Mangalore, Suhas Shetty, NIA, Sunil Kumar: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ಬಿಜೆಪಿ ಶಾಸಕರ ನಿಯೋಗದಿಂದ ಪೊಲೀಸ್ ಕಮಿಷನರ್ ಭೇಟಿ, ರಾಜ್ಯಪಾಲರಿಗೆ ದೂರು ಕೊಟ್ಟು ಎನ್ಐಎ ತನಿಖೆ ಕೇಳ್ತೀವಿ, ಪೊಲೀಸ್ ವೈಫಲ್ಯ ಬಗ್ಗೆ ಹೇಳ್ತೀವಿ, ಗೃಹ ಸಚಿವರು ಮುಸ್ಲಿಮರಿಗೆ ಹೆದರ್ತಿದ್ದಾರೆ..  

08-05-25 04:14 pm       Mangalore Correspondent   ಕರಾವಳಿ

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿದ್ದು, ಪೊಲೀಸ್ ತನಿಖೆಯಲ್ಲಾಗಿರುವ ವೈಫಲ್ಯ ಮತ್ತು ನಿರ್ಲಕ್ಷ್ಯದ ಬಗ್ಗೆ ಗಮನ ಹರಿಸುವಂತೆ ಒತ್ತಾಯ ಮಾಡಿದ್ದಾರೆ.

ಮಂಗಳೂರು, ಮೇ 8 : ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂಬಂಧಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರನ್ನು ಭೇಟಿಯಾಗಿದ್ದು, ಪೊಲೀಸ್ ತನಿಖೆಯಲ್ಲಾಗಿರುವ ವೈಫಲ್ಯ ಮತ್ತು ನಿರ್ಲಕ್ಷ್ಯದ ಬಗ್ಗೆ ಗಮನ ಹರಿಸುವಂತೆ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಈ ಬಗ್ಗೆ ಎನ್ಐಎ ತನಿಖೆಗೆ ರಾಜ್ಯ ಸರಕಾರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಿದ್ದಾರೆ.

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನೇರ ಭಾಗಿಯಾದ ಆರೋಪಿಗಳು, ಅವರಿಗೆ ಸಹಕರಿಸಿದವರು, ವಿದೇಶದಿಂದ ಫಂಡಿಂಗ್ ಆಗಿರುವುದು, ಸ್ಥಳದಲ್ಲಿದ್ದ ಮಹಿಳೆಯರು ಆರೋಪಿಗಳಿಗೆ ಸಹಾಯ ಮಾಡಿರುವುದು, ಕುಡುಪುನಲ್ಲಿ ಅಕಸ್ಮಾತ್ ಆಗಿದ್ದ ಮುಸ್ಲಿಂ ಯುವಕನ ಹತ್ಯೆಗೆ ಎದುರಾಗಿ ಕೋಮು ದ್ವೇಷದ ಹತ್ಯೆ ಮಾಡಿರುವುದು, ಪ್ರಕರಣದಲ್ಲಿ ಇತರೇ ಆರೋಪಿಗಳನ್ನು ಯಾಕೆ ಬಂಧನ ಮಾಡದಿರುವುದು ಇತ್ಯಾದಿ ವಿಚಾರಗಳ ಬಗ್ಗೆ ಸುದೀರ್ಘ ಐದು ಪುಟಗಳ ದೂರು ಪತ್ರವನ್ನು ಬಿಜೆಪಿ ಶಾಸಕರ ನಿಯೋಗ ಪೊಲೀಸ್ ಕಮಿಷನರಿಗೆ ಕೊಟ್ಟಿದ್ದು, ಹಣಕಾಸು ವಿಚಾರ ಸೇರಿದಂತೆ ಎಲ್ಲವನ್ನೂ ಸಮಗ್ರ ತನಿಖೆ ಮಾಡಬೇಕು, ಇಲ್ಲದೇ ಇದ್ದರೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕಮಿಷನರ್ ಭೇಟಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸುನಿಲ್ ಕುಮಾರ್, ಮೇ 11ಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ದಕ್ಷಿಣ ಕನ್ನಡ ಜಿಲ್ಲೆಗೆ ಬರಲಿದ್ದು, ಈ ವೇಳೆ ಸುಹಾಸ್ ಮನೆಗೂ ಭೇಟಿ ಕೊಡಿಸುತ್ತೇವೆ. ರಾಜ್ಯ ಸರಕಾರ ಎನ್ಐಎ ತನಿಖೆಗೆ ಒಪ್ಪಿಸದೇ ಇದ್ದರೆ ರಾಜ್ಯಪಾಲರನ್ನು ಭೇಟಿಯಾಗಿ ಒತ್ತಾಯ ಮಾಡುತ್ತೇವೆ. ಅಗತ್ಯ ಬಿದ್ದರೆ ಪ್ರತಿಭಟನೆಯನ್ನೂ ಮಾಡುತ್ತೇವೆ. ಪ್ರವೀಣ್ ನೆಟ್ಟಾರು ಅವರನ್ನು ಕೊಂದ ರೀತಿಯಲ್ಲೇ ಸಮಾಜ ವಿರೋಧಿ ಶಕ್ತಿಗಳು ಒಟ್ಟಾಗಿ ಈ ಕೊಲೆಯನ್ನು ಮಾಡಿದ್ದಾರೆ. ಇಂತಹ ಸ್ಥಿತಿಯಾದರೆ ಸಾಮಾನ್ಯ ಹಿಂದುಗಳು ಬದುಕಲಾರದ ಸ್ಥಿತಿಯಾಗುತ್ತದೆ ಎಂದರು.  

