Ullal, U T Khader, Mangalore: ಎರಡು ವರ್ಷವಾದರೂ ಬೋರ್ ಗೆ ಕರೆಂಟ್ ಕೊಡದೆ ಸಬೂಬು, ಟ್ಯಾಂಕರ್ ನೀರು ಸರಬರಾಜಲ್ಲಿ ಗೋಲ್ಮಾಲ್ ಆರೋಪ, ಉಳ್ಳಾಲ ನಗರಸಭೆ ಪೌರಾಯುಕ್ತ, ಕಿರಿಯ ಅಭಿಯಂತರರಿಗೆ ನಡುರಸ್ತೆಯಲ್ಲೇ ಸ್ಪೀಕರ್ ಕ್ಲಾಸ್ !  

17-05-25 10:09 pm       Mangalore Correspondent   ಕರಾವಳಿ

ಬೋರ್ ಗಳಿಗೆ ಕರೆಂಟ್ ಸಂಪರ್ಕ ನೀಡದೆ, ಜನರಿಗೆ ಸಮರ್ಪಕವಾಗಿ ಟ್ಯಾಂಕರ್ ನೀರನ್ನೂ ಸರಬರಾಜು ಮಾಡದ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತ ಮತ್ತಡಿ ಮತ್ತು ಕಿರಿಯ ಅಭಿಯಂತರ ತುಳಸಿ ಅವರಿಗೆ ಸ್ಪೀಕರ್ ಯು.ಟಿ.ಖಾದರ್ ಅವರು ನಡು ರಸ್ತೆಯಲ್ಲೇ ಕ್ಲಾಸ್ ತಗೊಂಡಿದ್ದಾರೆ.

ಉಳ್ಳಾಲ, ಮೇ 17 : ಬೋರ್ ಗಳಿಗೆ ಕರೆಂಟ್ ಸಂಪರ್ಕ ನೀಡದೆ, ಜನರಿಗೆ ಸಮರ್ಪಕವಾಗಿ ಟ್ಯಾಂಕರ್ ನೀರನ್ನೂ ಸರಬರಾಜು ಮಾಡದ ಉಳ್ಳಾಲ ನಗರಸಭೆಯ ಪ್ರಭಾರ ಪೌರಾಯುಕ್ತ ಮತ್ತಡಿ ಮತ್ತು ಕಿರಿಯ ಅಭಿಯಂತರ ತುಳಸಿ ಅವರಿಗೆ ಸ್ಪೀಕರ್ ಯು.ಟಿ.ಖಾದರ್ ಅವರು ನಡು ರಸ್ತೆಯಲ್ಲೇ ಕ್ಲಾಸ್ ತಗೊಂಡಿದ್ದಾರೆ.

ಸ್ಪೀಕರ್ ಯು.ಟಿ.ಖಾದರ್ ಅವರು ಶನಿವಾರ ನೂತನವಾಗಿ ಕಾಂಕ್ರಿಟೀಕರಣಗೊಂಡ ಪಂಡಿತ್ ಹೌಸ್-ಪಿಲಾರು ಸಂಪರ್ಕ ರಸ್ತೆಯನ್ನ ಪರಿಶೀಲನೆ ನಡೆಸುತ್ತಿದ್ದ ವೇಳೆ ಉಳ್ಳಾಲ ನಗರಸಭೆಯ ಶಿವಾಜಿನಗರದ ವಾರ್ಡ್ ಸದಸ್ಯೆ ದೀಕ್ಷಿತಾ ಅವರು ನಗರಸಭೆ ಅಧಿಕಾರಿಗಳ ಅಸಡ್ಡೆ, ನಿರ್ಲಕ್ಷ್ಯದ ಬಗ್ಗೆ ಖಾದರ್ ಅವರಲ್ಲಿ ದೂರಿದ್ದಾರೆ. ತನ್ನ ವಾರ್ಡ್ ವ್ಯಾಪ್ತಿಯ ನಿತ್ಯಾಧರ್ ನಗರದಲ್ಲಿ ಬೋರ್ ನಿರ್ಮಾಣಗೊಂಡು ಎರಡು ವರ್ಷ ಉರುಳಿದರೂ ನಗರಸಭೆ ಕರೆಂಟ್ ಸಂಪರ್ಕ ನೀಡಿಲ್ಲ. ಈ ಬಗ್ಗೆ ನಗರಸಭೆ ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾಪಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಉರಿ ಬೇಸಿಗೆಯಲ್ಲೂ ವಾರ್ಡ್ ನಿವಾಸಿಗಳಿಗೆ ಟ್ಯಾಂಕರ್ ನೀರನ್ನು ಸಮರ್ಪಕವಾಗಿ ಪೂರೈಸದೆ ಅಧಿಕಾರಿಗಳು ಸತಾಯಿಸುತ್ತಿರುವ ಬಗ್ಗೆ ದೀಕ್ಷಿತ ಅವರು ಸ್ಪೀಕರ್ ಖಾದರ್ ಅವರಲ್ಲಿ ದೂರಿದ್ದಾರೆ.

