ಅಡಿಕೆ ಎಲೆ ಚುಕ್ಕಿ, ಹಳದಿ ಎಲೆ ರೋಗ ; ರೈತರ ಕಷ್ಟಕ್ಕೆ ತುರ್ತು ಸ್ಪಂದಿಸಲು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಗೆ ಸಂಸದ ಚೌಟ ಮನವಿ, ವಿಶೇಷ ಪ್ಯಾಕೇಜ್ ಘೋಷಣೆಗೆ ಒತ್ತಾಯ

10-06-26 05:07 pm       HK News Staffer   ಕರಾವಳಿ

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ 'ಹಳದಿ ರೋಗ' ಮತ್ತು 'ಎಲೆ ಚುಕ್ಕಿ ರೋಗ' ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳೂರು, ಜೂನ್ 10: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಸಾವಿರಾರು ಅಡಿಕೆ ಬೆಳೆಗಾರರಿಗೆ ತೀವ್ರ ಆತಂಕ ತಂದೊಡ್ಡಿರುವ 'ಹಳದಿ ರೋಗ' ಮತ್ತು 'ಎಲೆ ಚುಕ್ಕಿ ರೋಗ' ಸಮಸ್ಯೆಗೆ ತುರ್ತು ಪರಿಹಾರ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್  ಅವರಿಗೆ ಮನವಿ ಸಲ್ಲಿಸಿದ್ದಾರೆ.

ರಾಜ್ಯದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಈ ರೋಗಗಳ ವ್ಯಾಪಕ ಹರಡುವಿಕೆಯಿಂದಾಗಿ ರೈತರು ಎದುರಿಸುತ್ತಿರುವ ಗಂಭೀರ ಆರ್ಥಿಕ ಮತ್ತು ಕೃಷಿ ಸಮಸ್ಯೆಗಳನ್ನು ಕ್ಯಾ. ಬ್ರಿಜೇಶ್ ಚೌಟ ಮನವಿಯಲ್ಲಿ ಪ್ರಸ್ತಾಪಿಸಿದ್ದಾರೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಳದಿ ಎಲೆ ರೋಗವು ಪ್ರಸ್ತುತ ಸುಮಾರು 16,000 ಹೆಕ್ಟೇರ್ ಪ್ರದೇಶವನ್ನು ಬಾಧಿಸಿದ್ದು, ಇದು ಲಕ್ಷಾಂತರ ರೈತರ ಆರ್ಥಿಕ ಸ್ಥಿತಿಯನ್ನು ಹದಗೆಡುವಂತೆ ಮಾಡಿದೆ. ರೋಗಕ್ಕೆ ಕಾರಣವಾಗಿರುವ 'ಫೈಟೋಪ್ಲಾಸ್ಮಾ' ಸೋಂಕು ನಿರ್ಮೂಲನೆಗೆ ಕ್ರಮಗಳಿಲ್ಲ. ಐಸಿಎಆರ್–ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್(CPCRI) ಸಂಸ್ಥೆಯು ಅಭಿವೃದ್ಧಿಪಡಿಸಿರುವ ನಿರ್ವಹಣಾ ವಿಧಾನಗಳೇ ಬಾಧಿತ ಬೆಳೆಗಾರರ ಪಾಲಿನ ಏಕೈಕ ಆಶಾಕಿರಣವಾಗಿದೆ. ಇದಕ್ಕೆ ಪೂರಕವಾಗಿ ವಿಟ್ಲದಲ್ಲಿ ಅತ್ಯಾಧುನಿಕ ರೋಗನಿರ್ಣಯ ಪ್ರಯೋಗಾಲಯ ಸ್ಥಾಪಿಸಲಾಗಿದೆ. 