ಗೃಹ ಸಚಿವರು ಎನ್ಐಎ ತನಿಖೆ ಅಗತ್ಯವಿಲ್ಲ, ಪೊಲೀಸರು ಸಮರ್ಥರಿದ್ದಾರೆ ಎಂದಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ, ಗೃಹ ಸಚಿವರು ಮಂಗಳೂರಿಗೆ ಬಂದಿದ್ದಾಗ ಮುಸ್ಲಿಂ ಮುಖಂಡರು ಮೇಜು ಕುಟ್ಟಿ ಮಾತನಾಡಿದ್ದಕ್ಕೆ ಹೆದರಿದ್ದಾರೆ. ಮುಸ್ಲಿಂ ಮುಖಂಡರ ಬಗ್ಗೆ ಹೆದರಿಕೆ ಇರುವುದರಿಂದ ಎನ್ಐಎ ತನಿಖೆಗೆ ಕೊಡುವುದಿಲ್ಲ ಎನ್ನುತ್ತಿದ್ದಾರೆ. ನಾವು ಸಮಾಜವಿರೋಧಿ ಶಕ್ತಿಗಳು ಇದರಲ್ಲಿ ಶಾಮೀಲಾಗಿದ್ದಾರೆ, ಹಲವರ ಕೈವಾಡ ಇದೆಯೆಂದು ಹೇಳುತ್ತಿದ್ದೇವೆ. ಇವರು ಎನ್ಐಎಗೆ ಕೊಡೋದಿಲ್ಲ ಎಂದು ಮೊದಲೇ ಹೇಗೆ ಹೇಳುತ್ತಾರೆ. ಪಾಕಿಸ್ತಾನದ ಜೊತೆ ಸಂಘರ್ಷ ಸ್ಥಿತಿ ಇರುವುದರಿಂದ ಈ ಬಗ್ಗೆ ಗಮನ ಕೊಡುವುದು ನಿಧಾನ ಆಗಿದೆ, ಆದರೆ ಈ ವಿಚಾರವನ್ನು ಅರ್ಧಕ್ಕೆ ಬಿಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಅಧಿಕಾರ ಇರುವಾಗಲೇ ರೌಡಿಶೀಟರ್ ಹಾಕಿದ್ದಲ್ವೇ ಎಂಬ ಪ್ರಶ್ನೆಗೆ, ನಾನು ಚುನಾವಣೆಗೆ ನಿಲ್ಲುವಾಗಲೇ ಸಾಕಷ್ಟು ಕೇಸುಗಳಿದ್ದವು. ಕೊಲೆಯತ್ನ, ಬೆದರಿಕೆ ಇತ್ಯಾದಿ ಪ್ರಕರಣಗಳಿದ್ದವು. ಹಿಂದುತ್ವ ಪರ ಕೆಲಸ ಮಾಡುತ್ತಿದ್ದಾಗ ಕೇಸುಗಳು ಸಾಮಾನ್ಯ. ಹಾಗಂತ, ನಾವೇನು ಕ್ರಿಮಿನಲ್ ಆಗಿದ್ದೇವಾ.. ಹಿಂದುತ್ವ ಕಾರ್ಯಕರ್ತನ ಮೇಲೆ ರೌಡಿಶೀಟ್ ಇದೆಯೆಂದ ಮಾತ್ರಕ್ಕೆ ಕೊಲ್ಲುವುದು ಸರಿ ಎನ್ನುತ್ತಾರೆಯೇ.. ಕೊಲೆ ಪ್ರಕರಣದಲ್ಲಿ ದೇಶದ್ರೋಹಿ ಶಕ್ತಿಗಳು, ನಿಷೇಧಿತ ಪಿಎಫ್ಐ ಕೈವಾಡ ಇದೆಯೆಂಬ ಗಂಭೀರ ಆರೋಪ ಇದೆ. ಇದಕ್ಕಾಗಿ ಎನ್ಐಎ ತನಿಖೆ ಮಾಡಬೇಕೆನ್ನುವುದು ನಮ್ಮ ಆಗ್ರಹ ಎಂದರು.

