MLC Ivan D'Souza, Mangalore: 7ನೇ ವೇತನ ಆಯೋಗ ; ನಿವೃತ್ತ ಸರಕಾರಿ ನೌಕರರ ನಷ್ಟ ಪರಿಹಾರಕ್ಕೆ ಸಹಕಾರ, ಎಂಎಲ್‌ಸಿ ಐವನ್ ಡಿಸೋಜ ಭರವಸೆ 

29-03-25 10:07 pm       Mangalore Correspondent   ಕರಾವಳಿ

ನಿವೃತ್ತ ಸರಕಾರಿ ನೌಕರರು ಸರಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ತಾವು ದುಡಿದ ಹಕ್ಕಿನ ಮೌಲ್ಯವನ್ನು ಕೇಳುತ್ತಿದ್ದಾರೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತರುವ ಮೂಲಕ ನಿವೃತ್ತ ಸರಕಾರಿ ನೌಕರರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಮಂಗಳೂರು, ಮಾ.29 : ನಿವೃತ್ತ ಸರಕಾರಿ ನೌಕರರು ಸರಕಾರದ ಮುಂದೆ ಭಿಕ್ಷೆ ಬೇಡುತ್ತಿಲ್ಲ. ಬದಲಾಗಿ ತಾವು ದುಡಿದ ಹಕ್ಕಿನ ಮೌಲ್ಯವನ್ನು ಕೇಳುತ್ತಿದ್ದಾರೆ. ಈ ವಿಚಾರವನ್ನು ಸಿಎಂ ಅವರ ಗಮನಕ್ಕೆ ತರುವ ಮೂಲಕ ನಿವೃತ್ತ ಸರಕಾರಿ ನೌಕರರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ಶನಿವಾರ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆ ದ.ಕ. ಜಿಲ್ಲೆ ಮಂಗಳೂರು ಮತ್ತು ದ.ಕ. ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘ ಮಂಗಳೂರು ವತಿಯಿಂದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಜಿಲ್ಲಾ ಮಟ್ಟದ ನಿವೃತ್ತ ಸರಕಾರಿ ನೌಕರರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 26 ಸಾವಿರ ಮಂದಿ ನಿವೃತ್ತ ಸರಕಾರಿ ನೌಕರರಿಗೆ ಸಮಸ್ಯೆಯಗಿದ್ದು, ದಕದಲ್ಲಿ 600ಕ್ಕೂ ಹೆಚ್ಚು ಮಂದಿ  ಸಂಕಷ್ಟಕ್ಕೆ ಗುರಿಯಾಗಿರುವುದು ಬೇಸರದ ವಿಚಾರವಾಗಿದೆ. ಸಮಾಜ ಹಾಗೂ ಸರಕಾರಕ್ಕೆ ಈ ನಿವೃತ್ತ ನೌಕರರ ಸೇವೆ ಅಪಾರವಿದೆ. ಅವರಿಗೆ ಎಂದಿಗೂ ಅನ್ಯಾಯವಾಗಬಾರದು. ಮುಖ್ಯಮಂತ್ರಿಗಳಿಗೆ ಈ ಕುರಿತು ಮನವರಿಕೆ ಮಾಡಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು. 

