Mangalore Home Minister Parameshwara, Peace Meeting: ನೀವು ಬುದ್ಧಿವಂತರು ಅಂತ ಘಟ್ಟದಲ್ಲಿ ಅನ್ಕೊಂಡಿದ್ದೇವೆ, ಇಬ್ಬರು ಅಧಿಕಾರಿಗಳನ್ನು ಹಾಕಿದ್ರೆ ಸಾಕಂದ್ರೆ ನಾವು ಬರೋದ್ಯಾಕೆ..? ವಿದ್ಯಾರ್ಥಿಗಳು ಡ್ರಗ್ಸ್ ನಲ್ಲಿ ಸಿಕ್ಕಿಬಿದ್ರೆ ಶಾಲಾಡಳಿತವೇ ಹೊಣೆ ; ಶಾಂತಿ ಸಭೆಯಲ್ಲಿ ಗೃಹ ಸಚಿವರ ಎಚ್ಚರಿಕೆ

09-07-25 10:17 pm       Mangalore Correspondent   ಕರಾವಳಿ

ಯಾವುದೇ ದುರುದ್ದೇಶದಿಂದ ಶಾಂತಿ ಸಭೆ ಕರೆದಿಲ್ಲ. ಈ ಜಿಲ್ಲೆಯ ಹೆಸರಿಗೆ ಲೇಬಲ್ ಹಚ್ಚಬೇಕೆಂಬ ಉದ್ದೇಶವೂ ನಮಗಿಲ್ಲ. ಇಷ್ಟೊಂದು ಸಮೃದ್ಧ, ಬುದ್ಧಿವಂತರು, ಸುಶಿಕ್ಷಿತರು ಇರುವ ಜಿಲ್ಲೆ ಇಡೀ ರಾಜ್ಯದಲ್ಲಿ ಇಲ್ಲ.

ಮಂಗಳೂರು, ಜುಲೈ 9 : ಯಾವುದೇ ದುರುದ್ದೇಶದಿಂದ ಶಾಂತಿ ಸಭೆ ಕರೆದಿಲ್ಲ. ಈ ಜಿಲ್ಲೆಯ ಹೆಸರಿಗೆ ಲೇಬಲ್ ಹಚ್ಚಬೇಕೆಂಬ ಉದ್ದೇಶವೂ ನಮಗಿಲ್ಲ. ಇಷ್ಟೊಂದು ಸಮೃದ್ಧ, ಬುದ್ಧಿವಂತರು, ಸುಶಿಕ್ಷಿತರು ಇರುವ ಜಿಲ್ಲೆ ಇಡೀ ರಾಜ್ಯದಲ್ಲಿ ಇಲ್ಲ. ನಾವು ಘಟ್ಟದವರು, ಅಲ್ಲಿ ನೀವು ಬುದ್ಧಿವಂತರು ಅಂತ ಅನ್ಕೊಳ್ತೇವೆ. ಆದರೆ ಇಲ್ಲಿ ಬಂದ ಮೇಲೆ ಕೆಲವೊಮ್ಮೆ ನಾವು ಪ್ರಶ್ನೆ ಮಾಡಿಕೊಳ್ಳುವ ಸ್ಥಿತಿ ಬರುತ್ತದೆ. ಹಾಗೆ ಮಾಡಬೇಡಿ. ನೀವು ಬುದ್ದಿವಂತರು ಅಷ್ಟೇ ಅಲ್ಲ, ಕ್ರಿಯಾಶೀಲರು. ಪ್ರಪಂಚದಲ್ಲೇ ಮುಂಚೂಣಿ ಇದ್ದೀರಿ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಗಳೂರಿನ ಜನರನ್ನು ಬುದ್ಧಿವಂತರು ಎಂದು ಪ್ರಶಂಸಿಸುತ್ತಲೇ ತಮಾಷೆಯ ಮಾತುಗಳನ್ನಾಡಿದ್ದಾರೆ.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸ ಶಾಂತಿ ಸಭೆಯಲ್ಲಿ ಎಲ್ಲ ಸಂಘ ಸಂಸ್ಥೆಗಳವರು, ರಾಜಕೀಯ ಪಕ್ಷಗಳ ಪ್ರಮುಖರು, ಶಾಸಕರ ಮಾತುಗಳನ್ನು ಆಲಿಸಿದ ಬಳಿಕ ಸಚಿವರು ಅಧ್ಯಕ್ಷತೆಯ ಮಾತುಗಳನ್ನಾಡಿದರು. ದೇಶದಲ್ಲಿ ಮೆಡಿಕಲ್ ಶಿಕ್ಷಣದ ಪರಿಭಾಷೆ ಬರುವ ಮೊದಲೇ ಇಲ್ಲಿ ಮಣಿಪಾಲ್ ಶಿಕ್ಷಣ ಸಂಸ್ಥೆ ಬಂದಿತ್ತು. ಇಡೀ ದೇಶ, ಪ್ರಪಂಚದಲ್ಲಿ ಮಂಗಳೂರಿನ ಮೆಡಿಕಲ್ ಶಿಕ್ಷಣ ಗಮನ ಸೆಳೆದಿದೆ. ಲಕ್ಷಾಂತರ ಜನರು ಇಲ್ಲಿ ಓದಿ ಇಡೀ ಜಗತ್ತಿನಲ್ಲಿ ನೆಲೆಸಿದ್ದಾರೆ. ಇಡೀ ದೇಶಕ್ಕೆ ಬ್ಯಾಂಕಿಂಗ್ ಸಿಸ್ಟಮ್ ಪರಿಚಯಕ್ಕೆ ಆಗಿದ್ದೇ ಈ ಜಿಲ್ಲೆಯಿಂದ. ಡಾ.ಶಾಂತರಾಮ ಶೆಟ್ಟಿಯವರು ಇದೇ ಮಾತುಗಳನ್ನು ಹೇಳಿದರು.

