ITM ಕಂಪನಿ ಹೆಸರಲ್ಲಿ ಮಹಾಮೋಸ ; ಕೆಲಸದ ಆಸೆಯಲ್ಲಿ ಬಂದಿದ್ದ ಯುವಕ - ಯುವತಿಯರು ಬೀದಿಗೆ !! 

13-12-20 10:25 am       Mangaluru Crime Correspondent   ಕರಾವಳಿ

500 ಕ್ಕೂ ಹೆಚ್ಚು ಮಂದಿಯಲ್ಲಿ ತಲಾ 38,000 ರೂಪಾಯಿಗಳನ್ನು ಪೀಕಿಸಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳೂರು ಹೊರವಲಯದ ಕುತ್ತಾರು, ಪಂಡಿತ್ ಹೌಸ್ ಬಳಿಯ ಅಪಾರ್ಟ್ ಮೆಂಟ್ ಗೆ ಬಂದು ನ್ಯಾಯ ಯಾಚಿಸಿದ್ದಾರೆ. 

ಮಂಗಳೂರು, ಡಿ.13: ITM ಡೈರೆಕ್ಟ್ ಮಾರ್ಕೆಟಿಂಗ್ ಕಂಪನಿ ಹೆಸರಲ್ಲಿ ಸಿಸ್ಟಮ್ ಕೆಲಸ ಕೊಡಿಸುವುದಾಗಿ ಹೇಳಿ ಸುಮಾರು 500 ಕ್ಕೂ ಹೆಚ್ಚು ಮಂದಿಯಲ್ಲಿ ತಲಾ 38,000 ರೂಪಾಯಿಗಳನ್ನು ಪೀಕಿಸಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೋಸ ಹೋದ ಯುವಕ, ಯುವತಿಯರು ರಾತ್ರೋರಾತ್ರಿ ಕಂಪನಿ MD ಗಳನ್ನು ಹುಡುಕಿ ಮಂಗಳೂರು ಹೊರವಲಯದ ಕುತ್ತಾರು, ಪಂಡಿತ್ ಹೌಸ್ ಬಳಿಯ ಅಪಾರ್ಟ್ ಮೆಂಟ್ ಗೆ ಬಂದು ನ್ಯಾಯ ಯಾಚಿಸಿದ್ದಾರೆ. 

ಮಂಗಳೂರಿನ ಕೊಟ್ಟಾರದಲ್ಲಿ  ITM ಎಂಬ ಕಂಪನಿಯ ಕಚೇರಿ ಇದೆ ಎನ್ನಲಾಗುತ್ತಿದ್ದು  ಕುಂದಾಪುರ, ಪುತ್ತೂರು, ಸುಳ್ಯ, ಕಾರ್ಕಳದಿಂದ ಬಂದ ಡಿಗ್ರಿ ಮುಗಿಸಿದ ಯುವಕ ಯುವತಿಯರಿಗೆ ಸಿಸ್ಟಮ್ ಬೇಸ್ ಕೆಲಸ ಕೊಡಿಸುವುದಾಗಿ ಕರೆಸಿಕೊಂಡಿದ್ದಾರೆ. ಒಂದಷ್ಟು ಮಂದಿಗೆ ಆರಂಭದಲ್ಲಿ 2500 ರೂ. ಟ್ರೈನಿಂಗ್ ಫೀಸ್ ಎಂದು ಪಡೆದು ಎರಡು ದಿನ ಟ್ರೈನಿಂಗ್ ಕೊಟ್ಟಿದ್ದಾರೆ. ಬಳಿಕ ನಾಲ್ಕು ದಿನ ಕಳೆದಾಗ 35 ಸಾವಿರ ಹಣ ಕೊಡುವಂತೆ ಹೇಳಿದ್ದು ಕಷ್ಟದಲ್ಲಿ ಹಣ ಕಟ್ಟಿದ್ದೇವೆ. ತಿಂಗಳಿಗೆ 14 ಸಾವಿರ ಸಂಬಳ ಎಂದು ನಂಬಿಸಿದ್ದರು. ಆದರೆ, ತಿಂಗಳು ಕಳೆದರೂ ಸಂಬಳ ಕೊಟ್ಟಿಲ್ಲ. ಈಗ ಮೂರು ತಿಂಗಳಾಗಿದ್ದು  ಸಂಬಳದ ಬಗ್ಗೆ ಕೇಳಿದಾಗ, ನೀವು ತಲಾ ನಾಲ್ಕು ಮಂದಿಯನ್ನು ಕಂಪನಿಗೆ ಸೇರಿಸಬೇಕು. ಸೇರಿಸಿದರೆ 38 ಸಾವಿರ ಸಿಗುತ್ತದೆ ಎಂದಿದ್ದಾರೆ. ಇಲ್ಲಿವರೆಗೂ ಕೊಟ್ಟಾರದ ಕಚೇರಿಯಲ್ಲಿ ಉಳಿದುಕೊಂಡಿದ್ದ ಮಂದಿಗೆ ಮೋಸದ ಅರಿವಾಗಿದ್ದು ತಮ್ಮ ಕಷ್ಟದ ಹಣಕ್ಕಾಗಿ ಕೆಲವರಲ್ಲಿ ಹೇಳಿಕೊಂಡಿದ್ದಾರೆ. ಕೆಲವು ಹುಡುಗಿಯರು ತಮ್ಮ ಚಿನ್ನ ಅಡವಿಟ್ಟು ಕೆಲಸಕ್ಕೆ ಬಂದಿದ್ದು ತಾವು ಕೊಟ್ಟ ಹಣವನ್ನಾದರೂ ಕೊಡಿ ಎಂದು ಅಂಗಲಾಚುತ್ತಿದ್ದಾರೆ. 

