ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲೀಟ್ ; ಭಾರೀ ಶಂಕೆಗೀಡು ಮಾಡಿದ ಲೆಕ್ಕಪತ್ರ ಅಧಿಕಾರಿಗಳ ನಡೆ, ಫಾರೆನ್ಸಿಕ್ ತಜ್ಞರನ್ನು ಕರೆಸಿ ತನಿಖೆಗಿಳಿದ ಕಾಲೇಜು ಆಡಳಿತ

17-04-25 04:39 pm       Mangalore Correspondent   ಕರಾವಳಿ

ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಫೈಲ್ ದಿಢೀರ್ ಆಗಿ ಡಿಲೀಟ್ ಆಗಿದ್ದು ನಾನಾ ರೀತಿಯ ಶಂಕೆಗಳಿಗೆ ಎಡೆಮಾಡಿದೆ. ಘಟನೆಗೆ ಸಂಬಂಧಿಸಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಫಾರೆನ್ಸಿಕ್ ತಜ್ಞರನ್ನು ಕರೆಸಿ ಆಂತರಿಕ ತನಿಖೆಯನ್ನು ನಡೆಸುತ್ತಿದ್ದಾರೆ.

ಮಂಗಳೂರು, ಎ.17 : ದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಂದಾಗಿರುವ ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಫೈಲ್ ದಿಢೀರ್ ಆಗಿ ಡಿಲೀಟ್ ಆಗಿದ್ದು ನಾನಾ ರೀತಿಯ ಶಂಕೆಗಳಿಗೆ ಎಡೆಮಾಡಿದೆ. ಘಟನೆಗೆ ಸಂಬಂಧಿಸಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಫಾರೆನ್ಸಿಕ್ ತಜ್ಞರನ್ನು ಕರೆಸಿ ಆಂತರಿಕ ತನಿಖೆಯನ್ನು ನಡೆಸುತ್ತಿದ್ದಾರೆ. ಅಲ್ಲದೆ, ಸಂಸ್ಥೆಗೆ ಸಂಬಂಧಪಟ್ಟ ಮೂರು ಹಣಕಾಸು ಕಚೇರಿಗಳನ್ನು ಬಂದ್ ಮಾಡಲಾಗಿದೆ.

ಮೂಲಗಳ ಪ್ರಕಾರ, ಸಂಸ್ಥೆಗೆ ಸಂಬಂಧಪಟ್ಟ ಲೆಕ್ಕಪತ್ರಗಳು, ಸ್ಯಾಲರಿ ಸಂಬಂಧಿತ ಲೆಕ್ಕಗಳೆಲ್ಲ ಒಂದೇ ಸಾಫ್ಟ್ ವೇರ್ ನಲ್ಲಿ ಇದ್ದವು. ಒಂದು ವಾರದ ಹಿಂದೆ ಇವೆಲ್ಲ ದಿಢೀರ್ ಆಗಿ ಡಿಲೀಟ್ ಆಗಿದ್ದು ಹಣಕಾಸು ವಿಭಾಗದಲ್ಲಿ ಭಾರೀ ಎಡವಟ್ಟು ಸೃಷ್ಟಿಸಿದೆ. ಅನಿರೀಕ್ಷಿತವಾಗಿ ಡೀಲೀಟ್ ಆಗಿದೆಯೇ ಅಥವಾ ಉದ್ದೇಶಪೂರ್ವಕ ಡಿಲೀಟ್ ಮಾಡಲಾಗಿದೆಯೇ ಎನ್ನುವ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಯಾವುದೇ ಸಾಫ್ಟ್ ವೇರ್ ಸಂಬಂಧಿತ ಫೈಲ್ ಗಳಿಗೆ ಕಂಪ್ಯೂಟರ್ ನಲ್ಲಿ ಬ್ಯಾಕಪ್ ಇರುತ್ತದೆ, ಇಲ್ಲಿ ಡಿಲೀಟ್ ಆಗಿರುವ ಫೈಲ್ ಗಳಿಗೆ ಬ್ಯಾಕಪ್ ಸಿಕ್ಕಿಲ್ಲ. ಬ್ಯಾಕಪ್ ಕೂಡ ಇಲ್ಲದ ರೀತಿ ಡಿಲೀಟ್ ಮಾಡಿರುವುದು ಲೆಕ್ಕಪತ್ರ ಅಧಿಕಾರಿಗಳ ಬಗ್ಗೆ ಶಂಕೆ ಉಂಟುಮಾಡಿದೆ.