ಎಲ್ಲರ ಅಭಿಪ್ರಾಯಗಳನ್ನೂ ಕೇಳಿ ಬರ್ಕೊಂಡಿದ್ದೀನಿ, ಸುಮಾರು 38 ಜನ ಅಭಿಪ್ರಾಯ ಹೇಳಿದ್ದೀರಿ, ಬಹಳಷ್ಟು ಒಳ್ಳೆ ಸಲಹೆ ಕೊಟ್ಡಿದ್ದೀರಿ, ಸರ್ಕಾರದ ಜವಾಬ್ದಾರಿಯನ್ನು ತಿಳಿಸಿದ್ದೀರಿ, 2023 ರ ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆ ಉದ್ದೇಶಕ್ಕಾಗಿ ಪ್ರತಿ ಜಿಲ್ಲೆಗೆ ಹೋಗಿದ್ದೆ. ಇಲ್ಲಿ ಬಂದಾಗ ಎಲ್ಲ ಕ್ಷೇತ್ರದ ತಜ್ಞರ ಜೊತೆಗೂ ಮಾತಾಡಿದ್ದೆ. ಕೋಮು ಸೌಹಾರ್ದ ಕಾಪಾಡುವ ಕೆಲಸ ಮಾಡಿ ಅಂತ ಸಲಹೆ ಕೊಟ್ಟಿದ್ದರು.

13 ರೂ.ನಲ್ಲಿ 20 ಬರತ್ತೆ ಅಂದ್ರೆ ಹೂಡಿಕೆ ಮಾಡ್ತಾರೆ..

ಬೆಂಗಳೂರು ಬಿಟ್ಟರೆ ಅತಿ ಹೆಚ್ಚು ಆದಾಯ ಕೊಡುವುದು ಇದೇ ಮಂಗಳೂರು. ಇಲ್ಲಿಯೂ ಬಿಸಿನೆಸ್ ಹೂಡಿಕೆ ಮಾಡುವವರು ಬರಬೇಕು. 13 ರೂ. ಹಾಕಿ 20 ರೂ. ಬರತ್ತೆ ಅಂದ್ರೆ ತಾನೇ ಉದ್ಯಮಿಗಳು ಬರ್ತಾರೆ. ಕೇವಲ ಇಬ್ಬರು ಅಧಿಕಾರಿಗಳನ್ನು ಹಾಕಿದರೆ ಸಾಕು, ನಾವು ಬರೋದು ಬೇಡ ಎಂದು ಹೇಳಿದರೆ ಬಹಳ ಅನುಕೂಲ. ನಮಗೆ ಕೆಲಸ ಇರಲ್ಲ. ಆದರೆ ಇದು ಅಷ್ಟು ಸುಲಭ ಇಲ್ಲ. ಹರೀಶ್ ಪೂಂಜ ಹೇಳಿದಂತೆ, ಸೈದ್ಧಾಂತಿಕ ವಿಚಾರಗಳಿವೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ನಾವಾಯ್ತು, ಮುಂದೆ ನಮ್ಮ ಮಕ್ಕಳು ಕೂಡ ಭಯದಿಂದ ಇರಬೇಕೇ ಎಂಬುದನ್ನು ಯೋಚನೆ ಮಾಡಬೇಕಾಗಿದೆ. ನಾನು ಕೂಡ ಅತ್ಲೀಟ್ ಆಗಿದ್ದವನು. ಇಲ್ಲಿನ ನೆಹರು ಮೈದಾನಕ್ಕೆ ಆಡಲು ಬಂದಿದ್ದೆ. ಮಣಿಪಾಲದಲ್ಲಿ ಫುಟ್ಬಾಲ್ ಆಡಲು ಬಂದಿದ್ದೆ. ಆಗೆಲ್ಲ ಇಂಥದ್ದು ಇರಲಿಲ್ಲ. 

