Mangalore Police, Inspector Balakrishna: ಪ್ರಕರಣ ಮುಚ್ಚಿ ಹಾಕಲು ಲಂಚ, 50 ಗ್ರಾಮ್ ಚಿನ್ನಾಭರಣ ಗುಳುಂ ; ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಭಾನಗಡಿ ಬಗ್ಗೆ ಸಂತ್ರಸ್ತರಿಂದಲೇ ದೂರು, ಭ್ರಷ್ಟ ಅಧಿಕಾರಿಗೆ ಹೊರದಬ್ಬಿದ್ರೂ ಸಿಎಂ ಪದಕ, ಮಂಗಳೂರಿನಲ್ಲೇ ನಿಯೋಜನೆ ! 

03-04-25 10:14 pm       Dinesh Nayak, Mangaluru Correspondent   ಕರಾವಳಿ

ಭ್ರಷ್ಟಾಚಾರದ ಆರೋಪ ಹೊತ್ತು ಉಳ್ಳಾಲ ಠಾಣೆಯಿಂದ ಹೊರದಬ್ಬಲ್ಪಟ್ಟ ಇನ್ಸ್ ಪೆಕ್ಟರ್ ಎಚ್.ಎನ್. ಬಾಲಕೃಷ್ಣ ಬಗ್ಗೆ ಮಂಗಳೂರಿನ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಲು ಪ್ರೀತಿ. ತಿಂಗಳ ಹಿಂದೆ ಕಡ್ಡಾಯ ರಜೆಯಲ್ಲಿ ಕಳುಹಿಸಲ್ಪಟ್ಟಿದ್ದ ಬಾಲಕೃಷ್ಣ ಅವರನ್ನು ಮಂಗಳೂರಿನಲ್ಲೇ ಉಳಿಸಿಕೊಳ್ಳಲಾಗಿದ್ದು, ಪಾಂಡೇಶ್ವರ ಮಹಿಳಾ ಠಾಣೆಗೆ ನಿಯೋಜಿಸಲಾಗಿದೆ.

Photo credits : ಚಿನ್ನ ; ಸಾಂದರ್ಭಿಕ ಚಿತ್ರ

ಉಳ್ಳಾಲ, ಎ.3 : ಭ್ರಷ್ಟಾಚಾರದ ಆರೋಪ ಹೊತ್ತು ಉಳ್ಳಾಲ ಠಾಣೆಯಿಂದ ಹೊರದಬ್ಬಲ್ಪಟ್ಟ ಇನ್ಸ್ ಪೆಕ್ಟರ್ ಎಚ್.ಎನ್. ಬಾಲಕೃಷ್ಣ ಬಗ್ಗೆ ಮಂಗಳೂರಿನ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಲು ಪ್ರೀತಿ. ತಿಂಗಳ ಹಿಂದೆ ಕಡ್ಡಾಯ ರಜೆಯಲ್ಲಿ ಕಳುಹಿಸಲ್ಪಟ್ಟಿದ್ದ ಬಾಲಕೃಷ್ಣ ಅವರನ್ನು ಮಂಗಳೂರಿನಲ್ಲೇ ಉಳಿಸಿಕೊಳ್ಳಲಾಗಿದ್ದು, ಪಾಂಡೇಶ್ವರ ಮಹಿಳಾ ಠಾಣೆಗೆ ನಿಯೋಜಿಸಲಾಗಿದೆ. ಇಷ್ಟೇ ಅಲ್ಲದೆ, ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ನೆಪದಲ್ಲಿ ಮುಖ್ಯಮಂತ್ರಿ ಪದಕವನ್ನೂ ಕೊಡಿಸಲಾಗಿದೆ. ವಿಚಿತ್ರ ಎಂದರೆ, ಇದೇ ಸಂದರ್ಭದಲ್ಲಿ ಈ ವ್ಯಕ್ತಿಯ ಭ್ರಷ್ಟಾಚಾರದಿಂದ ಬೇಸತ್ತ ಮಹಿಳೆಯೊಬ್ಬರು ಕಳವು ಪ್ರಕರಣಕ್ಕೆ ಸಂಬಂಧಿಸಿ 50 ಗ್ರಾಮ್ ಚಿನ್ನಾಭರಣ ಎಗರಿಸಿದ್ದಾರೆಂದು ಎಸಿಪಿಗೆ ದೂರು ನೀಡಿದ್ದಾರೆ.

2024ರ ಜೂನ್ 28ರಂದು ಉಳ್ಳಾಲದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ತನ್ನ ಮನೆಯಿಂದ 15 ಲಕ್ಷ ಬೆಲೆಯ 32 ಪವನ್ ಚಿನ್ನಾಭರಣ ಕಳವಾದ ಬಗ್ಗೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡಿದ್ದ ಇನ್ಸ್ ಪೆಕ್ಟರ್ ಬಾಲಕೃಷ್ಣ  ದೂರು ನೀಡಿದ ವ್ಯಕ್ತಿಯ ಪುತ್ರ ಪಿಯುಸಿ ವಿದ್ಯಾರ್ಥಿ ಸೇರಿ ಇಬ್ಬರು ಅಪ್ರಾಪ್ತರು ಮತ್ತು ಆತನ ಮೂವರು ಗೆಳೆಯರು (20-21 ವರ್ಷದ ಯುವಕರು) ಸೇರಿ ಐವರು ಮಾಡಿದ ಕಳವು ಕೃತ್ಯವೆಂದು ಪತ್ತೆಹಚ್ಚಿದ್ದರು. ಅಲ್ಲದೆ, ನಗರದ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದ ಚಿನ್ನಾಭರಣವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.

