಾಂತ್ಯ ನಿರ್ಬಂಧಗಳನ್ನು ತೆರವುಗೊಳಿಸಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶ ಹೊರಡಿಸಿದ್ದಾರೆ. ಕೆಲವು ಷರತ್ತುಗಳನ್ನು ವಿಧಿಸಿ ಸೇವೆ ಹಾಗೂ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಅವಕಾಶ ನೀಡಿದ್ದಾರೆ.

ದೇವಾಲಯಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಬಗ್ಗೆ ಆಡಳಿತ ವರ್ಗವು ಜವಾಬ್ದಾರಿ ಹೊಂದಿರತಕ್ಕದ್ದು. ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಅರ್ಚಕರು, ಸಿಬ್ಬಂದಿ ಸೇರಿದಂತೆ ಎಲ್ಲರೂ ಪ್ರತಿ 15 ದಿನಗಳಿಗೊಮ್ಮೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿ ನೆಗೆಟಿವ್ ವರದಿಯನ್ನು ಹೊಂದುವುದನ್ನು ಕಡ್ಡಾಯಗೊಳಿಸಲಾಗಿದೆ.

ದೇವಾಲಯಗಳಿಗೆ ಬರುವ ಭಕ್ತರು ಎರಡು ಡೋಸ್ ಲಸಿಕೆ ಪಡೆದಿದ್ದರೂ 72 ಗಂಟೆಗಳಿಗಿಂತ ಮುಂಚಿತ ಆರ್‌ಟಿ-ಪಿಸಿಆರ್ ನೆಗೆಟಿವ್ ವರದಿ ಹೊಂದಿದ್ದಲ್ಲಿ ಮಾತ್ರ ಸೇವೆಗೆ ಅವಕಾಶ ನೀಡಬೇಕು. ಭಕ್ತರಿಗೆ ಲಸಿಕೆ ಪಡೆಯುವ ಬಗ್ಗೆ ಸಲಹೆಗಳನ್ನು ನೀಡುವ ಕುರಿತು ಹಾಗೂ ಜಾಗೃತಿ ಮೂಡಿಸಲು ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ದೇವಾಲಯಕ್ಕೆ ಬರುವ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯದಿದ್ದಲ್ಲಿ ಅಂತಹವರಿಗೆ ಲಸಿಕೆ ನೀಡಲು ಅನುಕೂಲವಾಗುವಂತೆ ಸಂಬಂಧಪಟ್ಟ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ದೇವಸ್ಥಾನಗಳಲ್ಲಿ ಕೋವಿಡ್ ಲಸಿಕೆ ಕೇಂದ್ರ ತೆರೆಯಲು ಕ್ರಮ ವಹಿಸಬೇಕು.

ದೇವಾಲಯಗಳಲ್ಲಿ ನಡೆಯುವ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ ಸಹಿತ ವಿವಿಧ ಸೇವೆಗಳನ್ನು ಆದಷ್ಟು ಮಿತಿಗೊಳಿಸಿ, ಜನಸಂದಣಿಯಾಗದಂತೆ ಕನಿಷ್ಠ ಸಂಖ್ಯೆಯಲ್ಲಿ ಸೇವೆಗಳನ್ನು ನಡೆಸಲು ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

Devotees permitted to enter Kukke Shri Subrahmanya Temple and Dharmasthala with covid 19 report orders Mangalore Dc Dr Rajendra.