Manjunath Bhandary, Kukke Temple, Mangalore: ಮೇ 16ರಂದು ಸಿದ್ದರಾಮಯ್ಯ ಮಂಗಳೂರಿಗೆ, ನೂತನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನೆ, ಫಲಾನುಭವಿಗಳಿಗೆ ಸವಲತ್ತು ವಿತರಣೆ ; ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಮಾಜಿ ರೌಡಿಶೀಟರ್ ನೇಮಕ ಬಗ್ಗೆ ಮಂಜುನಾಥ ಭಂಡಾರಿ ಸಮರ್ಥನೆ 

14-05-25 08:05 pm       Mangalore Correspondent   ಕರಾವಳಿ

ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಲಿದ್ದು ಈ ವೇಳೆ ದೇಶದಲ್ಲೇ ಅತ್ಯಂತ ದೊಡ್ಡದಾದ ಹಾಗೂ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ. 

ಮಂಗಳೂರು, ಮೇ 14 : ಮೇ 16ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಲಿದ್ದು ಈ ವೇಳೆ ದೇಶದಲ್ಲೇ ಅತ್ಯಂತ ದೊಡ್ಡದಾದ ಹಾಗೂ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ಒಳಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದ್ದಾರೆ. 

ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಮುಖ್ಯಮಂತ್ರಿ ಪಾಲ್ಗೊಳ್ಳುವ ಕಾರ್ಯಕ್ರಮವನ್ನು ಅವಿಸ್ಮರಣೀಯಗೊಳಿಸಬೇಕು ಎಂಬ ನಿಟ್ಟಿನಲ್ಲಿ ಅಂದು 8000 ಮಂದಿ ಫಲಾನುಭವಿಗಳಿಗೆ ಮನೆಯ ಆರ್ ಟಿಸಿ ವಿತರಣೆ, ಅಲ್ಪಸಂಖ್ಯಾತ ನಿಗಮ, ಅಂಬೇಡ್ಕರ್ ನಿಗಮ ಸಹಿತ ಮೂರು ನಿಗಮಗಳ ಫಲಾನುಭವಿಗಳಿಗೆ ವಿವಿಧ ಯೋಜನೆಗಳ ಸವಲತ್ತುಗಳ ವಿತರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದರು.

”ಅದೇ ದಿನ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕಬಡ್ಡಿ ಮತ್ತು ಬ್ಯಾಡ್ಮಿಂಟನ್ ಕ್ರೀಡಾಂಗಣ ಉದ್ಘಾಟನೆಯನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಗೆ 8 ವರ್ಷಗಳ ಹಿಂದೆಯೇ ಶಿಲಾನ್ಯಾಸ ನೆರವೇರಿತ್ತಾದರೂ ಅದು ಪೂರ್ಣಗೊಂಡಿರಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ವಿಧಾನಸಭಾ ಅಧ್ಯಕ್ಷರು ಸೇರಿ ಎರಡು ಮೂರು ಬಾರಿ ಜಿಲ್ಲಾಧಿಕಾರಿ ಕಚೇರಿಯನ್ನು ಪೂರ್ತಿಗೊಳಿಸಲು ಸಚಿವ ಕೃಷ್ಣ ಭೈರೇಗೌಡ ಅವರಿಗೆ ಮನವಿ ಮಾಡಿದ್ದೆವು. ನಂತರ ಅವರನ್ನು ಕರೆದುಕೊಂಡು ಬಂದು ತೋರಿಸಿದಾಗ ಹೆಚ್ಚುವರಿ 30 ಕೋಟಿ ರೂ. ಅಂದಾಜು ಅನುದಾನ ಬೇಕಾಗಬಹುದು ಎಂದು ಮನವರಿಕೆ ಮಾಡಲಾಗಿತ್ತು. ಬಳಿಕ ವಿಶೇಷ ಮುತುವರ್ಜಿ ವಹಿಸಿ 20 ಕೋಟಿ ರೂ. ಬಿಡುಗಡೆ ಮಾಡಿ ಕಟ್ಟಡ ಪೂರ್ಣಗೊಳ್ಳಲು ಸಹಕರಿಸಿದ್ದಾರೆ. ಸುಮಾರು 75 ಕೋಟಿ ರೂ. ವೆಚ್ಚದಲ್ಲಿ 22 ಬೇರೆ ಬೇರೆ ಇಲಾಖೆಗಳ ಕಚೇರಿಗಳನ್ನು ಒಂದೇ ಕಡೆ ನಿರ್ಮಾಣ ಮಾಡುವ ಮೂಲಕ ಜನರಿಗೆ ತಮ್ಮ ಕೆಲಸವನ್ನು ಸುಸುತ್ರವಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು. 



ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಗೆ ಮಾಜಿ ರೌಡಿಶೀಟರ್ ಒಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿದ ಬಗ್ಗೆ ಕೇಳಿದ ಪ್ರಶ್ನೆಗೆ, ನನಗೇನೂ ಗೊತ್ತಿಲ್ಲ ಎಂದರು. ಬಿಜೆಪಿಯವರು ಭಾರೀ ಟೀಕೆ ಮಾಡಿದ್ದಾರೆ ಎಂದಾಗ, ಬಿಜೆಪಿಯಲ್ಲಿ ರೌಡಿಶೀಟ್ ಇದ್ದವರು ಎಷ್ಟು ಜನ ಇಲ್ಲ. ಇವರೂ ಅಷ್ಟೇ, ರೌಡಿಶೀಟ್ ತೆರವು ಆದವರು. ಈಗ ರೌಡಿ ಲಿಸ್ಟ್ ನಲ್ಲಿ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು. 

ಸಿದ್ದರಾಮಯ್ಯ ಯುದ್ಧ ಬೇಡ ಎಂದರೆ ಬಿಜೆಪಿಗರು ಮೇಲೆ ಹಾರುತ್ತಾರೆ, ಅದೇ ಅಮೇರಿಕಾ ಅಧ್ಯಕ್ಷ ಟ್ರಂಪ್ ಯುದ್ಧ ಮಾಡ್ಬೇಡಿ ಎಂದರೆ ಬಿಜೆಪಿ ನಾಯಕರು ತುಟಿ ಬಿಚ್ಚುವುದಿಲ್ಲ. ಭಾರತ ಪಾಕಿಸ್ತಾನ ಯುದ್ಧದ ಕುರಿತು ಚಕ್ರವರ್ತಿ ಸೂಲಿಬೆಲೆ ಸೈನ್ಯ ಮತ್ತು ಯುದ್ಧದ ಸಂಪೂರ್ಣ ಮಾಹಿತಿಯನ್ನು ಹೊಂದಿರುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಾರೆ. ಅವರ ಪೋಸ್ಟ್ ಗಳು ಸಮಾಜದ ಜನರ ದಾರಿ ತಪ್ಪಿಸುವಂತಿದ್ದು ಈ ಕುರಿತು ಪೊಲೀಸರಿಗೆ ದೂರು ನೀಡಲಾಗುವುದು. ಇದು ನಿಜವಾದ ದೇಶದ್ರೋಹದ ಕೆಲಸವಾಗಿದ್ದು ಈ ಬಗ್ಗೆ ಜನರು ಜಾಗೃತಗೊಳ್ಳಬೇಕು ಎಂದು ಇದೇ ಸಂದರ್ಭದಲ್ಲಿ ಮಂಜುನಾಥ ಭಂಡಾರಿ ಹೇಳಿದರು. 

ಪತ್ರಿಕಾಗೋಷ್ಟಿಯಲ್ಲಿ  ಮಿಥುನ್ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವ, ಎಂ.ಎಸ್. ಮುಹಮ್ಮದ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್, ರಕ್ಷಿತ್ ಶಿವರಾಮ್, ಸಾಹುಲ್ ಹಮೀದ್ ಕೆ, ಸುಹಾನ್ ಆಳ್ವ, ಬಶೀರ್ ಕಣ್ಣೂರ್, ಶುಭೋದಯ ಆಳ್ವ, ನಝೀರ್ ಬಜಾಲ್ ಉಪಸ್ಥಿತರಿದ್ದರು.

CM to Visit Mangalore on May 16 for Inauguration of New DC Office, Manjunath Bhandari Defends Appointment of Former Rowdy Sheeter to Kukke Temple.