ಹಳದಿ ಎಲೆ ರೋಗವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಗಿಡಗಳ ಅಂಗಾಂಶ ಕೃಷಿ ತಂತ್ರಜ್ಞಾನದ ಮೂಲಕ ಯಶಸ್ವಿ ಮರುಸೃಷ್ಟಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಹಳದಿ ರೋಗ ನಿಯಂತ್ರಣಕ್ಕೆ ಸುಧಾರಿತ ತಂತ್ರಜ್ಞಾನಗಳು, ಹೈಟೆಕ್ ನೀರಾವರಿ ವ್ಯವಸ್ಥೆ ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣಾ ಪದ್ಧತಿಗಳನ್ನು ರೈತರು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಭಾರಿ ಸಾಂಸ್ಥಿಕ ಹಾಗೂ ಆರ್ಥಿಕ ನೆರವಿನ ಅಗತ್ಯವಿದೆ. ಆದ್ದರಿಂದ ಬಾಧಿತ ರೈತರಿಗೆ ನೆರವಾಗಲು ಸಮಗ್ರ ಬೆಂಬಲ ಪ್ಯಾಕೇಜ್ ಘೋಷಿಸಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.

ಇದರ ಜೊತೆಗೆ ದಕ್ಷಿಣ ಕನ್ನಡ ಹಾಗೂ ಮಲೆನಾಡು ಭಾಗದಲ್ಲಿ ಹರಡುತ್ತಿರುವ 'ಎಲೆ ಚುಕ್ಕಿ ರೋಗ' ನಿಯಂತ್ರಣದ ಕುರಿತಂತೆ ಸಂಸದರು ಕೃಷಿ ಸಚಿವರ ಗಮನಕ್ಕೆ ತಂದಿದ್ದಾರೆ. 2023ರಲ್ಲಿ ಕೇಂದ್ರ ಸರ್ಕಾರವು ಐಸಿಎಆರ್- ಸಿಪಿಸಿಆರ್‌ಐ ತಜ್ಞರ ಸಮಿತಿಯ ವರದಿ ಆಧರಿಸಿ ವೈಜ್ಞಾನಿಕ ನಿರ್ವಹಣಾ ಮಾರ್ಗಸೂಚಿಗಳನ್ನು ಸಿದ್ಧಪಡಿಸಿತ್ತು. ಇದೇ ವೇಳೆ ಶೋಭಾ ಕರಂದ್ಲಾಜೆ ಕೇಂದ್ರ ಕೃಷಿ ಸಹಾಯಕ ಸಚಿವೆಯಾಗಿದ್ದ ಸಂದರ್ಭದಲ್ಲಿ 60:40ರ ಅನುಪಾತದ ಧನ ಸಹಾಯದ ಸೂತ್ರದಡಿ ₹225 ಕೋಟಿ ಅನುದಾನವನ್ನೂ ಮಂಜೂರು ಮಾಡಿತ್ತು. ಆದರೆ, ಈ ಅನುದಾನವನ್ನು 'ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್‌ಮೆಂಟ್ ಆಫ್ ಹಾರ್ಟಿಕಲ್ಚರ್' (MIDH) ಮಾರ್ಗಸೂಚಿಗಳಿಗೆ ಲಿಂಕ್ ಮಾಡಲಾಗಿತ್ತು. ಇದರ ನಿಯಮಗಳ ಪ್ರಕಾರ ಸಸ್ಯ ಸಂರಕ್ಷಣೆಗೆ ಪ್ರತಿ ಹೆಕ್ಟೇರ್‌ಗೆ ಗರಿಷ್ಠ ₹1,500 ಮಾತ್ರ ವೆಚ್ಚ ಮಾಡಲು ಅವಕಾಶವಿತ್ತು. 

ಆದರೆ, ಸಿಪಿಸಿಆರ್‌ಐ ಲೆಕ್ಕಾಚಾರದ ಪ್ರಕಾರ, ವಿಶೇಷ ಶಿಲೀಂಧ್ರನಾಶಕಗಳು ಮತ್ತು ಪೋಷಕಾಂಶಗಳ ನಿರ್ವಹಣೆಯನ್ನೊಳಗೊಂಡ ಸಮಗ್ರ ನಿಯಂತ್ರಣದ ವೆಚ್ಚವು ಈ ಮಿತಿಗಿಂತ ಹೆಚ್ಚಾಗಿತ್ತು. ಈ ತಾಂತ್ರಿಕ ಅಡಚಣೆಯಿಂದಾಗಿ ನಿಗದಿತ ಉದ್ದೇಶಕ್ಕೆ ಬಳಸಲು ಸಾಧ್ಯವಾಗದೇ 2023ರ ಅನುದಾನವು ಸರ್ಕಾರಕ್ಕೆ ವಾಪಾಸ್ಸಾಗಿತ್ತು. ಹೀಗಿರುವಾಗ ಇದು ರೈತರನ್ನು ಮತ್ತಷ್ಟು ಕಂಗಾಲಾಗುವಂತೆ ಮಾಡಿದೆ.