ಸ್ಥಳದಲ್ಲಿದ್ದ ನಗರಸಭೆ ಕಿರಿಯ ಅಭಿಯಂತರ ತುಳಸಿ ಅವರು ಒಂಭತ್ತು ಬೋರ್ ಗಳಲ್ಲಿ ಐದು ಕಡೆ ಕರೆಂಟ್ ಕನೆಕ್ಷನ್ ಬಾಕಿ ಇದೆ. ಮೆಸ್ಕಾಂನವರಿಗೆ ಹೇಳಿದ್ದು ಅವರು ಸಂಪರ್ಕ ನೀಡಿಲ್ಲವೆಂದು ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಧಿಕಾರಿಗಳ ಸಬೂಬಿಗೆ ಗರಂ ಆದ ಖಾದರ್, ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಮತ್ತಡಿ ಮತ್ತು ಕಿರಿಯ ಅಭಿಯಂತರ ತುಳಸಿ ಅವರನ್ನುದ್ದೇಶಿಸಿ ಅಧಿಕಾರಿಗಳಾದ ಮಾತ್ರಕ್ಕೆ ನೀವೇಕೆ ನಗರಸಭೆಯನ್ನ ತಲೆ ಮೇಲೆ ಹೊತ್ತು ತಿರುಗುತ್ತಿರುವಂತೆ ವರ್ತಿಸುತ್ತೀರಿ. ಬೋರ್ ಗಳಲ್ಲಿ ನೀರಿದ್ದರೂ ಕರೆಂಟ್ ಸಂಪರ್ಕ ನೀಡದೆ ಬಾಕಿ ಉಳಿಸಿರುವುದು ಏಕೆ. ಮೆಸ್ಕಾಂನವರು ಸಂಪರ್ಕ ಕೊಡದಿದ್ದರೆ ನಮ್ಮಲ್ಲಿ ಹೇಳಬೇಕಿತ್ತು. ಜನಸಾಮಾನ್ಯರ ಅಗತ್ಯ ಕೆಲಸಗಳನ್ನ ಮಾಡುವುದು ನಿಮ್ಮ ಕರ್ತವ್ಯ ಎಂದು ನಡು ರಸ್ತೆಯಲ್ಲೇ ಗದರಿದ್ದಾರೆ.