ನಮ್ಮ ಜಿಲ್ಲೆ ಹೇಗಿತ್ತು, ನಾವು ಹೇಗಿದ್ದೆವು ಅಂತ ಇತಿಹಾಸ ಸ್ಮರಿಸಿಕೊಳ್ಳಿ. ಈಗ ಇಲ್ಲಿ ಒಂದೆರಡು ಘಟನೆಯಾದಾಗ ಇಡೀ ದೇಶಕ್ಕೆ ಕೋಮು ದ್ವೇಷ ಅಂತ ರಾಷ್ಟ್ರೀಯ ಚಾನೆಲ್ಗಳಲ್ಲಿ ತೋರಿಸುತ್ತಾರೆ. ಇಂಥದ್ದನ್ನು ನಾವು ಮಾಡ್ತಿರೋದಾ ಎಂದು ಗೃಹ ಸಚಿವರು ಮಾರ್ಮಿಕ ಪ್ರಶ್ನೆಗಳನ್ನು ಮುಂದಿಟ್ಟರು. ನಾವು ಮೊದಲೇ ಮಾಡಬೇಕಿತ್ತು ಅನ್ನುವುದಕ್ಕೆ, ಆ ಸಂದರ್ಭದಲ್ಲಿ ಬೇರೆ ವಾತಾವರಣ ಇತ್ತು‌. ಹಾಗಾಗಿ ಸಭೆ ಮಾಡಲು, ಶಾಸಕರ ಜೊತೆಗೆ ಮಾತಾಡೋಕೆ ಹೋಗಿಲ್ಲ. ಶಾಂತಿ ಸಭೆಗೆ ಎಲ್ಲರನ್ನೂ ಕರೆಯಿರಿ. ಯಾರನ್ನೂ ಕರೀಬೇಡಿ ಅಂತ ಹೇಳಿಲ್ಲ. ಹಿಂದಿನ ಎಂಪಿಗಳನ್ನು ಸೇರಿ ಸ್ವಾಮೀಜಿಗಳನ್ನೆಲ್ಲ ಕರೆಯಬೇಕಿತ್ತು. ನಿಮ್ಮೆಲ್ಲ ಸಲಹೆಗಳನ್ನು ತಗೊಂಡು ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಡ್ರಗ್ಸ್ ವಿರುದ್ಧ ಈಗಾಗಲೇ ಯುದ್ಧ ಘೋಷಣೆ ಮಾಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವರ್ಷದಿಂದ ಎರಡೂವರೆ ಸಾವಿರ ಕೇಸ್ ಆಗಿದೆ. 250 ಕೇಜಿ ಗಾಂಜಾ ಸೀಜ್ ಆಗಿದೆ. 80 ಕೋಟಿಯ ಡ್ರಗ್ಸ್ ಅನ್ನು ಇಲ್ಲಿನ ಅಧಿಕಾರಿಗಳು ಬೆಂಗಳೂರು ಹೋಗಿ ಹಿಡ್ಕೊಂಡು ಬಂದಿದ್ದರು. ಡ್ರಗ್ಸ್ ಕಂಟ್ರೋಲ್ ಮಾಡೇ ಮಾಡ್ತೀವಿ, ಅದರಲ್ಲಿ ರಾಜಿಯೇ ಇಲ್ಲ. ಆದರೆ 14 ವರ್ಷದ ಹುಡುಗ ಮರ್ಡರ್ ಮಾಡ್ತಾನೆ ಅಂದ್ರೆ, ನಮ್ಮ ಸಮಾಜದ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ ಅಂತ ನೋಡಬೇಕು. ಇಂತಹ ಜಿಲ್ಲೆ ಈ ರೀತಿ ಆಗತ್ತೆ ಅಂದ್ರೆ ನೀವೇ ಯೋಚನೆ ಮಾಡಿ,  