ಇದೇ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯಿಂದ ಮನವಿಯನ್ನು ನೀಡಲಾಯಿತು. ಈ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ರಾಜ್ಯ ಮಹಾ ಪ್ರಧಾನ ಸಂಚಾಲಕ ಡಾ.ಎಂ.ಪಿ.ಎ‌ ಷಣ್ಮುಖಯ್ಯ ಮಾತನಾಡಿ, ಜು.1, 2022ರಿಂದ ಜು.31, 2024ರ ಅವಧಿಯಲ್ಲಿ ನಿವೃತ್ತ ಸರಕಾರಿ ಅಧಿಕಾರಿ/ನೌಕರ ವರ್ಗದ ನಿವೃತ್ತರಿಗೆ 7ನೇ ವೇತನ ಆಯೋಗದ ಲೆಕ್ಕಚಾರದಲ್ಲಿ ನಿವೃತ್ತಿ ಉಪಲಬ್ದಗಳನ್ನು ಪಾವತಿಸುವ ಸಂದರ್ಭದಲ್ಲಿ ಆರ್ಥಿಕ ನಷ್ಟವನ್ನು  ರಾಜ್ಯ ಸರಕಾರ ಮಾಡಿದೆ. ಈ ಕಾರಣದಿಂದ  ನಿವೃತ್ತ ಸರಕಾರಿ ನೌಕರರ ಜತೆಗೂಡಿಕೊಂಡು ಮೂರನೇ ಬಾರಿಗೆ ಬೆಂಗಳೂರು ಚಲೋ ಮಾಡುತ್ತಿದ್ದೇವೆ. ಏ.3ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಏ.4ರಂದು ಅರಮನೆ ಮೈದಾನದಲ್ಲಿ ರಾಜ್ಯ ಸಮ್ಮೇಳನದಲ್ಲಿ ನಮ್ಮ ಬೇಡಿಕೆಯನ್ನು ಸಿಎಂ ಮುಂದೆ ಮಂಡಿಸಲಿದ್ದೇವೆ. ಅಲ್ಲಿ ನ್ಯಾಯ ಸಿಗದೇ ಹೋದಲ್ಲಿ ಮುಂದೆ ಅನಿರ್ದಿಷ್ಟಾವಧಿಯ ಹೋರಾಟ, ನ್ಯಾಯಾಲಯಕ್ಕೆ ಮೊರೆ ಹೋಗಲು ನಿರ್ಧಾರ ಮಾಡಲಾಗಿದೆ ಎಂದರು.

ಈ ಸಂದರ್ಭ ಕರ್ನಾಟಕ ರಾಜ್ಯ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಲ್ಲಿ ಎ,ಬಿ,ಸಿ,ಡಿ ವರ್ಗದ ನಿವೃತ್ತ ಸರಕಾರಿ ನೌಕರರಿಗೆ ಲಕ್ಷಗಟ್ಟಲೆ ಮೊತ್ತವನ್ನು ಸರಕಾರ ನೀಡದೇ ಅನ್ಯಾಯ ಮಾಡಿದೆ. ಯಾವುದೇ ದುಡ್ಡನ್ನು ನಾವ್ ಬೇಡ್ತಾ ಇಲ್ಲ. ನಮ್ಮ ಕೆಲ್ಸದ ಹಣವನ್ನು ಮಾತ್ರ ಕೇಳ್ತಾ ಇದ್ದೇವೆ. ಬೆಂಗಳೂರು ಚಲೋದ ಮೂಲಕ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆಯ ಉಳ್ಳಾಲ ಸಂಚಾಲಕಿ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭ ದ.ಕ. ಜಿಲ್ಲಾ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಸೀತಾರಾಮ್, ಮೋಹನ ಬಂಗೇರಾ, ಡೇಸಿ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು. ಮಂಗಳೂರು ತಾಲೂಕು ಸಂಚಾಲಕ ಸ್ಟ್ಯಾನಿ ತಾವ್ರೋ ಸ್ವಾಗತಿಸಿದರು. ನಾರಾಯಣ ಪೂಜಾರಿ ವಂದಿಸಿದರು. ಬಿ.ಮನಮೋಹನ ರಾವ್ ನಿರೂಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಕ್ಕೂ ಮಿಕ್ಕಿದ ನಿವೃತ್ತ ಸರಕಾರಿ ನೌಕರರು ಸಭೆಯಲ್ಲಿ ಹಾಜರಿದ್ದರು.

MLC Ivan D'Souza Pledges Support for Fair Compensation of Retired Government Employees Amid 7th Pay Commission Discussions.