ಬಿಜೆಪಿ ಶಾಸಕರು, ಕೊಲೆ ಕೃತ್ಯದ ಸಂದರ್ಭ ಬುರ್ಖಾಧಾರಿ ಮಹಿಳೆಯರು ಆರೋಪಿಗಳಿಗೆ ಸಹಕಾರ ನೀಡಿದ್ದಾರೆ, ಅವರನ್ನು ಯಾಕೆ ಬಂಧನ ಮಾಡಿಲ್ಲ ಎಂದು ಕಮಿಷನರ್ ಬಳಿ ಕೇಳಿದಾಗ, ಕೊಲೆ ಘಟನೆಯಲ್ಲಿ ಅವರ ಪಾತ್ರ ಇಲ್ಲ. ನಾವು ಆ ಬಗ್ಗೆ ವಿಚಾರಮೆ ಮಾಡಿದ್ದೇವೆ. ಮಹಿಳೆಯರು ಅಲ್ಲಿಯೇ ಪಕ್ಕದ ರೆಸ್ಟೋರೆಂಟಿನಲ್ಲಿ ಪರೋಟಾ ತರಲು ಬಂದಿದ್ದರಂತೆ. ಆರೋಪಿಗಳಲ್ಲಿ ಒಬ್ಬನಾದ ನೌಶಾದ್ ಸಂಬಂಧಿಕರಾಗಿದ್ದು, ಏನು ವಿಷಯ ಅಂತ ಕೇಳಿದ್ದಾರೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರಂತೆ. ಆದರೆ ಬಿಜೆಪಿ ಶಾಸಕರು ಕಮಿಷನರ್ ಮಾತನ್ನು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ನಿಯೋಗದಲ್ಲಿ ಸಂಸದ ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಮತ್ತಿತರರು ಇದ್ದರು.

Suhas Shetty Murder Case,  BJP MLAs Meet Mangalore Police Commissioner, Demand NIA Probe, Accuse Police of Failure and Home Minister of Appeasing Muslims.