Mangalore Hotel Moti Mahal closed, Milagres: ಮಂಗಳೂರಿನ ಮೊಟ್ಟಮೊದಲ ಐಷಾರಾಮಿ ಹೊಟೇಲ್ ಮೋತಿಮಹಲ್ ಇನ್ನು ನೆನಪು ಮಾತ್ರ ! ಎಜೆ ಶೆಟ್ಟಿ ಸ್ಥಾಪಿಸಿದ ಮೊದಲ ಉದ್ಯಮಕ್ಕೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ ! 

04-04-25 11:00 pm       Mangalore Correspondent   ಕರಾವಳಿ

ಮಂಗಳೂರು ನಗರದ ಮೊಟ್ಟಮೊದಲ ಐಷಾರಾಮಿ ಹೋಟೆಲ್ ಎಂದು ಖ್ಯಾತಿ ಗಳಿಸಿದ್ದ ಮೋತಿ ಮಹಲ್ ಇದೇ ಎಪ್ರಿಲ್ ಅಂತ್ಯಕ್ಕೆ ಬಾಗಿಲು ಎಳೆಯಲಿದೆ. ಮಿಲಾಗ್ರಿಸ್ ಚರ್ಚ್ ಮತ್ತು ಹೊಟೇಲ್ ಮಾಲಕರ ಭೂ ವಿವಾದಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಿದೆ. 

ಮಂಗಳೂರು, ಎ.4 : ಮಂಗಳೂರು ನಗರದ ಮೊಟ್ಟಮೊದಲ ಐಷಾರಾಮಿ ಹೋಟೆಲ್ ಎಂದು ಖ್ಯಾತಿ ಗಳಿಸಿದ್ದ ಮೋತಿ ಮಹಲ್ ಇದೇ ಎಪ್ರಿಲ್ ಅಂತ್ಯಕ್ಕೆ ಬಾಗಿಲು ಎಳೆಯಲಿದೆ. ಮಿಲಾಗ್ರಿಸ್ ಚರ್ಚ್ ಮತ್ತು ಹೊಟೇಲ್ ಮಾಲಕರ ಭೂ ವಿವಾದಕ್ಕೆ ಕೊನೆಗೂ ಅಂತಿಮ ಮುದ್ರೆ ಬಿದ್ದಿದೆ. 

ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ, ಹೋಟೆಲ್ ಮೋತಿಮಹಲನ್ನು ಇದ್ದ ರೀತಿಯಲ್ಲೇ ಜಮೀನಿನ ಮೂಲ ಮಾಲಕರಾದ ಮಿಲಾಗ್ರಿಸ್ ಚರ್ಚ್ ಆಡಳಿತಕ್ಕೆ ಬಿಟ್ಟುಕೊಡಬೇಕಿದೆ. ಇದಲ್ಲದೆ, ಕೋರ್ಟ್ ಜಟಾಪಟಿಗೆ ತಗಲಿದ ಖರ್ಚು 3 ಕೋಟಿ ರೂ.ವನ್ನು ಪರಿಹಾರ ರೂಪದಲ್ಲಿ ಪಾವತಿಸಬೇಕಾಗಿದೆ.

ಮಂಗಳೂರು ನಗರದ ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚ್ ಹಿಂಭಾಗದಲ್ಲಿರುವ ಭೂಮಿ ಚರ್ಚಿಗೆ ಸೇರಿದ್ದಾಗಿದ್ದು 1966ರಲ್ಲಿ 50 ವರ್ಷಗಳ ಲೀಸಿಗೆ ಪಡೆದು ಉದ್ಯಮಿ ಎಜೆ ಶೆಟ್ಟಿ ಹೊಟೇಲ್ ಸ್ಥಾಪಿಸಿದ್ದರು ಎನ್ನಲಾಗಿದೆ. ಐದಾರು ವರ್ಷಗಳ ಹಿಂದೆ ಚರ್ಚ್‌ ಆಡಳಿತ ಸಮಿತಿ ಮತ್ತು ಹೋಟೆಲ್ ಮಾಲಕರ ನಡುವೆ ಆರಂಭಗೊಂಡ ಕಾನೂನು ಸಮರ ತಾರ್ಕಿಕ ಅಂತ್ಯಕ್ಕೆ ಬಂದಿದ್ದು ಕಾನೂನು ಸಮರದಲ್ಲಿ ಚರ್ಚ್ ಆಡಳಿತಕ್ಕೆ ಜಯವಾಗಿದೆ.

ಆ ಕಾಲದ ಐಷಾರಾಮಿ ಹೊಟೇಲ್ !  

