ಮಂಗಳೂರು ಕಂಬಳದಲ್ಲಿ ಹೊಸ ಇತಿಹಾಸ ; ಹುಸೇನ್ ಬೋಲ್ಟ್ ಮೀರಿಸಿದ ಶ್ರೀನಿವಾಸ ಗೌಡರ ದಾಖಲೆ ಪುಡಿಗಟ್ಟಿದ ಸ್ವರೂಪ್, 8.69 ಸೆಕೆಂಡಿನಲ್ಲಿ 100 ಮೀಟರ್ ಓಡಿದ ಕಂಬಳ ಓಟಗಾರ !

28-12-25 09:37 pm       Mangalore Correspondent   ಕರಾವಳಿ

ನಾಲ್ಕು ವರ್ಷಗಳ ಹಿಂದೆ ಕಂಬಳದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ನೂರು ಮೀಟರ್ ಓಟವನ್ನು ಕೇವಲ 8.76 ಸೆಕೆಂಡಿನಲ್ಲಿ ಪೂರೈಸುವ ಮೂಲಕ ಜಗತ್ತಿನ ಅತಿ ವೇಗದ ಓಟಗಾರ ಹುಸೇನ್ ಬೋಲ್ಟ್ ಸಾಧನೆಯನ್ನು ಮೀರಿಸಿದ್ದು ದೇಶದ ಗಮನ ಸೆಳೆದಿತ್ತು.

ಮಂಗಳೂರು, ಡಿ.28 : ನಾಲ್ಕು ವರ್ಷಗಳ ಹಿಂದೆ ಕಂಬಳದ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ನೂರು ಮೀಟರ್ ಓಟವನ್ನು ಕೇವಲ 8.76 ಸೆಕೆಂಡಿನಲ್ಲಿ ಪೂರೈಸುವ ಮೂಲಕ ಜಗತ್ತಿನ ಅತಿ ವೇಗದ ಓಟಗಾರ ಹುಸೇನ್ ಬೋಲ್ಟ್ ಸಾಧನೆಯನ್ನು ಮೀರಿಸಿದ್ದು ದೇಶದ ಗಮನ ಸೆಳೆದಿತ್ತು. ಆದರೆ, ಕಂಬಳ ಓಟದಲ್ಲಿ ಶ್ರೀನಿವಾಸ ಗೌಡರ ದಾಖಲೆಯನ್ನು ಮೀರಿಸಿದ ಹೊಸ ದಾಖಲೆ ಮಂಗಳೂರು ಕಂಬಳದಲ್ಲಿ ದಾಖಲಾಗಿದೆ.

ಮಂಗಳೂರಿನ ಕುಳೂರಿನಲ್ಲಿ ನಡೆದ ರಾಮ ಲಕ್ಷ್ಮಣ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ 80 ಬಡಗಬೆಟ್ಟು ಶ್ರೀಕ ಸಂದೀಪ್ ಶೆಟ್ಟಿ ಅವರ ಕೋಣಗಳು 125 ಮೀಟರ್ ಉದ್ದದ ಕರೆಯನ್ನು 10.87 ಸೆಕೆಂಡುಗಳಲ್ಲಿ ಕ್ರಮಿಸಿ ನೂತನ ದಾಖಲೆ ಬರೆದಿದೆ. ಈ ಕೋಣಗಳನ್ನು ಕುಂದ ಬಾರಂದಾಡಿ ಮಾಸ್ತಿಕಟ್ಟೆ ಸ್ವರೂಪ್ ಕುಮಾರ್ ಓಡಿಸಿದ್ದು ಹೊಸ ದಾಖಲೆಗೆ ಸಾಕ್ಷಿಯಾಗಿದ್ದಾರೆ. ನೂರು ಮೀಟರ್ ಓಟವನ್ನು ಕೇವಲ 8.69 ಸೆಕೆಂಡಿನಲ್ಲಿ ಕ್ರಮಿಸಿ ಶ್ರೀನಿವಾಸ ಗೌಡರ ಸಾಧನೆಯನ್ನು ಮೀರಿಸಿದ್ದು ಮಂಗಳೂರು ಕಂಬಳದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಇದೇ ಕಂಬಳದ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಇವರದ್ದೇ ಸಂತು ಮತ್ತು ಪಾಂಚ ಕೋಣಗಳು 125 ಮೀಟರ್ ಓಟವನ್ನು 11.06 ಸೆಕೆಂಡಿನಲ್ಲಿ ಕ್ರಮಿಸಿ ಈ ಋತುವಿನ ಅತಿ ವೇಗದ ಓಟವೆಂದು ದಾಖಲೆ ಮಾಡಿದ್ದವು. ಆದರೆ ಮುಂದಿನ ಓಟದಲ್ಲಿಯೇ ಈವರೆಗಿನ ಕಂಬಳದ ಎಲ್ಲ ದಾಖಲೆಯನ್ನೂ ಮೀರಿಸಿ ಮಾಸ್ತಿಕಟ್ಟೆ ಸ್ವರೂಪ್ ಹೊಸ ದಾಖಲೆ ಸ್ಥಾಪಿಸಿದ್ದಾರೆ.

