Dc Mangalore, Darshan; ಯುವ ಜಿಲ್ಲಾಧಿಕಾರಿ ಚುರುಕಿನ ನಡೆ ; ಕ್ಲಾಕ್ ಟವರ್ - ಸ್ಟೇಟ್‍ಬ್ಯಾಂಕ್ ದ್ವಿಮುಖ ಸಂಚಾರಕ್ಕೆ ಪೊಲೀಸರ ಬೇಡಿಕೆ, ಕ್ರಮಕ್ಕೆ ಸೂಚನೆ, ಸಿಟಿ ಟ್ರಾಫಿಕ್ ಸಮಸ್ಯೆ- ಪರಿಹಾರದ ಬಗ್ಗೆ ವರದಿ ಕೇಳಿದ ಡೀಸಿ, ಮತ್ತೆ 'ಸ್ಮಾರ್ಟ್' ಕೆಲಸಕ್ಕೆ ಅಧಿಕಾರಿಗಳು ರೆಡಿ ! 

10-07-25 07:23 pm       Mangalore Correspondent   ಕರಾವಳಿ

ನಗರದ ಕೇಂದ್ರ ಭಾಗ ಕ್ಲಾಕ್‍ ಟವರ್ ನಿಂದ ಸ್ಟೇಟ್‍ಬ್ಯಾಂಕ್‍ ವರೆಗೆ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪಡಿಸುವ ಬಗ್ಗೆ ಕೂಡಲೇ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಗಳೂರು, ಜು.10: ನಗರದ ಕೇಂದ್ರ ಭಾಗ ಕ್ಲಾಕ್‍ ಟವರ್ ನಿಂದ ಸ್ಟೇಟ್‍ಬ್ಯಾಂಕ್‍ ವರೆಗೆ ಏಕಮುಖ ವಾಹನ ಸಂಚಾರವನ್ನು ದ್ವಿಮುಖ ಸಂಚಾರವಾಗಿ ಮಾರ್ಪಡಿಸುವ ಬಗ್ಗೆ ಕೂಡಲೇ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗುರುವಾರ ಜಿಲ್ಲಾಧಿಕಾರಿ ಕಚೇರಿ ಪ್ರಜಾಸೌಧ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಿಂದೆ ದ್ವಿಮುಖ ವಾಹನ ಸಂಚಾರವಿದ್ದ ಈ ರಸ್ತೆಯನ್ನು ಏಕಮುಖ ಮಾಡಿರುವುದರಿಂದ ಸಾರ್ವಜನಿಕರಿಗೆ ಹಾಗೂ ಸಂಚಾರ ವ್ಯವಸ್ಥೆಗೆ ಸಮಸ್ಯೆ ಉಂಟಾಗಿರುವ ಬಗ್ಗೆ ದೂರುಗಳು ಬಂದಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿ  ದ್ವಿಮುಖ ಸಂಚಾರಕ್ಕೆ ಕೈಗೊಳ್ಳಬೇಕಾದ ಕಾಮಗಾರಿ ಮತ್ತು ಅಗತ್ಯವಿರುವ ಅನುದಾನದ ಕುರಿತು ಮುಂದಿನ ವಾರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು  ಸ್ಮಾರ್ಟ್ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ  ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.  

ಸಭೆಯಲ್ಲಿ ಉಪಸ್ಥಿತರಿದ್ದ ಉಪ ಪೋಲಿಸ್ ಆಯುಕ್ತ ಸಿದ್ದಾರ್ಥ್ ಗೋಯಲ್ ಮಾತನಾಡಿ, ಕ್ಲಾಕ್‍ ಟವರ್ ರಸ್ತೆಯ ಸಮೀಪದಲ್ಲಿ ಪೊಲೀಸ್ ಠಾಣೆ, ಅಗ್ನಿಶಾಮಕ ಠಾಣೆ ಸೇರಿದಂತೆ ಹಲವು ಪ್ರಮುಖ ಕಚೇರಿಗಳಿದ್ದು, ಏಕಮುಖ ಸಂಚಾರದಿಂದ ತುರ್ತು ಸಂದರ್ಭಗಳಲ್ಲಿ ಸುತ್ತಿ ಬಳಸಿ ತೆರಳಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಪ್ರಸ್ತುತ ಈ ರಸ್ತೆಯ ಒಂದು ಬದಿಯಲ್ಲಿ ಬಸ್ ಹಾಗೂ ಇತರೆ ವಾಹನಗಳ ಪಾರ್ಕಿಂಗ್  ತಾಣವಾಗಿ ಮಾರ್ಪಟ್ಟಿದೆ ಎಂದು   ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. 

