Bedra Bus Saudi, Mangalore, Moodbidri: ಸೌದಿಯಲ್ಲೂ ಉಂಟಾ ಬೆದ್ರ ? ಮೆಕ್ಕಾ, ಮದೀನಾ ಯಾತ್ರಿಕರಿಗೆ ‘ಬೆದ್ರ’ ಬಸ್ ದರ್ಶನ, ವಿದೇಶದಲ್ಲು ಹುಟ್ಟೂರಿನ ಪ್ರೀತಿ ತೋರಿದ ಉದ್ಯಮಿ

27-03-25 04:39 pm       Mangalore Correspondent   ಕರಾವಳಿ

ಸೌದಿ ಅರೇಬಿಯಾದ ಜೆದ್ದಾ ಎಲ್ಲಿ? ನಮ್ಮ ಮಂಗಳೂರು ಬಳಿಯ ಮೂಡುಬಿದ್ರೆ ಎಲ್ಲಿ ? ಇವೆರಡು ಹೆಸರುಗಳ ಮಧ್ಯೆ ಯಾವುದೇ ಸಾಮ್ಯತೆ ಅಂತೂ ಇಲ್ಲ. ಸಂಬಂಧವಂತೂ ಇಲ್ಲವೇ ಇಲ್ಲ. ಆದರೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸರ್ವಿಸ್ ಮಾಡೋ ಬಸ್ಸಿನಲ್ಲಿ ‘ಬೆದ್ರ’ ಎಂಬ ಹೆಸರು ಕಾಣಿಸಿಕೊಂಡಿದೆ. ಕನ್ನಡದ ಅಕ್ಷರಗಳಲ್ಲಿ ಬೆದ್ರ ಎಂದು ಬರೆಯಲಾಗಿದ್ದು ಮೆಕ್ಕಾ, ಮದೀನಾ ಯಾತ್ರೆ ಕೈಗೊಳ್ಳುವ ಕರಾವಳಿಗರಿಗೆ ಇದೇನು ಊರಿನ ಬಸ್ ಇಲ್ಲೇ ಬಂದುಬಿಡ್ತಾ ಎಂದು ಅಚ್ಚರಿ ಪಡುವಂತಿದೆ.

ಮಂಗಳೂರು, ಮಾ.27 : ಸೌದಿ ಅರೇಬಿಯಾದ ಜೆದ್ದಾ ಎಲ್ಲಿ? ನಮ್ಮ ಮಂಗಳೂರು ಬಳಿಯ ಮೂಡುಬಿದ್ರೆ ಎಲ್ಲಿ ? ಇವೆರಡು ಹೆಸರುಗಳ ಮಧ್ಯೆ ಯಾವುದೇ ಸಾಮ್ಯತೆ ಅಂತೂ ಇಲ್ಲ. ಸಂಬಂಧವಂತೂ ಇಲ್ಲವೇ ಇಲ್ಲ. ಆದರೆ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸರ್ವಿಸ್ ಮಾಡೋ ಬಸ್ಸಿನಲ್ಲಿ ‘ಬೆದ್ರ’ ಎಂಬ ಹೆಸರು ಕಾಣಿಸಿಕೊಂಡಿದೆ. ಕನ್ನಡದ ಅಕ್ಷರಗಳಲ್ಲಿ ಬೆದ್ರ ಎಂದು ಬರೆಯಲಾಗಿದ್ದು ಮೆಕ್ಕಾ, ಮದೀನಾ ಯಾತ್ರೆ ಕೈಗೊಳ್ಳುವ ಕರಾವಳಿಗರಿಗೆ ಇದೇನು ಊರಿನ ಬಸ್ ಇಲ್ಲೇ ಬಂದುಬಿಡ್ತಾ ಎಂದು ಅಚ್ಚರಿ ಪಡುವಂತಿದೆ.

ಹೌದು.. ಜೆದ್ದಾದಲ್ಲಿ ಸರ್ವಿಸ್ ಮಾಡೋ ಬಸ್ಸಿನ ಹಿಂಭಾಗದಲ್ಲಿ ಬೆದ್ರ ಎಂದು ಬರೆದಿದ್ದು, ಊರಿನಿಂದ ಸೌದಿಗೆ ತೆರಳಿದವರನ್ನು ಒಂದು ಕ್ಷಣ ಅವಾಕ್ಕಾಗಿಸಿದೆ. ಇದಕ್ಕೆ ಕಾರಣ ಮೂಡುಬಿದ್ರೆಯ ಕಲ್ಲಬೆಟ್ಟು ನಿವಾಸಿ ಮಹಮ್ಮದ್ ಆಲಿ ಎಂಬವರ ಊರಿನ ಮೇಲಿನ ಪ್ರೀತಿ. ಹಲವಾರು ವರ್ಷಗಳಿಂದ ಸೌದಿಯಲ್ಲಿ ಉದ್ಯಮ ನಡೆಸುತ್ತಿರುವ ಮಹಮ್ಮದ್ ಆಲಿಯವರು ಜೆದ್ದಾದಲ್ಲಿ ಬಸ್ ಸರ್ವಿಸ್ ಮಾಡುತ್ತಿದ್ದಾರೆ. ಪವಿತ್ರ ಮೆಕ್ಕಾ, ಮದೀನಾ ಯಾತ್ರೆಗೆ ಬರುವವರನ್ನು ಜೆದ್ದಾ ನಗರದಿಂದ ಆ ಸ್ಥಳಗಳಿಗೆ ಕರೆದೊಯ್ಯುವ ವ್ಯವಸ್ಥೆಯನ್ನು ಈ ಬಸ್ ಮಾಡುತ್ತದೆ. ಬಸ್ಸಿನ ಹಿಂಭಾಗದಲ್ಲಿ ಮೂಡುಬಿದ್ರೆಗೆ ತುಳುವಿನಲ್ಲಿ ಹೇಳುವ ಬೆದ್ರ ಎಂಬ ಹೆಸರನ್ನು ಅಚ್ಚು ಹಾಕಿದ್ದಾರೆ. ಕನ್ನಡ ಭಾಷೆಯಲ್ಲಿ ಬೆದ್ರ ಎಂಬ ಹೆಸರು ಬರೆದಿರುವುದು ತುಳುನಾಡಿನ ಯಾತ್ರಿಕರನ್ನು ಆಕರ್ಷಿಸಿದೆ.

