ಕಾಪು ಮೂಲದ ಆಯುರ್ವೇದ ವೈದ್ಯೆಗೆ ಯುಎಇ ಸರಕಾರದಿಂದ ಗೋಲ್ಡನ್ ವೀಸಾ ಗೌರವ

18-09-21 08:33 pm       Headline Karnataka News Network   ಕರಾವಳಿ

ಕಾಪು ಮೂಲದ ಆಯುರ್ವೇದ ವೈದ್ಯೆ ಡಾ. ಇನ್ಶಾ ಹುದಾ ತಮ್ಮ ವೈದ್ಯಕೀಯ ಸೇವೆಗಾಗಿ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಸರಕಾರದಿಂದ ‘ಗೋಲ್ಡನ್ ವೀಸಾ ಸಮ್ಮಾನ್’ ಪಡೆದಿದ್ದು ಕರಾವಳಿ ಕರ್ನಾಟಕಕ್ಕೆ ಹೆಮ್ಮೆ ಮೂಡಿಸಿದ್ದಾರೆ. 

ಉಡುಪಿ, ಸೆ.17 : ಕಾಪು ಮೂಲದ ಆಯುರ್ವೇದ ವೈದ್ಯೆ ಡಾ. ಇನ್ಶಾ ಹುದಾ ತಮ್ಮ ವೈದ್ಯಕೀಯ ಸೇವೆಗಾಗಿ ಸಂಯುಕ್ತ ಅರಬ್ ಗಣರಾಜ್ಯ (ಯುಎಇ) ಸರಕಾರದಿಂದ ‘ಗೋಲ್ಡನ್ ವೀಸಾ ಸಮ್ಮಾನ್’ ಪಡೆದಿದ್ದು ಕರಾವಳಿ ಕರ್ನಾಟಕಕ್ಕೆ ಹೆಮ್ಮೆ ಮೂಡಿಸಿದ್ದಾರೆ. 

ಡಾ.ಇನ್ಶಾ ಹುದಾ ಉಡುಪಿ ಜಿಲ್ಲೆಯ ಕಾಪು ಮೂಲದವರಾಗಿದ್ದು ಹೆತ್ತವರು ಪೀರ್ ಮುಹಮ್ಮದ್ ಹಾಗೂ ಗುಲ್ಶನ್ ಮುಹಮ್ಮದ್ ಮಧ್ಯಮ ವರ್ಗದವರು. ಡಾ.ಹುದಾ ಅವರು ತನ್ನೆಲ್ಲಾ ಯಶಸ್ಸು, ಸಾಧನೆಗೆ ಹೆತ್ತವರು ಹಾಗೂ ನಿವೃತ್ತ ಅರಣ್ಯಾಧಿಕಾರಿಯಾಗಿದ್ದ ಅಜ್ಜ ಹಾಜಿ ಅಬ್ದುಲ್ಲ ಖಾದರ್ ಅವರೇ ಕಾರಣ ಎಂದು ಹೇಳುತ್ತಾರೆ. 

ಉಡುಪಿ ವಿದ್ಯಾನಿಕೇತನದಲ್ಲಿ ತನ್ನ ಪ್ರಾಥಮಿಕ ಕಲಿಕೆ ಪೂರೈಸಿದ ಅವರು ಮುಂದೆ ಕುತ್ಪಾಡಿಯ ಎಸ್‌ಡಿಎಂ ಕಾಲೇಜಿನಲ್ಲಿ ಮೆರಿಟ್ ಸೀಟ್‌ನೊಂದಿಗೆ ಆಯುರ್ವೇದ ಸೀಟನ್ನು ಪಡೆದು 2011ರಲ್ಲಿ ಬಿಎಎಂಎಸ್ ಪದವಿ ಪಡೆದಿದ್ದರು. ಆನಂತರ ಮದುವೆಯಾಗಿ ಒಂದು ಮಗುವಿನ ತಾಯಿಯಾಗಿದ್ದು ಉನ್ನತ ಶಿಕ್ಷಣವನ್ನು ಮುಂದುವರಿಸಿದ ಡಾ.ಹುದಾ, 2015ರಲ್ಲಿ ಮಣಿಪಾಲ ವಿವಿ ಮೂಲಕ ಕೆಎಂಸಿಯಲ್ಲಿ ಪಂಚಕರ್ಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

2017ರಲ್ಲಿ ಯುಎಇಯಲ್ಲಿ ಅಲ್ಲಿನ ಆರೋಗ್ಯ ಸಚಿವಾಲಯ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾದ ಡಾ.ಹುದಾ, ಆ ದೇಶದಲ್ಲಿ ಆಯುರ್ವೇದ ಚಿಕಿತ್ಸೆ ನೀಡಲು ಪರವಾನಿಗೆಯನ್ನು ಪಡೆದು ಆಯುರ್ವೇದ ಚಿಕಿತ್ಸಾ ಪದ್ಧತಿ ಮೂಲಕ ಚರ್ಮ ರೋಗ, ಬೊಜ್ಜುಗೆ ಚಿಕಿತ್ಸೆ, ಸಂಧಿವಾತ, ಸ್ವಯಂನಿರೋಧಕ ಕಾಯಿಲೆ, ಆತಂಕ, ಖಿನ್ನತೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಜನಪ್ರಿಯತೆಯನ್ನು ಪಡೆದರು. ಅಲ್ಲದೇ ಯೋಗದ ಮೂಲಕ ಬೆನ್ನುಹುರಿ ಸಮಸ್ಯೆಗೆ ನೀಡುತಿದ್ದ ಚಿಕಿತ್ಸೆ ರೋಗಿಗಳಿಂದ ಭಾರೀ ಮೆಚ್ಚುಗೆ ಪಡೆದಿತ್ತು.

ಆಯುಷ್ ವಿಶ್ವ ಸಮ್ಮೇಳನದಲ್ಲಿ ಜೀವನಶೈಲಿ ರೋಗಗಳ ಕುರಿತಂತೆ ಡಾ. ಹುದಾ ಮಂಡಿಸಿದ ಪ್ರಬಂಧ ಮೆಚ್ಚುಗೆಗೆ ಪಾತ್ರವಾಗಿತ್ತು. ಸದ್ಯಕ್ಕೆ ಡಾ. ಹುದಾ ಅವರು ಯುಎಇಯ ಎಮಿರೆಟ್ಸ್ ಆಯುರ್ವೇದಿಕ್ ಗ್ರಾಜುವೇಟ್ ಅಸೋಸಿಯೇಷನ್ (ಇಎಜಿಎ) ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಭರತನಾಟ್ಯ, ಯಕ್ಷಗಾನ ಪ್ರವೀಣೆ

ಡಾ.ಹುದಾ ಕೇವಲ ಆಯುರ್ವೇದ ಕ್ಷೇತ್ರದಲ್ಲಿ ಮಾತ್ರ ಪರಿಣಿತೆ, ತಜ್ಞೆಯಲ್ಲ. ಆಕೆ ಉತ್ತಮ ಭರತನಾಟ್ಯ ನೃತ್ಯಗಾತಿ ಹಾಗೂ ಯಕ್ಷಗಾನ ಕಲಾವಿದೆಯೂ ಆಗಿದ್ದಾರೆ. ಇದಲ್ಲದೆ, ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.

In what can be called a proud moment for Coastal Karnataka, Dr Einsha Huda from Kaup, has been awarded a golden visa by the UAE government. She is the first Ayurvedic doctor to be honoured with the golden visa from the twin districts.