ಈ ಹಿಂದೆ 2021ರ ಕಕ್ಯಪದವು ಕಂಬಳದಲ್ಲಿ ಮಿಜಾರು ಶಕ್ತಿಪ್ರಸಾದ್ ಅವರ ಕೋಣಗಳನ್ನು ಓಡಿಸಿದ್ದ ಅಶ್ವತ್ಥಪುರ ಶ್ರೀನಿವಾಸ ಗೌಡ 125 ಮೀಟರ್ ಓಟವನ್ನು 10.95 ಸೆಕೆಂಡುಗಳಲ್ಲಿ ಕ್ರಮಿಸುವ ಮೂಲಕ (ನೂರು ಮೀಟರಿಗೆ 8.76 ಸೆಕಂಡ್) ಕ್ರಮಿಸಿ ಹೊಸ ದಾಖಲೆ ಬರೆದಿದ್ದರು. ಜಗತ್ತಿನ ಅತಿವೇಗದ ಓಟಗಾರ ಹುಸೇನ್ ಬೋಲ್ಟ್ ನೂರು ಮೀಟರ್ ಓಟವನ್ನು 9 ಸೆಕಂಡಿನಲ್ಲಿ ಪೂರೈಸಿರುವುದು ಅತಿ ವೇಗದ ಓಟದ ದಾಖಲೆಯಾಗಿದ್ದು, ಅದನ್ನು ಮೀರಿಸಿದ್ದಾರೆಂದು ಶ್ರೀನಿವಾಸ ಗೌಡರಿಗೆ ದೇಶ- ವಿದೇಶದಲ್ಲಿ ಖ್ಯಾತಿ ಬಂದಿತ್ತು. ಇದೀಗ ಮಾಸ್ತಿಕಟ್ಟೆ ಸ್ವರೂಪ್ ಅವರು ಶ್ರೀನಿವಾಸ ಗೌಡರ ಹೆಸರಲ್ಲಿದ್ದ ದಾಖಲೆಯನ್ನು ಮೀರಿಸಿ ಅಪರೂಪದ ದಾಖಲೆಯನ್ನು ಸ್ಥಾಪಿಸಿದ್ದಾರೆ.

ಕಂಬಳದ ಓಟ ಕೋಣಗಳ ಜೊತೆಗೆ ಓಡುವುದಾದರೂ ಓಡಿಸುವವರು ಅಷ್ಟೇ ವೇಗದಲ್ಲಿ ಓಡಬೇಕು ಎನ್ನುವುದು ಸತ್ಯ. ಅತ್ಲೆಟಿಕ್ ವಿಭಾಗದ ನೂರು ಮೀಟರ್ ಓಟದಲ್ಲಿ ಓಟಗಾರ ತನ್ನದೇ ಸ್ವಂತ ಶಕ್ತಿಯಲ್ಲಿ ಓಡಬೇಕಾಗುತ್ತದೆ. ಹುಸೇನ್ ಬೋಲ್ಟ್ ಓಟಕ್ಕೂ, ಇದಕ್ಕೂ ವ್ಯತ್ಯಾಸ ಇದೆಯೆಂದರೂ, ಇಲ್ಲಿಯೂ ಓಟಗಾರ ಕೋಣಗಳೊಂದಿಗೆ ಅದೇ ವೇಗದಲ್ಲಿ ಓಡುವ ಮೂಲಕ ಅತಿ ವೇಗದ ದಾಖಲೆಯಲ್ಲಿ ಪಾಲು ಪಡೆಯುತ್ತಾನೆ. ಓಟಗಾರ ಅತಿ ವೇಗದಲ್ಲಿ ಓಡಿದರಷ್ಟೇ ಕೋಣಗಳೂ ಅಷ್ಟೇ ವೇಗದಲ್ಲಿ ಓಡುತ್ತವೆ ಅನ್ನೋದು ಅಷ್ಟೇ ಸತ್ಯ. ಶ್ರೀನಿವಾಸ ಗೌಡರ ಅತಿ ವೇಗದ ಓಟಗಾರನೆಂಬ ಗರಿ ತೆಲುಗು ಸಿನಿಮಾದಲ್ಲು ಅವಕಾಶ ಸಿಕ್ಕಿತ್ತು.