ನ್ಯಾಯ ಕೊಡಿಸುವಂತೆ ಎಸಿಪಿಗೆ ದೂರು  

ಈ ನಡುವೆ, ಕಳೆದ ಮಾರ್ಚ್ 13ರಂದು ಸದ್ರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಬೆಳ್ತಂಗಡಿ ಮೂಲದ ಯುವಕನೊಬ್ಬನ ತಾಯಿ, ಉಳ್ಳಾಲ ಠಾಣೆಯಲ್ಲಿದ್ದಾಗ ಬಾಲಕೃಷ್ಣ ಮಾಡಿದ್ದ ಭ್ರಷ್ಟಾಚಾರ ಮತ್ತು ವಂಚನೆಯ ಬಗ್ಗೆ ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಅವರಿಗೆ ದೂರು ನೀಡಿದ್ದಾರೆ. ಕಳವು ಪ್ರಕರಣದಲ್ಲಿ ಸಹಕರಿಸಿದ್ದಾನೆಂದು ನನ್ನ ಮಗನನ್ನು ಉಳ್ಳಾಲ ಪೊಲೀಸರು 2024ರ ಜೂನ್ ಕೊನೆಯಲ್ಲಿ ವಶಕ್ಕೆ ಪಡೆದಿದ್ದರು. ಈ ಸಂಬಂಧ ಮಾತನಾಡಲೆಂದು ನನ್ನನ್ನು ಮರುದಿವಸ ಉಳ್ಳಾಲ ಠಾಣೆಗೆ ಕರೆಸಿಕೊಂಡಿದ್ದರು. ಪ್ರಕರಣದಲ್ಲಿ ಕಳವಾದ ಚಿನ್ನದ ರಿಕವರಿ ಆಗಬೇಕಿದೆ ಎಂದು ಹೇಳಿ, ಪ್ರಕರಣ ಮುಚ್ಚಿ ಹಾಕಲು 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು. ಜುಲೈ 1ರಂದು ಉಳ್ಳಾಲ ಠಾಣೆಯಲ್ಲೇ ಅವರಿಗೆ ಹಣವನ್ನು ನೀಡಿರುತ್ತೇನೆ.

ಹಣ ಪಡೆದರೂ ಮಗನನ್ನು ಆರೋಪಿಯಾಗಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಮಗನ ಮೈಯಲ್ಲಿದ್ದ ಬಂಗಾರದ ಸರ, ಒಂದು ಬ್ರಾಸ್ಲೇಟ್, ಒಂದು ಕಡಗ, ಮೂರು ಉಂಗುರ, ಒಂದು ಕಿವಿಯ ಓಲೆ ಸೇರಿ ಒಟ್ಟು 50 ಗ್ರಾಮ್ ಚಿನ್ನವನ್ನು ವಶಕ್ಕೆ ಪಡೆದಿದ್ದರು. ಇದರ ಲೆಕ್ಕವನ್ನು ಚಾರ್ಜ್ ಶೀಟ್ ನಲ್ಲಿ ಹಾಕುತ್ತೇನೆ, ಆಮೇಲೆ ರಿಕವರಿ ಮಾಡಿಕೊಳ್ಳಬಹುದು ಎಂದಿದ್ದರು. ಆದರೆ ಈಗ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟಿನಲ್ಲಿ ನನ್ನ ಮಗನ ಮೈಮೇಲಿದ್ದ ಚಿನ್ನಾಭರಣದ ಬಗ್ಗೆ ಉಲ್ಲೇಖಿಸದೇ ಇರುವುದು ತಿಳಿದುಬಂದಿದೆ. ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರು 3 ಲಕ್ಷ ನಗದು ಮತ್ತು 50 ಗ್ರಾಮ್ ಚಿನ್ನವನ್ನು ಮೋಸದಿಂದ ಪಡೆದಿದ್ದು, ಮಗನಿಂದ ಖಾಲಿ ಕಾಗದಗಳಿಗೆ ಸಹಿ ಮಾಡಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸಿಪಿ ಧನ್ಯಾ ನಾಯಕ್ ಅವರಿಗೆ ಆರೋಪಿ ಯುವಕನ ತಾಯಿ ಲಿಖಿತ ದೂರು ನೀಡಿದ್ದಾರೆ. ಇದೇ ಕಳವು ಪ್ರಕರಣದಲ್ಲಿ ಅಪ್ರಾಪ್ತ ಬಾಲಕರ ಹೆತ್ತವರು ಸೇರಿದಂತೆ ಇತರ ಆರೋಪಿಗಳ ಬಳಿಯಿಂದಲೂ ಹಣ ಪಡೆದು ಕೇಸು ಮುಚ್ಚಿ ಹಾಕಲೆತ್ನಿಸಿದ್ದ ಆರೋಪಗಳಿದ್ದವು.

