ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ; 33 ಸಾವಿರ ವೋಲ್ಟ್ ಕಂಬಕ್ಕೇರಿ ಸುಟ್ಟುಹೋದ ಗುತ್ತಿಗೆ ಕಾರ್ಮಿಕ !

15-09-21 06:02 pm       Mangaluru Correspondent   ಕರಾವಳಿ

ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗುತ್ತಿಗೆ ಕಾರ್ಮಿಕನೊಬ್ಬ 33,000 ವೋಲ್ಟ್ ವಿದ್ಯುತ್ ಹರಿಯುವ ಕಂಬಕ್ಕೇರಿ ಭಾಗಶಃ ಸುಟ್ಟು ಹೋದ ಘಟನೆ ಚೆಂಬುಗುಡ್ಡೆ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದಿದೆ. 

ಉಳ್ಳಾಲ, ಸೆ.15: ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗುತ್ತಿಗೆ ಕಾರ್ಮಿಕನೊಬ್ಬ 33,000 ವೋಲ್ಟ್ ವಿದ್ಯುತ್ ಹರಿಯುವ ಕಂಬಕ್ಕೇರಿ ಭಾಗಶಃ ಸುಟ್ಟು ಹೋದ ಘಟನೆ ತೊಕ್ಕೊಟ್ಟಿನ ಚೆಂಬುಗುಡ್ಡೆ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ನಡೆದಿದೆ. 

ಹಾವೇರಿ ಜಿಲ್ಲೆ, ಶಿಗ್ಗಾಂವಿ ತಾಲೂಕು ಮಣಿಕಟ್ಟೆ ನಿವಾಸಿ ಬೊಮ್ಮಪ್ಪ(26) ವಿದ್ಯುತ್ ಅವಘಡಕ್ಕೆ ಭಾಗಶಃ ಸುಟ್ಟು ಆಸ್ಪತ್ರೆ ಸೇರಿದ ದುರ್ದೈವಿ. ಬೊಮ್ಮಪ್ಪ ಅವರು ಪ್ರವೀಣ್ ಸುವರ್ಣ ಎಂಬ ಮೆಸ್ಕಾಂ ಗುತ್ತಿಗೆದಾರರ ಜೊತೆ ಕಳೆದ ಐದು ತಿಂಗಳುಗಳಿಂದ ಚೆಂಬುಗುಡ್ಡೆ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. ಇಂದು ಸಂಜೆ ಇತರ ಕಾರ್ಮಿಕರ ಜೊತೆ ಬೊಮ್ಮಪ್ಪ ಮೆಸ್ಕಾಂ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. 

ಈ ವೇಳೆ ಕಚೇರಿಯ ಅಂಗಣದಲ್ಲಿರುವ 33,000 ವೋಲ್ಟ್ ಯಾರ್ಡ್ ನಲ್ಲಿರುವ ಕಂಬಕ್ಕೆ ಏರಿ ಜಂಪರ್ ಟೈಟ್ ಮಾಡುವಂತೆ ಮೆಸ್ಕಾಂ ನ ಎಇಇ ದಯಾನಂದ್ ಎಂಬವರು ಹೇಳಿದ್ದಾರೆ ಎನ್ನಲಾಗುತ್ತಿದೆ. ಹೈ ವೋಲ್ಟ್ ವಿದ್ಯುತ್ ಹರಿಯುತ್ತಿದ್ದರೂ ಲೈನ್ ಆಫ್ ಆಗಿದೆ ಎಂದು ಹೇಳಿ ಕಂಬಕ್ಕೇರಿದ್ದು ಕೆಲವೇ ಕ್ಷಣಗಳಲ್ಲಿ ಇತರ ಕಾರ್ಮಿಕರ ಎದುರೇ  ಸುಟ್ಟು ಹೋಗಿದ್ದರು.

ಕೂಡಲೇ ಮೆಸ್ಕಾಂ ಸಿಬ್ಬಂದಿ ಬೊಮ್ಮಪ್ಪನನ್ನ ಕೆಳಗಿಳಿಸಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿದ್ಯುತ್ ಆಘಾತಕ್ಕೆ ಬೊಮ್ಮಪ್ಪ ಅವರ ಸೊಂಟಕ್ಕಿಂತ ಕೆಳಗಿನ ಭಾಗ ಸಂಪೂರ್ಣ ಸುಟ್ಟು ಹೋಗಿದ್ದು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಿ ಮೈಸೂರ್ ಇಲೆಕ್ಟ್ರಿಕಲ್ಸ್ ಲಿ. ನ ಅಧ್ಯಕ್ಷರಾದ ಸಂತೋಷ್ ಬೋಳಿಯಾರ್, ಬಿಜೆಪಿ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಸ್ಥಳೀಯ ಕೌನ್ಸಿಲರ್ ರಾಜೇಶ್ ಯು.ಬಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೆಸ್ಕಾಂ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

Mangalore Thokottu MESCOM Contractor staff  Electrocuted after touching 33 thousand vats current illegally. The person is said to be critically and has been admitted to the local hospital.