ಮಂಗಳೂರು ಕಂಬಳ ಫಲಿತಾಂಶ 

  • ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : 141 ಜತೆ 
  • ಅಡ್ಡ ಹಲಗೆ - ಪ್ರಥಮ: ಇರುವೈಲು ದೊಡ್ಡಗುತ್ತು ಜಗದೀಶ್  ಎಂ ಶೆಟ್ಟಿ "ಎ" (11.68) ಹಲಗೆ ಮುಟ್ಟಿದವರು- ತೆಕ್ಕಟ್ಟೆ ಸುಧೀರ್ ದೇವಾಡಿಗ
  • ದ್ವಿತೀಯ: ನಾರ್ಯಗುತ್ತು ಕುವೆತ್ತಬೈಲು ಸಂತೋಷ್ ರೈ ಬೊಳ್ಯಾರು (11.83) ಹಲಗೆ ಮುಟ್ಟಿದವರು- ಬೈಂದೂರು ಮಹೇಶ್ ಪೂಜಾರಿ
  • ಹಗ್ಗ ಹಿರಿಯ - ಪ್ರಥಮ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್ ಕೋಟ್ಯಾನ್ (11.41)
  • ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ 
  • ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ಪ್ರಾಣೇಶ್ ದಿನೇಶ್ ಭಂಡಾರಿ "ಎ" (11.50) ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ
  • ಹಗ್ಗ ಕಿರಿಯ- ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ ಶೆಟ್ಟಿ "ಬಿ" (11.41) ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ
  • ದ್ವಿತೀಯ: ಎರ್ಮಾಳ್ ಡಾ.ಚಿಂತನ್ ರೋಹಿತ್ ಹೆಗ್ಡೆ (11.62), ಓಡಿಸಿದವರು: ಮಿಜಾರ್ ಅಶ್ವಥಪುರ ಶ್ರೀನಿವಾಸ ಗೌಡ
  • ನೇಗಿಲು ಹಿರಿಯ - ಪ್ರಥಮ: ಎಂಬತ್ತು ಬಡಗಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (10.87)
  • ಓಡಿಸಿದವರು: ಕುಂದ ಬಾರಂದಡಿ ಮಾಸ್ತಿಕಟ್ಟೆ ಸ್ವರೂಪ್
  • ದ್ವಿತೀಯ: ಮಂಗಳೂರು ಮರಕಡ ಬಾಯಾಡಿ ಮನೆ ಶಾಂತ ಸಂಜಯ್ ಶೆಟ್ಟಿ "ಎ" (11.44)
  • ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
  • ನೇಗಿಲು ಕಿರಿಯ - ಪ್ರಥಮ: ಎರ್ಮಾಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ "ಬಿ" (11.56)ಓಡಿಸಿದವರು: ಕಾವೂರುದೋಟ ಸುದರ್ಶನ್
  • ದ್ವಿತೀಯ: ಮುಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ (11.74), ಓಡಿಸಿದವರು: ಬಾರಾಡಿ ನತೀಶ್ ಸಫಲಿಗ

A sensational new record has been created at the Mangaluru Kambala, surpassing the much-celebrated feat of Srinivas Gowda, who stunned the nation four years ago by running 100 meters in 8.76 seconds—faster than Usain Bolt’s world record pace. In the Rama-Lakshmana Kambala held at Kuloor, rider Swaroop Kumar Mastikatte ran 125 meters in 10.87 seconds, which translates to 8.69 seconds for 100 meters, setting a new all-time Kambala record.