ಶಿಕ್ಷಣ ಸಂಸ್ಥೆಗಳಲ್ಲಿ ಏಂಟಿ ಡ್ರಗ್ಸ್ ಕಮಿಟಿ

ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಏಂಟಿ ಡ್ರಗ್ಸ್ ಕಮಿಟಿ ಮಾಡಿ ಅಂತ ಸೂಚನೆ ಕೊಟ್ಟಿದ್ದೇನೆ. ಯಾವುದೇ ಶಾಲೆಯ ಮಕ್ಕಳು ಡ್ರಗ್ಸ್ ನಲ್ಲಿ ತೊಡಗಿದರೆ ಅಲ್ಲಿನ ಶಾಲಾ ಮುಖ್ಯಸ್ಥರನ್ನೇ ಜವಾಬ್ದಾರಿ ಮಾಡ್ತೀವಿ. ಹೊರಗಡೆ ಮಾಡಿದರೆ ಬೇರೆ, ಶಾಲೆಯ ಒಳಗಡೆ ತಗೊಂಡಿದ್ದರೆ ಹೊಣೆ ಮಾಡಬೇಕಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಗೃಹ ಸಚಿವರು ಎಚ್ಚರಿಕೆ ನೀಡಿದರು. ಮರಳು ನೀತಿ, ಕೆಂಪು ಕಲ್ಲಿನ ಬಗ್ಗೆ ವಿಚಾರ ಮಾಡ್ತೀವಿ. ಆದರೆ ಲೈಸನ್ಸ್ ತಗೊಳ್ಳಿ, ಲೈಸನ್ಸ್ ತಗೊಳ್ಳದೆ ಏನೂ ಮಾಡಕ್ಕೆ ಆಗಲ್ಲ‌. ಯಾವ ರೀತಿ ಮಾಡಬೇಕೆಂದು ಉಸ್ತುವಾರಿ ಸಚಿವರು ಗಣಿ ಸಚಿವರ ಜೊತೆಗೆ ಮಾತುಕತೆ ಮಾಡಿ ನಿರ್ಧಾರ ಮಾಡುತ್ತಾರೆ. ಇನ್ನು ಗಣೇಶೋತ್ಸವ ವಿಚಾರದಲ್ಲಿ ಅಷ್ಟು ಕಟ್ಟುನಿಟ್ಟಿನ ಕೆಲಸ ಮಾಡಲ್ಲ. ಸಂಪ್ರದಾಯ ಪಾಲನೆಗೆ ತೊಡಕು ತರಲ್ಲ ಎಂದರು.

ಏನಿದ್ದರೂ ಜಿಲ್ಲೆಯಲ್ಲಿ ಶಾಂತಿ ವಾತಾವರಣ ಬರಬೇಕು. ಭಯದ ವಾತಾವರಣದಲ್ಲಿ ಜನರು ಬದುಕಬಾರದು, ಇದನ್ನು ಕೇವಲ ಕಾನೂನಿನಿಂದ ಮಾತ್ರ ಮಾಡೋಕೆ ಆಗಲ್ಲ, ನಿಮ್ಮೆಲ್ಲರ ಸಹಕಾರ ಬೇಕಾಗುತ್ತದೆ. ನಕಲಿ ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮಕ್ಕಾಗಿ ಇದೇ ಅಧಿವೇಶನದಲ್ಲಿ ಮಸೂದೆ ತರುತ್ತೇನೆ ಎಂದು ಹೇಳಿದರು. ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯುಟಿ ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ, ಕಮಿಷನರ್ ಸುಧೀರ್ ರೆಡ್ಡಿ, ಜಿಲ್ಲಾಧಿಕಾರಿ ದರ್ಶನ್, ಎಸ್ಪಿ ಅರುಣ್, ಜಿಪಂ ಸಿಇಓ ವಿನಾಯಕ್ ಇದ್ದರು. ಸಭೆಯಲ್ಲಿ 200ಕ್ಕೂ ಹೆಚ್ಚು ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಿದ್ದರು.

In a powerful address during a peace meeting held at the Dakshina Kannada Zilla Panchayat auditorium, Home Minister Dr. G. Parameshwara issued a stern warning to educational institutions, stating that school administrations will be held responsible if students are caught using drugs on campus. The minister also reaffirmed the government’s commitment to cracking down on drug networks, while calling for collective efforts to preserve harmony and public safety in the region.