ಕಳೆದ ಒಂದು ತಿಂಗಳಿಂದ ಕಂಪನಿಯ ಎಂಡಿ ತಪ್ಪಿಸಿಕೊಳ್ಳುತ್ತಿದ್ದು ನೀವು ಊರಿಗೆ ಹೋಗಿ ಆಫೀಸ್ ಶಿಫ್ಟ್ ಮಾಡುತ್ತಿದ್ದೇವೆ ಎನ್ನುತ್ತಿದ್ದಾನೆ. ಕಂಪನಿ ಎಂಡಿ ಹೇಮಂತ್ ಬಿ.ವಿ. ಎಂದು ಹುಡುಗಿಯರು ಹೇಳಿಕೊಂಡಿದ್ದಾರೆ. ತೊಕ್ಕೊಟ್ಟಿನ ಪಂಡಿತ್ ಹೌಸ್ ಬಳಿ ಕಂಪನಿ ಮ್ಯಾನೇಜರ್, ಎಂಡಿಯ ಫ್ಲ್ಯಾಟ್ ಇದೆಯೆಂದು ಶನಿವಾರ ರಾತ್ರಿ ಅಲ್ಲಿಗೆ ಬಂದಿದ್ದರು. ಆದರೆ, ಅಲ್ಲಿ ಎಂಡಿಯಾಗಲೀ, ಮ್ಯಾನೇಜರ್ ಆಗಲೀ ಇರಲಿಲ್ಲ. ಬಜರಂಗದಳ ಕಾರ್ಯಕರ್ತರ ಜೊತೆಗೆ ಬಂದಿದ್ದು ಕಳೆದ ನಾಲ್ಕು ದಿನಗಳಿಂದ ಅಲೆದಾಡುತ್ತಿರುವುದನ್ನು ಹೇಳಿಕೊಂಡಿದ್ದಾರೆ. ಒಂದಷ್ಟು ಮಂದಿಗೆ ಬಜರಂಗದಳ ಕಚೇರಿಯಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ. 

