Mangalore Murder, Crime, Court: ಕೊಲೆ ಮಾಡಿದ್ದು ಹೌದು, ಆದರೆ ಅಪರಾಧಿಯಲ್ಲ ! ಪತಿಯನ್ನು ಕೊಂದ ಮಾನಸಿಕ ಅಸ್ವಸ್ಥ ಮಹಿಳೆ ಶಿಕ್ಷೆಯಿಂದ ಪಾರು, ಬೆಳ್ತಂಗಡಿ ಕೊಲೆ ಪ್ರಕರಣದಲ್ಲಿ ಅಪರೂಪದ ತೀರ್ಪು 

23-12-25 10:12 pm       Mangalore Correspondent   ಕರಾವಳಿ

ಆರೋಪಿ ಮಹಿಳೆ ಸ್ವತಃ ತಾನೇ ಗಂಡನನ್ನು ಕೊಲೆ ಮಾಡಿದ್ದಾಗಿ ಕೋರ್ಟಿನಲ್ಲಿ ಒಪ್ಪಿಕೊಂಡರೂ, ವಕೀಲರು ಸಿದ್ಧಪಡಿಸಿದ ತಾಂತ್ರಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳ ಮೇಲೆ ಆಕೆ ಶಿಕ್ಷೆಯಿಲ್ಲದೆ ಖುಲಾಸೆಗೊಂಡ ಅಪರೂಪದ ಪ್ರಕರಣಕ್ಕೆ ಮಂಗಳೂರು ಪೋಕ್ಸೋ ಕೋರ್ಟ್ ಸಾಕ್ಷಿಯಾಗಿದೆ. 

ಮಂಗಳೂರು, ಡಿ.23: ಆರೋಪಿ ಮಹಿಳೆ ಸ್ವತಃ ತಾನೇ ಗಂಡನನ್ನು ಕೊಲೆ ಮಾಡಿದ್ದಾಗಿ ಕೋರ್ಟಿನಲ್ಲಿ ಒಪ್ಪಿಕೊಂಡರೂ, ವಕೀಲರು ಸಿದ್ಧಪಡಿಸಿದ ತಾಂತ್ರಿಕ ಮತ್ತು ವೈದ್ಯಕೀಯ ಸಾಕ್ಷ್ಯಾಧಾರಗಳ ಮೇಲೆ ಆಕೆ ಶಿಕ್ಷೆಯಿಲ್ಲದೆ ಖುಲಾಸೆಗೊಂಡ ಅಪರೂಪದ ಪ್ರಕರಣಕ್ಕೆ ಮಂಗಳೂರು ಪೋಕ್ಸೋ ಕೋರ್ಟ್ ಸಾಕ್ಷಿಯಾಗಿದೆ. 

ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್.ಟಿ.ಎಸ್.ಸಿ -೧ (ಪೋಕ್ಸೋ) ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು ಈ ತೀರ್ಪು ನೀಡಿದ್ದಾರೆ. 5-7-2022 ರಂದು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದ ಯೋಹಾನನ್ ಕೊಲೆ ಪ್ರಕರಣದಲ್ಲಿ ಈ ತೀರ್ಪು ಹೊರಬಿದ್ದಿದೆ. ಪತ್ನಿ ಎಲಿಯಮ್ಮ ಅಂದು ಬೆಳಗ್ಗೆ 5:30 ಕ್ಕೆ ಗಂಡನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾಗಿ ಪ್ರಕರಣ ದಾಖಲಾಗಿತ್ತು.

ವಿಚಾರಣೆ ಸಮಯದಲ್ಲಿ ಎಲಿಯಮ್ಮ "ತಾನು ಕೊಂದಿರುವುದು ಹೌದು" ಎಂದು ಕೋರ್ಟ್ ಮುಂದೆ ಹೇಳಿಕೆ ನೀಡಿದ್ದರು. ಆದರೂ, ನ್ಯಾಯಾಧೀಶರು ತರಾತುರಿಯಲ್ಲಿ ಶಿಕ್ಷೆ ವಿಧಿಸದೆ, ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಪೂರ್ಣ ಸಾಕ್ಷಿ ವಿಚಾರಣೆಗೆ ಆದೇಶಿಸಿದ್ದರು. ಅಭಿಯೋಜನೆ ಪರ ಸಾಕ್ಷಿಗಳು ಆಕೆ ಕೃತ್ಯ ಎಸಗಿದ್ದಾಳೆ ಎಂದು ಸಾಕ್ಷಿ ನುಡಿದಿದ್ದರು. ಆದರೆ ಕ್ರಾಸ್ ಎಕ್ಸಾಮಿನೇಷನ್ ಸಮಯದಲ್ಲಿ ಆರೋಪಿ ಪರ ವಕೀಲ ವಿಕ್ರಮ್ ರಾಜ್, ಆರೋಪಿಯ ಮಾನಸಿಕ ಅಸ್ವಸ್ಥತೆಯ (Delusional Disorder) ಬಗ್ಗೆ ಸಾಕ್ಷ್ಯ ನೀಡಿದ್ದಾರೆ. 