ಸಭೆಯಲ್ಲಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳು ಮಾತನಾಡಿ, ಈ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ಅಭಿವೃದ್ಧಿ ಪಡಿಸಿ  ಕಾಮಗಾರಿಯನ್ನು ಈಗಾಗಲೇ ಮಹಾನಗರ ಪಾಲಿಕೆಗೆ   ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು. ಸ್ಟೇಟ್‍ಬ್ಯಾಂಕ್, ಹ್ಯಾಮಿಲ್ಟನ್ ವೃತ್ತವನ್ನು  ವೈಜ್ಞಾನಿಕವಾಗಿ ನಿರ್ಮಿಸಲು ಎನ್ಐಟಿಕೆ ಸಂಸ್ಥೆಯಿಂದ ತಾಂತ್ರಿಕ ವರದಿ ಪಡೆದಿದ್ದು, ಈ ಕುರಿತು ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. 

ಹಂಪನಕಟ್ಟೆ ಸಿಗ್ನಲ್ ವೃತ್ತದಲ್ಲಿ ರಸ್ತೆ ಮಧ್ಯೆ ಶಾಶ್ವತ ಬ್ಯಾರಿಕೇಡ್‍ಗಳನ್ನು ಅಳವಡಿಸಿರುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಕರಾವಳಿ ಜಂಕ್ಷನ್, ಬಂಟ್ಸ್ ಹಾಸ್ಟೆಲ್ ಜಂಕ್ಷನ್, ಬಲ್ಮಠ ಜಂಕ್ಷನ್‍ಗಳಲ್ಲಿ   ರಸ್ತೆ ವಿಭಜಕಗಳಿಗೆ ಕಬ್ಬಿಣದ ರೀಲಿಂಗ್ಸ್ ಹಾಕಲು ಒಂದು ತಿಂಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ನಗರ ಪಾಲಿಕೆ ಆಯುಕ್ತರು ತಿಳಿಸಿದರು. ಅಲ್ಲದೆ, ಈ ಜಂಕ್ಷನ್‍ಗಳಲ್ಲಿರುವ ಬಸ್ ನಿಲ್ದಾಣಗಳನ್ನು ಸಮೀಪದ ಜಾಗಕ್ಕೆ ಸ್ಥಳಾಂತರಿಸುವಂತೆ  ಜಿಲ್ಲಾಧಿಕಾರಿಗಳು ಸೂಚಿಸಿದರು. 

ನಗರದಲ್ಲಿ ಫುಟ್ ಪಾತ್ ಅತಿಕ್ರಮಿಸಿದ ಅಂಗಡಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳ   ಒತ್ತುವರಿಯನ್ನು ತೆರವುಗೊಳಿಸಬೇಕು. ಪದೇ ಪದೇ ಒತ್ತುವರಿ ತೆರವು ಕಾರ್ಯಾಚರಣೆ ಬದಲು ಶಾಶ್ವತವಾಗಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು. 

ಬೈಕಂಪಾಡಿಯಲ್ಲಿ ಅಂಡರ್ ಪಾಸ್ ಮಂಜೂರು 

ರಾಷ್ಟ್ರೀಯ ಹೆದ್ದಾರಿ ಬೈಕಂಪಾಡಿಯಲ್ಲಿ   ಜೋಕಟ್ಟೆ ಕ್ರಾಸ್ ಬಳಿ  ವಾಹನಗಳು ಕೈಗಾರಿಕಾ ಪ್ರದೇಶಕ್ಕೆ ತಿರುವು ಪಡೆಯಲು ಅಂಡರ್ ಪಾಸ್ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾವೆದ್ ಅಬ್ದುಲ್ಲಾ ಸಭೆಗೆ ತಿಳಿಸಿದರು. ಕೂಳೂರು - ಬೈಕಂಪಾಡಿ ರಸ್ತೆ, ಪಣಂಬೂರ್ ಬೀಚ್ ಮತ್ತು  ತಣ್ಣೀರುಬಾವಿ ರಸ್ತೆಯಲ್ಲಿ ಮತ್ತು ಟ್ರಕ್, ಲಾರಿಗಳ ಪಾರ್ಕಿಂಗ್ ನಿಂದ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿರುವುದರಿಂದ  ಎನ್.ಎಂ.ಪಿ.ಎ ವತಿಯಿಂದ   ಪ್ರಾಧಿಕಾರದ ಜಮೀನಿನಲ್ಲಿ ಟ್ರಕ್ ನಿಲುಗಡೆಗೆ ಸ್ಥಳಾವಕಾಶ ಒದಗಿಸುವ ಬಗ್ಗೆ ಎನ್.ಎಂ.ಪಿ.ಎ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು.