ಸದ್ರಿ ಪ್ರಕರಣದಲ್ಲಿ ಮಾರ್ಚ್ 13ರಂದು ಸಂತ್ರಸ್ತ ಮಹಿಳೆ ಎಸಿಪಿಗೆ ದೂರು ನೀಡಿದ್ದರೂ ಆರೋಪಿತ ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರನ್ನು ಮಂಗಳೂರು ಕಮಿಷನರ್ ಅವರೇ ಮುಖ್ಯಮಂತ್ರಿ ಪದಕಕ್ಕೆ ಶಿಫಾರಸು ಮಾಡಿದ್ದಾರೆ. ಅಲ್ಲದೆ, ಸ್ಪೀಕರ್ ಯುಟಿ ಖಾದರ್ ತಂಡದಿಂದಲೇ ಉಗಿಯಲ್ಪಟ್ಟು ಉಳ್ಳಾಲದಿಂದ ಹೊರ ದಬ್ಬಲ್ಪಟ್ಟಿದ್ದರೂ ಮತ್ತೆ ನಗರದ ಪಾಂಡೇಶ್ವರ ಮಹಿಳಾ ಠಾಣೆಯ ಇನ್ಸ್ ಪೆಕ್ಟರ್ ಆಗಿ ನಿಯೋಜಿಸಲಾಗಿದೆ. ಈ ಹಿಂದೆ ಬಾಲಕೃಷ್ಣ ಮೈಸೂರು ಜಿಲ್ಲೆಯ ವಿಜಯನಗರದಲ್ಲಿ ಕರ್ತವ್ಯದಲ್ಲಿದ್ದಾಗ ಆದಾಯಕ್ಕಿಂತ ಅಧಿಕ ಆಸ್ತಿ ಗಳಿಸಿದ ಆರೋಪದಲ್ಲಿ ಎಸಿಬಿ ದಾಳಿಯಾಗಿತ್ತು. ಉಳ್ಳಾಲದಲ್ಲಿಯೂ ಕಲೆಕ್ಷನ್ ದಂಧೆ ಮುಂದುವರಿಸಿದ್ದಿಂದ ಕಾಂಗ್ರೆಸ್ ನಾಯಕರೇ ಕಮಿಷನರ್ ಅವರಿಗೆ ದೂರು ಕೊಟ್ಟಿದ್ದರಿಂದ ರಜೆಯಲ್ಲಿ ಕಳಿಸುವಂತಾಗಿತ್ತು.  

ಇಷ್ಟೆಲ್ಲ ಆಗಿದ್ದರೂ, ಭ್ರಷ್ಟಾಚಾರದ ಆರೋಪ ಹೊತ್ತ ಅಧಿಕಾರಿಯ ಬಗ್ಗೆ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳಿಗೆ ಬಲು ಪ್ರೀತಿಯಂತೆ. ಹೀಗಾಗಿ ಮಂಗಳೂರು ನಗರದ ಆಯಕಟ್ಟಿನ ಜಾಗದಲ್ಲಿ ಮತ್ತೆ ನೆಲೆ ಕಂಡುಕೊಳ್ಳುವಲ್ಲಿ ಯಶಸ್ಸು ಸಿಕ್ಕಿದೆ. ಕಳವು ಪ್ರಕರಣದಲ್ಲಿ ಆರೋಪಿ ಮೈಯಲ್ಲಿದ್ದ ಚಿನ್ನವನ್ನೂ ಎಗರಿಸಿದ ಆರೋಪದಲ್ಲಿ ಎಸಿಪಿ ತನಿಖೆ ಶುರುವಿಟ್ಟಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಆದರೆ ತನಿಖೆಗೆ ಹಾಜರಾಗದೆ ದಿನ ತಳ್ಳುತ್ತಿರುವ ಈ ವ್ಯಕ್ತಿ ದಕ್ಷ ಅಧಿಕಾರಿ ಧನ್ಯಾ ನಾಯಕ್ ವರ್ಗಾವಣೆಯಾಗಲು ಕಾಯುತ್ತಿದ್ದಾರೆಂದು ಇಲಾಖೆಯೊಳಗಿನ ಖಚಿತ ಮೂಲಗಳು ತಿಳಿಸಿವೆ.

Police Inspector Balakrishna has found himself at the center of a serious controversy after allegations emerged that he looted 50 grams of gold during a recovery operation. The complaint was formally lodged by the affected family with ACP Dhanya Nayak, prompting an investigation into the matter. This incident comes on the heels of previous allegations against Balakrishna, who was recently placed on a one-month leave following claims that he demanded money from authorities at Kotekar Bank in connection with a robbery case. Despite the gravity of the allegations, it is noteworthy that Balakrishnan has received the Chief Minister's Medal for his service, highlighting a contrasting perception of his career amid the swirl of accusations.