50 ವರ್ಷಗಳ ಹಿಂದಿನ ಕಾಲದಲ್ಲಿ ಸ್ಟಾರ್ ಹೊಟೇಲ್ ಸಂಸ್ಕೃತಿ ಇರಲಿಲ್ಲ. ಮುಂಬೈ, ದೆಹಲಿಯಲ್ಲಿದ್ದರೂ ಕರಾವಳಿಯ ಮಂಗಳೂರಿನಲ್ಲಿ ದೊಡ್ಡ ಹೊಟೇಲ್ ಎಂಬುದೇ ಇರಲಿಲ್ಲ. ಅಂದು ಕೇವಲ ಲಿಕ್ಕರ್ ಉದ್ಯಮಿಯಾಗಿದ್ದ ಎಜೆ ಶೆಟ್ಟಿ, ಈ ಜಾಗವನ್ನು ಲೀಸಿಗೆ ಪಡೆದು ಜಿಮ್ ಮತ್ತು ಈಜುಕೊಳ ಒಳಗೊಂಡ ವಿಲಾಸಿ ಸೌಲಭ್ಯಗಳುಳ್ಳ ಹೋಟೆಲ್ ಆರಂಭಿಸಿದ್ದರು. ಮಂಗಳ ಮಲ್ಟಿ ಕಸಿನ್ ರೆಸ್ಟೋರೆಂಟ್, ಮಧುವನ್ ವೆಜ್ ರೆಸ್ಟೋರೆಂಟ್, ಮೆಕ್ಸಿಲ್ ಬಾರ್, ತೈಚಿನ್ ಚೈನೀಸ್ ರೆಸ್ಟೋರೆಂಟ್, ಮೋತಿ ಸ್ವೀಟ್ಸ್, ಶೀತಲ್ ಹೆಸರಿನ ಈಜುಕೊಳ ಹೊಂದಿದ್ದ ಹೋಟೆಲ್ ಮೋತಿಮಹಲ್ ಮಂಗಳೂರಿನ ಪ್ರಪ್ರಥಮ ಲಕ್ಸುರಿ ಹೋಟೆಲ್ ಆಗಿ ಪ್ರಸಿದ್ಧಿ ಪಡೆದಿತ್ತು. ಹಾಲ್ ಕೂಡ ಇದ್ದುದರಿಂದ ಮದುವೆ ಸಮಾರಂಭಗಳ ಜೊತೆಗೆ ದೊಡ್ಡ ಕಂಪೆನಿಗಳ ಸಮ್ಮೇಳನವೂ ನಡೆಯುತ್ತಿತ್ತು.

ಆ ಕಾಲದಲ್ಲೇ ಆಧುನಿಕ ರೀತಿಯ ಎಲ್ಲ ವಿಭಾಗಗಳನ್ನು ತೆರೆದು ಸಿರಿವಂತರನ್ನು ವಿದೇಶಿ ಸಂಸ್ಕೃತಿಗೆ, ಹೊಸತನಕ್ಕೆ ಒಗ್ಗಿಸುವ ಪ್ರಯತ್ನವನ್ನು ಎಜೆ ಶೆಟ್ಟಿ ಮಾಡಿದ್ದರು. ಈ ಹೋಟೆಲ್ ನಲ್ಲಿ 90 ಕೊಠಡಿಗಳಿದ್ದು 1,000 ಆಸನ ಸಾಮರ್ಥ್ಯದ ಸಭಾಂಗಣವಿದೆ. ಆರು ದಶಕಗಳಲ್ಲಿ ಹೋಟೆಲ್ ಮೋತಿ ಮಹಲ್ ಕೇವಲ ಹೋಟೆಲ್ ಮಾತ್ರವಾಗಿರದೆ ಮಂಗಳೂರಿನ ಪ್ರಮುಖ ಹೆಗ್ಗುರುತಾಗಿತ್ತು. ಬಿಝಿನೆಸ್ ಮೀಟಿಂಗ್ ಗಳಿಗೆ, ಪಾರ್ಟಿಗಳಿಗೆ ಇತ್ಯಾದಿ ಎಲ್ಲ ರೀತಿಯ ಸಣ್ಣ, ದೊಡ್ಡ ಕಾರ್ಯಕ್ರಮಗಳಿಗೆ ಮೋತಿ ಮಹಲ್‌ಗೆ ಜನ ಹೋಗುತ್ತಿದ್ದರು. ಮೋತಿ ಮಹಲ್‌ನ ವೆಜ್ ರೆಸ್ಟೋರೆಂಟ್ ಆನಂತರ ಬಂದ ಸ್ಟಾರ್ ಹೊಟೇಲ್ಗಳ ನಡುವೆಯೂ ಖ್ಯಾತಿಯನ್ನು ಉಳಿಸಿಕೊಂಡಿತ್ತು. ಎಪ್ರಿಲ್ ನಂತರವೂ ಇವನ್ನೆಲ್ಲ ಹಾಗೆಯೇ ಉಳಿಸಿಕೊಳ್ತಾರಾ ಎನ್ನುವ ಕುತೂಹಲ ಇದೆ.

In a significant blow to the cultural landscape of Mangalore, the beloved Hotel Moti Mahal is set to close its doors permanently on April 15, following a legal defeat in a protracted land dispute with Milagres Church. This marks the end of an era for the historic establishment, which has been a cherished gathering place for locals and visitors alike. For decades, Hotel Moti Mahal has transcended its role as just a hotel; it has served as a vital pillar of Mangalore's identity and societal fabric.