ಈ ವಿಶೇಷ ಪರಿಸ್ಥಿತಿಯನ್ನು ಪರಿಗಣಿಸಿ, ಎಲೆ ಚುಕ್ಕಿ ರೋಗಕ್ಕೆ ಮಾತ್ರ ಅನ್ವಯವಾಗುವಂತೆ ಸಾಮಾನ್ಯ ಎಂಐಡಿಹೆಚ್ ವೆಚ್ಚದ ಮಿತಿಯಿಂದ ವಿಶೇಷ ವಿನಾಯಿತಿ ನೀಡಿ ಈ ಹಿಂದೆ ಬಿಡುಗಡೆಗೊಂಡಿದ್ದ, ಅನುದಾನವನ್ನು ಮರು ಬಿಡುಗಡೆ ಮಾಡಲು ತುರ್ತಾಗಿ ಮಧ್ಯಪ್ರವೇಶಿಸಬೇಕು. ಸಿಪಿಸಿಆರ್‌ಐ ಶಿಫಾರಸು ಮಾಡಿದ ನಿಜವಾದ ವೆಚ್ಚಕ್ಕೆ ಅನುಗುಣವಾಗಿ ಆರ್ಥಿಕ ಸಹಾಯವನ್ನು ಒದಗಿಸುವುದು ರೋಗ ನಿಯಂತ್ರಣ ಕಾರ್ಯಕ್ರಮದ ಯಶಸ್ಸಿಗೆ ಮತ್ತು ಅಡಿಕೆ ವಲಯದ ಉಳಿವಿಗೆ ಅತ್ಯಂತ ಅತ್ಯಗತ್ಯವಾಗಿದೆ ಎಂದು ಕ್ಯಾ. ಬ್ರಿಜೇಶ್ ಚೌಟ ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ. 

ಕೇಂದ್ರ ಕೃಷಿ ಸಚಿವರಿಗೆ ಆಹ್ವಾನ 

ಕರಾವಳಿ ಕರ್ನಾಟಕದ ಆರ್ಥಿಕತೆಯಲ್ಲಿ ಅಡಿಕೆ ಕೃಷಿಯ ಪ್ರಾಮುಖ್ಯತೆ ಪರಿಗಣಿಸಿ, ಇಲ್ಲಿರುವ ವಾಸ್ತವಿಕ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಲು ಆದಷ್ಟು ಬೇಗ ಮಂಗಳೂರಿಗೆ ಭೇಟಿ ನೀಡುವಂತೆ ಸಂಸದರು ಕೇಂದ್ರ ಕೃಷಿ ಸಚಿವರಲ್ಲಿ ಮನವಿ ಮಾಡಿದ್ದಾರೆ. ಕೇಂದ್ರ ಕೃಷಿ ಸಚಿವಾಲಯ, ಐಸಿಎಆರ್, ಸಿಪಿಸಿಆರ್‌ಐ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳ ಸಮನ್ವಯದೊಂದಿಗೆ ಜಂಟಿ ಕ್ರಮ ಕೈಗೊಂಡು, ವಿಜ್ಞಾನಿಗಳು ಮತ್ತು ತೊಂದರೆಗೊಳಗಾದ ರೈತರೊಂದಿಗೆ ಸಂವಾದ ನಡೆಸುವುದರಿಂದ ಈ ಸಮಸ್ಯೆ ಕುರಿತು ವಾಸ್ತವಿಕ ನಿಖರ ಮಾಹಿತಿ ಲಭ್ಯವಾಗಲಿವೆ; ಇದು ರೋಗ ನಿಯಂತ್ರಣ ಕಾರ್ಯ ಬಲಪಡಿಸಿ ರೈತರ ಹಿತರಕ್ಷಿಸಲು ಪ್ರಬಲ ಯೋಜನೆಯನ್ನು ರೂಪಿಸುವ ಮೂಲಕ ಅಡಿಕೆ ವಲಯದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದು ಕ್ಯಾ.  ಚೌಟ ವಿಶ್ವಾಸ ವ್ಯಕ್ತಪಡಿಸಿದ್ದಾರೆ.