ನೀರಿನ ಟ್ಯಾಂಕರ್ ಚಾಲಕರಿಗೆ ಲೆಡ್ಜರ್ ಬುಕ್ ನೀಡಿ. ಸಮರ್ಪಕ ನೀರು ಸರಬರಾಜು ಮಾಡಿರುವ ಬಗ್ಗೆ ವಾರ್ಡ್ ನಿವಾಸಿಗಳ ಸಹಿ ಸಂಗ್ರಹಿಸಬೇಕು. ಇಲ್ಲವಾದರೆ ನೀರು ಸರಬರಾಜು ಮಾಡಿದ್ದೇವೆಂದು ಟ್ಯಾಂಕರ್ ನವರು ಸುಮ್ಮನೆ ನಗರಸಭೆಗೆ ಬಿಲ್ ನೀಡಬಹುದೆಂದು‌ ಪೌರಾಯುಕ್ತ ಮತ್ತಡಿ ಅವರಿಗೆ ಖಾದರ್ ಎಚ್ಚರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮತ್ತಡಿ ಅವರು ನೀರು ಸರಬರಾಜು ಟ್ಯಾಂಕರ್ ಗಳಲ್ಲಿ ಜಿಪಿಎಸ್ ಅಳವಡಿಸಿದ್ದು, ಮೋಸ ಮಾಡಲು ಸಾಧ್ಯವಿಲ್ಲವೆಂದು ಸ್ಪೀಕರ್ ಖಾದರ್ ಅವರಲ್ಲಿ ಸಬೂಬು ನೀಡಿದರು.

ನೀರು ಸರಬರಾಜಲ್ಲಿ ಗೋಲ್ಮಾಲ್..? 

ಬ್ರೇಕ್, ಹೆಡ್ ಲೈಟ್ ಗಳೇ ಇಲ್ಲದ ಡಕೋಟ ಟ್ಯಾಂಕರ್ ಗಳಲ್ಲಿ ಜಿಪಿಎಸ್ ಇರೋದು ಹೌದೇ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ. ನೀರು ಸರಬರಾಜು ಮಾಡುತ್ತಿರುವ ಟ್ಯಾಂಕರ್ ಚಾಲಕರು ನಗರ ವ್ಯಾಪ್ತಿಯಲ್ಲಿ ಸಮರ್ಪಕ ನೀರು ಪೂರೈಸದೆ ನಗರಸಭೆ ಆಡಳಿತದಿಂದ ಬಿಲ್ ಲೂಟಿಗೈಯುತ್ತಿದ್ದು, ಇದಕ್ಕೆ ನಗರಸಭೆಯ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆಂದು ಶಿವಾಜಿನಗರ ವಾರ್ಡ್ ನಿವಾಸಿಗಳು ಆರೋಪಿಸಿದ್ದಾರೆ.

ಈ ಹಿಂದೆ ಉಳ್ಳಾಲ ನಗರಸಭೆಯಲ್ಲಿ ಪೌರಾಯುಕ್ತೆಯಾಗಿ ತಾನು ಆಡಿದ್ದೇ ಆಟ ಎಂಬಂತೆ ವರ್ತಿಸಿದ್ದ ವಾಣಿ ಆಳ್ವ ಮತ್ತು ಉಳ್ಳಾಲ ಠಾಣೆಯ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಕೈ ಪಕ್ಷದವರೇ ಅಪಸ್ವರ ಎತ್ತಿದ್ದರಿಂದ ಸ್ಪೀಕರ್ ಖಾದರ್ ಅವರು ಇಬ್ಬರನ್ನೂ ಉಳ್ಳಾಲದಿಂದ ಹೊರದಬ್ಬಿದ್ದರು. ಇದೀಗ ಐದು ವರುಷಗಳಿಂದ‌ ಉಳ್ಳಾಲ ನಗರಸಭೆಯಲ್ಲಿ ಯಾರದ್ದೋ ಪ್ರಭಾವದಿಂದ ಗಟ್ಟಿ ಠಿಕಾಣಿ ಹೂಡಿರುವ ಕಿರಿಯ ಅಭಿಯಂತರ ತುಳಸಿ ಅವರ ಮೇಲೂ ಕೈ ಪಕ್ಷದ ನಗರ ಸದಸ್ಯರೇ ದೂರಿದ್ದಾರೆ.

Mangalore, No Power to Borewells for 2 Years, Allegations of Water Supply Irregularities in Ullal, Ut khader takes class.