ಕರಾವಳಿಯಿಂದ ಮೆಕ್ಕಾ, ಮದೀನಾ ಯಾತ್ರೆ ತೆರಳಿದವರಿಗೆ ಬೆದ್ರ ಬಸ್ಸಿನ ದರ್ಶನವಾಗುತ್ತದೆ. ಅಷ್ಟೇ ಅಲ್ಲ, ಇದು ನಮ್ಮ ಊರಿನವರ ಬಸ್ಸು ಎನ್ನುವ ಪ್ರೀತಿಯೂ ಹುಟ್ಟುತ್ತದೆ. ಮಹಮ್ಮದ್ ಆಲಿಯವರು ಸೌದಿಗೆ ತೆರಳುವುದಕ್ಕೂ ಮುನ್ನ ಊರಿನಲ್ಲಿ ಆಟೋ ಓಡಿಸುತ್ತಿದ್ದರು. ಆಟೋಗೆ ಕೊಹಿನೂರು ಎಂಬ ಹೆಸರನ್ನು ಇಟ್ಟಿದ್ದರು. ಆನಂತರ, ಸೌದಿಯಲ್ಲಿ ಬಸ್ ಸೇವೆ ಆರಂಭಿಸಿದ ಬಳಿಕವೂ ಕೋಹಿನೂರ್ ಹೆಸರನ್ನೇ ಮುಂದುವರಿಸಿದ್ದರು. ಜೆದ್ದಾದಲ್ಲಿ ಕೋಹಿನೂರ್ ಹೆಸರಿನ ಬಸ್ ಸೇವೆ ಈಗ ಜನಪ್ರಿಯವಾಗಿದೆ. ಇದರ ನಡುವೆ ಊರಿನ ಮೇಲಿನ ಪ್ರೀತಿಯಿಂದ ಮಹಮ್ಮದ್ ಆಲಿಯವರು ತನ್ನೆರಡು ಬಸ್ಸುಗಳ ಹಿಂಭಾಗದಲ್ಲಿ ತುಳುವಿನ ಬೆದ್ರ ಹೆಸರನ್ನು ಬರೆಸಿಕೊಂಡಿದ್ದು, ಊರಿನ ಮೇಲಿನ ಪ್ರೀತಿ ತೋರಿಸಿದ್ದಾರೆ.

ಮಹಮ್ಮದ್ ಆಲಿ ಮಂಗಳೂರಿನ ಮಾಧ್ಯಮ ಒಂದಕ್ಕೆ ಪ್ರತಿಕ್ರಿಯೆ ಹಂಚಿಕೊಂಡಿದ್ದು, ಬೆದ್ರ ನನ್ನ ಹುಟ್ಟೂರು. ಅಲ್ಲಿಯೇ ಹುಟ್ಟಿ ಬೆಳೆದು ಓದಿ ಮೇಲೆ ಬಂದಿದ್ದೇನೆ. ನನ್ನೂರಿನ ಬಗ್ಗೆ ಹೆಮ್ಮೆ ಮತ್ತು ಪ್ರೀತಿ ಇದೆ. ಇದಕ್ಕಾಗಿ ಜೆದ್ದಾದಲ್ಲಿ ತನ್ನ ಬಸ್ಸಿನಲ್ಲಿ ಬೆದ್ರ ಹೆಸರನ್ನು ಬರೆಸಿಕೊಂಡಿದ್ದೇನೆ. ಮೂಡುಬಿದ್ರೆಯ ಹಲವಾರು ಮಂದಿ ಸೌದಿಯಲ್ಲಿದ್ದಾರೆ. ಅವರೆಲ್ಲರಿಗೂ ನಮ್ಮ ಬಸ್ಸಿನಲ್ಲಿ ಬೆದ್ರ ಎಂದು ಬರೆಸಿಕೊಳ್ಳುವ ಮೂಲಕ ಊರಿನದ್ದೇ ಬಸ್ ಎನ್ನುವ ಪ್ರೀತಿ ಮೂಡುವಂತೆ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಬೆದ್ರ ಹೆಸರುಳ್ಳ ಬಸ್ಸಿನ ಚಿತ್ರ ಜಾಲತಾಣದಲ್ಲಿ ಕಳೆದ ಕೆಲವು ದಿನಗಳಿಂದ ವೈರಲ್ ಆಗಿದ್ದು, ಅರೇಬಿಕ್, ಇಂಗ್ಲಿಷ್ ನಲ್ಲಿ ಬರೆದಿರುವ ಎರಡು ಪದಗಳ ನಡುವೆ ಸ್ವಲ್ಪ ದೊಡ್ಡದಾಗಿ ಬೆದ್ರ ಎಂದು ಬರೆದಿರುವುದು ಜನಾಕರ್ಷಣೆ ಪಡೆದಿದೆ.

In a heartwarming display of cultural pride, a bus navigating the bustling streets of Jeddah, Saudi Arabia, has caught the attention of locals and expatriates alike with the word 'Bedra' emblazoned in Kannada on its rear window. The bus is owned by Mohammad Ali, a dedicated resident of Kallabettu in the Moodbidri taluk of Karnataka, India.