'ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆ' ಎಂದು ಪೋಸ್ಟ್ ಹಾಕಿದ್ದ ಕಿಡಿಗೇಡಿ ಭಟ್ಕಳದಲ್ಲಿ ಬಂಧನ; ಉಳ್ಳಾಲ ಪೊಲೀಸರ ಕಾರ್ಯಾಚರಣೆ

03-03-26 08:42 pm       HK News Staffer   ಕರಾವಳಿ

ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ್ದ ಕಿಡಿಗೇಡಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಉಳ್ಳಾಲ, ಮಾ.03: ಉಳ್ಳಾಲದ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಸಂದೇಶ ರವಾನಿಸಿದ್ದ ಕಿಡಿಗೇಡಿಯನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಉತ್ತರ ಕನ್ನಡದ ಭಟ್ಕಳ ದೇವಿನಗರ, ಜಾಲಿ ನಿವಾಸಿ ಶಂಕರ್ ಮಾಸ್ತಪ್ಪ ಮೊಗೇರ್ (35)‌ಬಂಧಿತ ಆರೋಪಿ. ಬಜ್ಪೆಯಲ್ಲಿ ಕಳೆದ ವರ್ಷ ದುಷ್ಕರ್ಮಿಗಳಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದ ಸುಹಾಸ್ ಶೆಟ್ಟಿಯ ಭಾವಚಿತ್ರವುಳ್ಳ ಇನ್ಸ್ಟಾ ಪೋಸ್ಟ್ ಒಂದರಲ್ಲಿ ಬಂಧಿತ ಆರೋಪಿ ಶಂಕರ್ ಎಂಬವನು shankar11916 ಎಂಬ ಇನ್ಸ್ಟಾ ಖಾತೆಯಿಂದ "ಸಪೋರ್ಟ್ ಮಾಡಿ ಬ್ರೋ ಉಳ್ಳಾಲ ಮಸ್ಜಿದ್ ಹತ್ರ ಬಾಂಬ್ ಬ್ಲಾಸ್ಟ್ ಮಾಡ್ತೀನಿ" ಎಂಬ ಪ್ರಚೋದನಕಾರಿ ಸಂದೇಶವನ್ನು ಹಾಕಿದ್ದ.

ಈ ಸಂದೇಶವು ವೈರಲ್ ಆಗುತ್ತಿದ್ದಂತೆಯೇ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಉಳ್ಳಾಲ ಪೊಲೀಸರು ಕಿಡಿಗೇಡಿ ವಿರುದ್ಧ ಸೋಮವಾರ ಸುಮೊಟೊ ಪ್ರಕರಣ ದಾಖಲಿಸಿದ್ದರು. ಧರ್ಮಗಳ ನಡುವೆ ದ್ವೇಷ ಬಿತ್ತಿದ ಕಿಡಿಗೇಡಿಯನ್ನು ಶೀಘ್ರವೇ ಬಂಧಿಸುವಂತೆ ಸ್ಪೀಕರ್ ಯು.ಟಿ.ಖಾದರ್ ಕೂಡ ನಗರ ಪೊಲೀಸ್ ಆಯುಕ್ತರನ್ನ ಆಗ್ರಹಿಸಿದ್ದರು.