ಇದೇ ವೇಳೆ, ಎನ್ಐಟಿಕೆ ಸಂಸ್ಥೆಯ ಪಿಆರ್ ಓ ಹೇಳಿಕೆ ಬಿಡುಗಡೆ ಮಾಡಿದ್ದು, ಸಂಸ್ಥೆಯ ಆಡಳಿತ ವಿಭಾಗದಲ್ಲಿ ಆಗಿರುವ ವೈಪರೀತ್ಯಕ್ಕೆ ಸರ್ವರ್ ವೈಫಲ್ಯ ಕಾರಣ. ಪ್ರಕರಣಕ್ಕೆ ಸಂಬಂಧಿಸಿ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಆಂತರಿಕ ತನಿಖೆ ನಡೆಸುತ್ತಿದ್ದಾರೆ. ತನಿಖಾ ತಂಡದಲ್ಲಿ ಹೊರಗಿನ ತಜ್ಞರನ್ನೂ ಸೇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಎನ್ಐಟಿಕೆ ಸುರತ್ಕಲ್ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಮೂರು ಕಡೆ ಹಣಕಾಸು ಸಂಬಂಧಿತ ಕಚೇರಿಗಳಿದ್ದು ಕಳೆದ ವಾರ ಸಾಫ್ಟ್ ವೇರ್ ಡಿಲೀಟ್ ಆಗಿದೆಯೆಂದು ಅಲ್ಲಿನ ಸಿಬಂದಿ ಮಾಹಿತಿ ನೀಡಿದ್ದಾರೆ.

ಹಣಕಾಸು ವಿಚಾರಕ್ಕೆ ಸಂಬಂಧಪಟ್ಟ ಸ್ಯಾಲರಿ, ಇನ್ನಿತರ ಬಿಲ್ ಗಳು, ಪ್ರಸಕ್ತ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಿಲ್ಗಳು ಹೀಗೆ ಅತ್ಯಂತ ಮಹತ್ವದ ಫೈಲ್ ಗಳು ಡಿಲೀಟ್ ಆಗಿವೆ. ಫೈಲ್ಗಳನ್ನು ರಿಟ್ರೀವ್ ಮಾಡದ ರೀತಿ ಡಿಲೀಟ್ ಮಾಡಲಾಗಿದೆ ಎನ್ನುವುದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಇದರಿಂದ ಬೋಧಕ ಮತ್ತು ಬೋಧಕೇತರ ಸಿಬಂದಿಯ ಸ್ಯಾಲರಿ, ಗುತ್ತಿಗೆ ಕಾರ್ಮಿಕರ ಬಿಲ್, ಇನ್ನಿತರ ಕಾಮಗಾರಿಗಳ ಬಿಲ್ ಕ್ಲಿಯರ್ ಮಾಡುವಲ್ಲಿ ತೊಂದರೆ ಉಂಟಾಗಲಿದೆ. ಘಟನೆ ಬೆನ್ನಲ್ಲೇ ಅಕೌಂಟ್ಸ್ ವಿಭಾಗದಲ್ಲಿದ್ದ ಹಲವು ಸಿಬಂದಿಯನ್ನು ಕ್ಯಾಂಪಸ್ ಒಳಗಡೆಯೇ ಬೇರೆ ಕಡೆಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಹಿರಿಯ ಪ್ರಾಧ್ಯಾಪಕರೊಬ್ಬರಲ್ಲಿ ಕೇಳಿದಾಗ, ಹಣಕಾಸು ವಿಭಾಗದಲ್ಲಿ ಈ ರೀತಿ ಫೈಲ್ಗಳು ಡಿಲೀಟ್ ಆಗಿರುವುದು ಗಂಭೀರ ವಿಷಯ. ಅದರಲ್ಲೂ ಬ್ಯಾಕಪ್ ಇಲ್ಲದ ರೀತಿ ಡಿಲೀಟ್ ಆಗಿದ್ದು ಹೇಗೆ ಎನ್ನುವುದು ಪ್ರಶ್ನೆ. ನಮಗೂ ಇದು ಅಚ್ಚರಿ ತಂದಿದೆ ಎಂದು ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ಫಾರೆನ್ಸಿಕ್ ತಜ್ಞರು ಸಹಿತ ಉನ್ನತ ಮಟ್ಟದ ಅಧಿಕಾರಿಗಳು ಸಂಸ್ಥೆಯ ಕಚೇರಿಯಲ್ಲಿ ತನಿಖೆಯಲ್ಲಿ ತೊಡಗಿದ್ದಾರೆ. ಅಲ್ಲದೆ, ಇಂಜಿನಿಯರಿಂಗ್ ಕಾಲೇಜಿನಲ್ಲಿರುವ ಖಾಯಂ ಮತ್ತು ಅರೆಕಾಲಿಕ ಸಿಬಂದಿಯನ್ನೂ ಒಬ್ಬೊಬ್ಬರಾಗಿಯೇ ಕರೆಸಿಕೊಂಡು ಮಾಹಿತಿ ಪಡೆಯುತ್ತಿದ್ದಾರೆ. ದೇಶದ ಪ್ರತಿಷ್ಠಿತ ಸರಕಾರಿ ಸಂಸ್ಥೆಯೊಂದರ ಹಣಕಾಸು ಕಚೇರಿಯಲ್ಲಿ ಈ ರೀತಿ ಅನುಮಾನಾಸ್ಪದ ಬೆಳವಣಿಗೆ ಉಂಟಾಗಿರುವುದು ಭಾರೀ ಅವ್ಯವಹಾರದ ಬಗೆಗೂ ಶಂಕೆ ಮೂಡಿಸಿದೆ.