ಬೈಕಂಪಾಡಿಯಿಂದ ಸುರತ್ಕಲ್‍ ವರೆಗೆ ಹೆದ್ದಾರಿ ದಾರಿದೀಪ ಸಮಸ್ಯೆ ಇದ್ದು, ದಾರಿದೀಪವನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ನಗರ ಪಾಲಿಕೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ನಗರದ ಸಮಗ್ರ ಟ್ರಾಫಿಕ್ ವ್ಯವಸ್ಥೆ ವರದಿ ಸಲ್ಲಿಸಿ

ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ 4 ಸಂಚಾರ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್‍ಗಳು ತಮ್ಮ ವ್ಯಾಪ್ತಿಯ ಪ್ರಮುಖ ಟ್ರಾಫಿಕ್ ಸಮಸ್ಯೆಗಳು ಮತ್ತು ಅವುಗಳ ಪರಿಹಾರದ ಬಗ್ಗೆ ಜಂಟಿಯಾಗಿ ಚರ್ಚಿಸಿ ವರದಿ ಸಿದ್ಧಗೊಳಿಸಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಇದೇ ವೇಳೆ ಸೂಚಿಸಿದರು. ಶಾಲಾ ಬಸ್ ಮತ್ತು ವಾಹನಗಳಲ್ಲಿ ಅಧಿಕ ಮಕ್ಕಳನ್ನು ಸಾಗಿಸುವುದರ ಬಗ್ಗೆ ದೂರುಗಳು ಬಂದಿದ್ದು, ಆ ವಾಹನಗಳಲ್ಲಿ ಎಷ್ಟು ಮಕ್ಕಳು ಸಂಚರಿಸುತ್ತಿದ್ದಾರೆ ಎಂಬುದರ ಬಗ್ಗೆ ಆಯಾಯ ಶಾಲೆಗಳಿಂದ ವರದಿ ಪಡೆಯಬೇಕು. ಜಲಜೀವನ್ ಮಿಷನ್ ಪೈಪ್‍ಲೈನ್ ಕಾಮಗಾರಿಯಲ್ಲಿ  ಲೋಕೋಪಯೋಗಿ ರಸ್ತೆಗಳಿಗೆ ಅಡಚಣೆಯಾಗಿರುವ ಬಗ್ಗೆ ಸಂಬಂಧಿಸಿದವರಿಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಸೂಚಿಸಿದರು.

ನಗರದಲ್ಲಿ ಟಿಂಟೆಡ್ ಗ್ಲಾಸ್ ಹೊಂದಿರುವ ವಾಹನಗಳ ನಿಯಂತ್ರಿಸಲು ಕಾರ್ಯಾಚರಣೆ ನಡೆಯುತ್ತಿದೆ. ಈ ಬಗ್ಗೆ ಕಾರ್  ಟಿಂಟ್‍ಗಳನ್ನು ತೆಗೆದು ದಂಡ ವಿಧಿಸಲಾಗುತ್ತದೆ. ವಾಹನಗಳಿಗೆ ಟಿಂಟ್ ಹಾಕದಂತೆ ವಾಹನ ಶೋರೂಂಗಳಿಗೆ ಮತ್ತು ವಾಹನ ಅಲಂಕಾರ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಟಿಂಟೆಡ್ ಗ್ಲಾಸ್ ಹೊಂದಿರುವ ಕಾರ್‍ನಲ್ಲಿ ಅಪರಾಧ ನಡೆದರೆ ಟಿಂಟ್ ಹಾಕಿದ ಸಂಸ್ಥೆಯನ್ನು ಕೂಡಾ ಅದೇ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದರು.
ಸಭೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ , ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಾಘವೇಂದ್ರ ನಾಯ್ಕ, ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಮಿತಿ ಸದಸ್ಯ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.

Deputy Commissioner H.V. Darshan has instructed officials to submit a detailed report on the feasibility of converting the one-way traffic system between Clock Tower and State Bank Junction into a two-way traffic route. The directive came during the District Road Safety Committee meeting held at the DC’s office in Praja Soudha on Thursday.