Puttur Elephant Attack: ಕಾಡಾನೆ ತಿವಿತಕ್ಕೆ ಪುತ್ತೂರಿನಲ್ಲಿ ವೃದ್ಧ ಮಹಿಳೆ ಬಲಿ ; ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, 15 ಲಕ್ಷ ಪರಿಹಾರಕ್ಕೆ ಶಾಸಕ ಅಶೋಕ ರೈ ಸೂಚನೆ 

29-04-25 11:00 pm       Mangalore Correspondent   ಕರಾವಳಿ

ಕಾಡಾನೆ ತಿವಿತಕ್ಕೆ ಒಳಗಾಗಿ 65 ವರ್ಷದ ವೃದ್ಧ ಮಹಿಳೆಯೊಬ್ಬರು ಬಲಿಯಾದ ಘಟನೆ ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅರ್ತ್ಯಡ್ಕ ಎಂಬಲ್ಲಿ ನಡೆದಿದೆ.

ಪುತ್ತೂರು, ಎ.29 : ಕಾಡಾನೆ ತಿವಿತಕ್ಕೆ ಒಳಗಾಗಿ 65 ವರ್ಷದ ವೃದ್ಧ ಮಹಿಳೆಯೊಬ್ಬರು ಬಲಿಯಾದ ಘಟನೆ ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅರ್ತ್ಯಡ್ಕ ಎಂಬಲ್ಲಿ ನಡೆದಿದೆ.

ಕೆಎಫ್ ಡಿಸಿಯ ನಿವೃತ್ತ ಉದ್ಯೋಗಿ, ಸ್ಥಳೀಯ ನಿವಾಸಿ ರಬ್ಬರ್ ಟ್ಯಾಪಿಂಗ್ ಹೋಗುತ್ತಿದ್ದ ಸೆಲ್ಲಮ್ಮ (65) ಮೃತರು. ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅರಣ್ಯ ಇಲಾಖೆಗೆ ಸೇರಿದ ರಬ್ಬರ್ ತೋಟದಲ್ಲಿ ಘಟನೆ ನಡೆದಿದೆ. ಮಹಿಳೆ ಸಾವಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಸ್ಥಳೀಯ ಗ್ರಾಮಸ್ಥರು ತೀವ್ರ ತರಾಟೆಗೆ ಎತ್ತಿಕೊಂಡಿದ್ದಾರೆ. ಘಟನೆ ಬೆಳಗ್ಗೆ ನಡೆದಿದ್ದರೂ ಇಷ್ಟು ವಿಳಂಬವಾಗಿ ಬಂದಿದ್ದೀರಿ ಎಂದು ಮಧ್ಯಾಹ್ನ ಹೊತ್ತಿಗೆ ಸ್ಥಳಕ್ಕಾಗಮಿಸಿದ ಅಧಿಕಾರಿಗಳನ್ನು ಜೋರು ಮಾಡಿದ್ದಾರೆ.

ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ಪ್ರಮುಖರು ಭೇಟಿ ನೀಡಿದ್ದಾರೆ. ಕರ್ನಾಟಕ ಸರಕಾರದಿಂದ 15 ಲಕ್ಷ ಪರಿಹಾರದ ಜೊತೆಗೆ ಕೆಎಫ್ ಡಿಸಿ ಇಲಾಖೆಯಿಂದ ಪ್ರತ್ಯೇಕ ಪರಿಹಾರ ನೀಡಬೇಕು ಎಂದು ಸಂಜೀವ ಮಠಂದೂರು ಸ್ಥಳೀಯರೊಂದಿಗೆ ಸೇರಿ ಆಗ್ರಹ ಮಾಡಿದ್ದಾರೆ. ಕೆಲವು ವರ್ಷಗಳಿಂದ ಕಾಡಾನೆ ಉಪಟಳ ಜಾಸ್ತಿಯಾಗಿದೆ. ಈ ಭಾಗಕ್ಕೆ ಬರುವ ಕಾಡಾನೆಗಳನ್ನು ಇಲ್ಲಿಂದ ಹೊರಕ್ಕಟ್ಟ ಬೇಕು. ಇಲ್ಲಿಂದ ಹಿಡಿದು ನಾಗರಹೊಳೆಯತ್ತ ಬಿಡುವ ಕೆಲಸ ಆಗಬೇಕು ಎಂದು ಹೇಳಿದರು.

ಸ್ಥಳಕ್ಕೆ ಬಂದ ಶಾಸಕ ಅಶೋಕ್ ರೈ ಸ್ಥಳೀಯರ ಅಹವಾಲು ಕೇಳಿ, ಅರಣ್ಯ ಇಲಾಖೆಯಿಂದ 15 ಲಕ್ಷ ಪರಿಹಾರ ಕೊಡಿಸುವ ಬಗ್ಗೆ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಕೆಎಫ್ ಡಿಸಿ ಉದ್ಯೋಗಿ ಆಗಿದ್ದರೆ ಅಲ್ಲಿಂದ ಪರಿಹಾರ ಕೊಡಿಸಬಹುದು. ಅವರ ಕುಟುಂಬಸ್ಥರಿಗೆ ಉದ್ಯೋಗ ಕೊಡುವ ಕೆಲಸ ಮಾಡಿಸುತ್ತೇನೆ ಎಂದು ಹೇಳಿದರು. ಕಾಡಿನಲ್ಲಿ ಪ್ರಾಣಿಗಳನ್ನು ತಡೆಗಟ್ಟಲು ಕಷ್ಟ. ಸುರಕ್ಷತೆ ಬಗ್ಗೆ ನಾವೇ ಮಾಡಿಕೊಳ್ಳಬೇಕೇ ವಿನಾ ಅವನ್ನು ಬರದಂತೆ ಮಾಡುವುದಕ್ಕೆ ನಾವು ಹೇಳಿದರೆ ಕೇಳುತ್ತಿದ್ದರೆ ಆಗ್ತಿತ್ತು. ಅದು ನಮ್ಮ ಭಾಷೆ ಕೇಳುವುದಿಲ್ಲ. ಹಾಗಾಗಿ ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕು, ಅದನ್ನು ಯಾವ ರೀತಿ ಮಾಡಬೇಕೋ ಅದನ್ನು ಮಾಡಿಸಬೇಕು ಎಂದರು.

ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ಹಿಂದಕ್ಕಟ್ಟಲು ಟಾಸ್ಕ್ ಫೋರ್ಸ್ ರಚಿಸುವುದಾಗಿ ಶಾಸಕರ ಮುಂದೆ ಭರವಸೆ ನೀಡಿದರು. ವರ್ಷದ ಹಿಂದೆ ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕಾಡಾನೆಯ ತಿವಿತಕ್ಕೆ ಇಬ್ಬರು ಬಲಿಯಾಗಿದ್ದರು. ಈ ಬಾರಿ ಮಳೆಗಾಲದ ಮೊದಲೇ ಆನೆ ಉಪಟಳ ಹೆಚ್ಚಿದ್ದು, ಜನರು ಬೆಳಗ್ಗೆ, ಸಂಜೆ ಅರಣ್ಯದಂಚಿನಲ್ಲಿ ಅಡ್ಡಾಡಲು ಹೆದರುವ ಸ್ಥಿತಿಯಾಗಿದೆ.

A wild elephant attacked a 65-year-old woman killing her on the spot at a rubber plantation of Karnataka Forest Development Corporation (KFDC) at Harthyadka, Kolthige village in Puttur taluk in Dakshina Kannada on Tuesday, the police said.