"ಆರೋಪಿ ಕೃತ್ಯ ನಡೆಸಿದ್ದು ಹೌದಾದರೂ, ಆಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣ ಆಕೆಗೆ ತಾನು ತಪ್ಪು ಮಾಡುತ್ತಿದ್ದೇನೆ ಎನ್ನುವ ಅರಿವಿರಲಿಲ್ಲ. ಹೀಗಾಗಿ ಕಾನೂನು ರೀತ್ಯ ಆಕೆ ಅಪರಾಧ ಎಸಗಿಲ್ಲ ಮತ್ತು ಅಪರಾಧಿಕ ಹೊಣೆಗಾರಿಕೆ ಇರುವುದಿಲ್ಲ ಎಂಬ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ವಾದ ಆಲಿಸಿದ ನ್ಯಾಯಾಲಯ ಡಿ. 23ಕ್ಕೆ ತೀರ್ಪು ಕಾಯ್ದಿರಿಸಿತ್ತು. 

ನ್ಯಾಯಾಧೀಶರಾದ ಮೋಹನ ಜೆ.ಎಸ್. ತೀರ್ಪು ನೀಡಿ ಕೃತ್ಯ ಸಾಬೀತಾಗಿದ್ದರೂ ಅಪರಾಧ ಮಾಡುವ ಸಮಯದಲ್ಲಿ ಆರೋಪಿ ಮಾನಸಿಕ ಅಸ್ವಸ್ಥರಾಗಿದ್ದರಿಂದ ಅಪರಾಧಿಕ ಹೊಣೆಗಾರಿಕೆ ಇರಲ್ಲ ಎಂದು ಹೇಳಿ ಆರೋಪಿ ಮಹಿಳೆಯನ್ನು ಖುಲಾಸೆಗೊಳಿಸಿದ್ದಾರೆ. ಆಕೆಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ, ಆರೋಪಿಯನ್ನು ನಿಮ್ಹಾನ್ಸ್‌ (NIMHANS) ಆಸ್ಪತ್ರೆಗೆ ಕಳುಹಿಸಿ ಆಕೆ ಬಿಡುಗಡೆಗೆ ಸಮರ್ಥಳಿದ್ದಾಳೆಯೇ ಮತ್ತು ಆಕೆಯಿಂದ ತನಗಾಗಲಿ ಅಥವಾ ಸಮಾಜಕ್ಕಾಗಲಿ ಅಪಾಯವಿದೆಯೇ ಎಂಬ ವರದಿಯನ್ನು ಪಡೆಯುವಂತೆ ಜೈಲು ಅಧೀಕ್ಷಕರಿಗೆ ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿ ಪರವಾಗಿ ನ್ಯಾಯವಾದಿಗಳಾದ ವಿಕ್ರಮ್ ರಾಜ್ ಎ ಮತ್ತು ಜೀವನ್ ಎ.ಎಂ. ವಾದ ಮಂಡಿಸಿದ್ದರು.

In a rare and significant judgment, the Mangaluru POCSO Court acquitted a woman who admitted to killing her husband, after holding that she was suffering from mental illness at the time of the incident and therefore did not attract criminal liability. The verdict was delivered by Judge Mohan J.S. of the Additional District and Sessions Court, FTSC-I (POCSO), Mangaluru, in connection with the murder of Yohannan, which occurred on July 5, 2022, at Navoor village in Belthangady taluk. According to the prosecution, the accused, Yohannan’s wife Eliamma, had allegedly killed her husband by attacking him with a machete around 5.30 am.