ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ನಾರಾಯಣಗುರು ಸ್ಮರಣೆ ; ಔಷಧೀಯ ಸಸ್ಯ ಬೆಳೆಸಲು ಪಣ

03-09-21 05:59 pm       Mangaluru Correspondent   ಕರಾವಳಿ

ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಮತ್ತು ಉಳ್ಳಾಲ ಜುಮಾ ಮಸೀದಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಉಳ್ಳಾಲ ದರ್ಗಾ ವಠಾರದಲ್ಲಿ ಔಷಧೀಯ ಸಸಿಗಳನ್ನು ನೆಡಲಾಯಿತು. 

ಉಳ್ಳಾಲ, ಸೆ.3: ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಮತ್ತು ಉಳ್ಳಾಲ ಜುಮಾ ಮಸೀದಿ ಆಶ್ರಯದಲ್ಲಿ ಕುದ್ರೋಳಿ ಕ್ಷೇತ್ರದ ಗುರುಬೆಳದಿಂಗಳು ಸೇವಾ ಸಂಸ್ಥೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಉಳ್ಳಾಲ ದರ್ಗಾ ವಠಾರದಲ್ಲಿ ಔಷಧೀಯ ಸಸಿಗಳನ್ನು ನೆಡಲಾಯಿತು. 

ಗುರುಬೆಳದಿಂಗಳು ಸೇವಾ ಸಂಸ್ಥೆ ಅಧ್ಯಕ್ಷರು ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಖಜಾಂಚಿ ಆರ್.ಪದ್ಮರಾಜ್ ಮಾತನಾಡಿ ನಾರಾಯಣ ಗುರುಗುಳ ತತ್ವ , ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು. ನಮ್ಮ ದೇಶವು ವಿವಿಧತೆಯಲ್ಲಿ ಏಕತೆ ಹೊಂದಿದೆ. ನಾವೆಲ್ಲರು ಜಾತಿ, ಧರ್ಮ ಮರೆತು ಜೊತೆಯಾಗಿ ನಡೆಯಬೇಕು. ಈ ಅರ್ಥಪೂರ್ಣ ಕಾರ್ಯದ ಸಂದೇಶವು ನಮ್ಮ ಜಿಲ್ಲೆಯಿಂದ ದೇಶಕ್ಕೆ ರವಾನಿಸುವಂತಾಗಬೇಕು ಎಂದರು.

ಶಾಸಕ ಯು.ಟಿ ಖಾದರ್ ಮಾತನಾಡಿ ಇಂದು ಸಮಾಜಕ್ಕೆ ಸೌಹಾರ್ದ, ಸಹೋದರತ್ವದ ಅಗತ್ಯ ಕಾಣುತ್ತಿದೆ. ನಮ್ಮ ಮುಂದಿನ ಪೀಳಿಗೆ ಸೌಹಾರ್ದದ ಸಮಾಜ ನಿರ್ಮಾಣ ಮಾಡಬೇಕಾದರೆ ಮೊದಲು ನಾವು ಸೌಹಾರ್ದದ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಜಾತಿ, ಧರ್ಮ ಆಧಾರದಲ್ಲಿ ನಮ್ಮನ್ನು ವಿಭಾಗಿಸುವವರನ್ನ ಎಲ್ಲರೂ ಜೊತೆಯಾಗಿ ಹಿಮ್ಮೆಟ್ಟಿಸಬೇಕು ಎಂದರು.‌

ರಾಜ್ಯಸಭಾ ಪ್ರತಿಪಕ್ಷದ ಮುಖ್ಯ ಸಚೇತಕ ಡಾ.ಸಯ್ಯದ್ ನಾಸಿರ್ ಹುಸೇನ್, ಉಳ್ಳಾಲ ದರ್ಗಾ ಅಧ್ಯಕ್ಷರಾದ ರಶೀದ್ ಹಾಜಿ , ಉಪಾಧ್ಯಕ್ಷರಾದ ಯು.ಕೆ.ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ತ್ವಾಹ, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ,  ಕೋಶಾಧಿಕಾರಿ ಯು.ಕೆ.ಇಲ್ಯಾಸ್, ನಗರಸಭಾ ಅಧ್ಯಕ್ಷೆ ಚಿತ್ರಕಲಾ , ಉಪಾಧ್ಯಕ್ಷರಾದ ಆಯೂಬ್ ಮಂಚಿಲ ಮೊದಲಾದವರು ಉಪಸ್ಥಿತರಿದ್ದರು.

ಕುದ್ರೋಳಿಯ ಗುರುಬೆಳದಿಂಗಳು ಸೇವಾ ಸಂಸ್ಥೆಯ ವತಿಯಿಂದ ಚರ್ಚ್, ದರ್ಗಾ, ಬಸದಿ,  ದೈವಸ್ಥಾನ, ದೇವಸ್ಥಾನ, ಗುರುದ್ವಾರ, ಗರೋಡಿಗಳಲ್ಲಿ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆಗೆ ಇಂದು‌ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ, ಗುರುಪೂಜೆ ನೇರವೇರಿಸಿ, ಶ್ರೀ ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರದಲ್ಲಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.

Ullal sayed mdani darga places Narayana Guru statue In memory