Sakleshpur Subrahmanya Railway Electrification: ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೇ ವಿದ್ಯುದೀಕರಣ ; ಜೂನ್ 1ರಿಂದ ಆರು ತಿಂಗಳ ಕಾಲ ಬೆಂಗಳೂರು- ಮಂಗಳೂರು- ಕಾರವಾರ ಹಗಲು ರೈಲು ರದ್ದು 

17-05-25 01:01 pm       Mangalore Correspondent   ಕರಾವಳಿ

ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೇ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರದಿಂದ ಮಂಗಳೂರು, ಕಾರವಾರ ನಡುವೆ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. 

ಮಂಗಳೂರು, ಮೇ.17: ಸಕಲೇಶಪುರ- ಸುಬ್ರಹ್ಮಣ್ಯ ರೈಲ್ವೇ ಮಾರ್ಗದಲ್ಲಿ ವಿದ್ಯುದೀಕರಣ ಕಾಮಗಾರಿ ಹಿನ್ನೆಲೆಯಲ್ಲಿ ಬೆಂಗಳೂರಿನ ಯಶವಂತಪುರದಿಂದ ಮಂಗಳೂರು, ಕಾರವಾರ ನಡುವೆ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. 

ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರೋಡ್​ ಮಾರ್ಗದಲ್ಲಿ ಜೂನ್ 1 ರಿಂದ ನವೆಂಬರ್ 1, 2025ರ ವರೆಗೆ ರೈಲ್ವೇ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ. ಈ ಅವಧಿಯಲ್ಲಿ ಮಂಗಳೂರು - ಬೆಂಗಳೂರು ನಡುವಿನ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಪಡಿಸಲಾಗಿದೆ. ಜೂನ್​ನಿಂದ ನವೆಂಬರ್​​ ವರೆಗೆ ಎಂದರೆ ಒಟ್ಟು ಆರು ತಿಂಗಳ ಕಾಲ ರೈಲು ಸಂಚಾರ ಇರುವುದಿಲ್ಲ.

ಮೇ 31 ರಿಂದ 2025ರ ನವೆಂಬರ್ 1 ವರೆಗೆ ಪ್ರತಿ ಶನಿವಾರ ಬೆಂಗಳೂರಿನ ಯಶವಂತಪುರದಿಂದ ಮಂಗಳೂರು ಜಂಕ್ಷನ್​ಗೆ ಸಂಚರಿಸುವ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16539) ರದ್ದು ಆಗಲಿದೆ. ಅದೇ ರೀತಿ ಜೂನ್ 1 ರಿಂದ ನವೆಂಬರ್ 2ರ ವರೆಗೆ ಪ್ರತಿ ಭಾನುವಾರ ಮಂಗಳೂರಿನಿಂದ ಯಶವಂತಪುರಕ್ಕೆ ತೆರಳುವ ಸಾಪ್ತಾಹಿಕ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16540) ಕೂಡ ಇರುವುದಿಲ್ಲ.

ಜೂನ್ 1 ರಿಂದ ಅಕ್ಟೋಬರ್ 30, 2025 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರ ಸಂಚರಿಸುವ ಯಶವಂತಪುರದಿಂದ ಮಂಗಳೂರು ಜಂಕ್ಷನ್​ ವರೆಗೆ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575) ರದ್ದು ಆಗಲಿದೆ. ಇದರ ಜೊತೆಗೆ ಜೂನ್ 2ರಿಂದ ಅಕ್ಟೋಬರ್ 31ರ ವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಚರಿಸುವ ಮಂಗಳೂರು ಟು ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16576) ಸಹ ರದ್ದು ಆಗಲಿದೆ. 

ಜೂನ್ 2 ರಿಂದ ಅಕ್ಟೋಬರ್ 31ರ ವರೆಗೆ ಸೋಮವಾರ, ಬುಧವಾರ ಮತ್ತು ಶುಕ್ರವಾರ ಯಶವಂತಪುರದಿಂದ ಕಾರವಾರಗೆ ತೆರಳುವ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16515) ಸಂಚಾರ ಇರುವುದಿಲ್ಲ. ಜೂನ್ 3 ರಿಂದ ನವೆಂಬರ್ 1 ರವರೆಗೆ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಸಂಚರಿಸುವ ಕಾರವಾರ ಟು ಯಶವಂತಪುರ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16516) ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.

Sakleshpur Subrahmanya Railway Electrification, Daytime Bengaluru Mangaluru Karwar Trains Cancelled for Six Months from June 1.