ಈ ವೇಳೆ, ಮಾಧ್ಯಮಕ್ಕೆ ಮಾತನಾಡಿದ ಮೋಸ ಹೋದ ಯುವತಿ, ಸಂದರ್ಶನದ ನಂತರ ಪ್ರತಿಯೊಬ್ಬರಲ್ಲೂ ಕೆಲಸಕ್ಕಾಗಿ 38,000 ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ. ಬಳಿಕ ಕೆಲಸಕ್ಕೆ ಬಂದಿದ್ದ ಯುವಕ, ಯುವತಿಯರಲ್ಲಿ ಚೂಡಿದಾರ್, ಶರ್ಟ್ ಗಳನ್ನು ಕೊಟ್ಟು ಡೈರೆಕ್ಟ್  ಸೇಲ್ ಮಾಡಲು ಹೇಳಿದ್ದಾರೆ. ಅಲ್ಲದೆ ನಿಮ್ಮ 38,000 ಮರಳಿ ಪಡೆಯಲು ಪ್ರತಿಯೊಬ್ಬರೂ ತಲಾ 4 ಹೊಸ ಅಭ್ಯರ್ಥಿಗಳನ್ನು ಕಂಪನಿಗೆ ಸೇರಿಸಬೇಕೆಂದು ತಾಕೀತು ಪಡಿಸಿದ್ದಾರೆ. ನಾವು ದೂರು ಕೊಟ್ಟರೂ ಯಾರೂ ಕೇಳುವವರಿಲ್ಲ. ನಾವು ಮನೆಯಿಂದ ಚಿನ್ನ ಅಡವಿಟ್ಟು ಹಣ ತಂದಿದ್ದೇವೆ. ಖಾಲಿ ಕೈಯಲ್ಲಿ ಮನೆಗೆ ಹೋಗುವುದು ಹೇಗೆ ಎಂದು ಪ್ರಶ್ನೆ ಮಾಡುತ್ತಾರೆ. 

ಈಗ ಹಣ ಕೇಳಿದರೆ, ನಾವು ಕಂಪನಿ‌ ಶಿಪ್ಟ್ ಮಾಡ್ತಿದ್ದೇವೆ. ನೀವು ಬೇರೆಡೆಗೆ ಸ್ಥಳಾಂತರಗೊಳ್ಳಿ, ರೂಂ‌ ಗಳಿಗೆ ಸ್ಯಾನಿಟೈಸರ್ ಮಾಡ್ಬೇಕಂತ ನೆಪ ಹೇಳ್ತಿದ್ದಾರೆ ಎಂದು ವಂಚನೆಗೊಳಗಾದವರು ಆರೋಪಿಸಿದ್ದಾರೆ.

ವಂಚನೆಗೊಳಗಾದ ಯುವಕ ಯುವತಿಯರು ಮಂಗಳೂರಿನ‌ ಕಾವೂರು ಠಾಣೆಯಲ್ಲಿ ಈ ಬಗ್ಗೆ ದೂರನ್ನೂ ನೀಡಿದ್ದಾರೆ. ಅಲ್ಲದೆ ಮಂಗಳೂರಿನ‌ ವಿಶ್ವ‌ ಹಿಂದೂ ಪರಿಷತ್ ಕಚೇರಿಗೆ ತೆರಳಿ ಅಲ್ಲಿ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ. 

ITM ಕಂಪನಿಯ ಮುಖ್ಯಸ್ಥರು ಕುತ್ತಾರಿನ, ಪಂಡಿತ್ ಹೌಸ್ ನಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ತಂಗಿದ್ದಾರೆ ಎಂಬ ಮಾಹಿತಿ ಅರಿತ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು  ಶನಿವಾರ ಸಂಜೆ ಅಪಾರ್ಟ್ ಮೆಂಟ್ ಗೆ ವಂಚನೆಗೊಳಗಾದ ಯುವಕ, ಯುವತಿಯರೊಂದಿಗೆ ಬಂದಿದ್ದರು. ಆದರೆ ಅವರು ಬಂದ ಸಮಯದಲ್ಲಿ ಅಪಾರ್ಟ್ ಮೆಂಟಲ್ಲಿ ಕಂಪನಿಗೆ ಸಂಬಂಧ ಪಟ್ಟವರು ಯಾರೂ ಇಲ್ಲದ ಕಾರಣ ಎಲ್ಲರೂ ವಾಪಸಾಗಿದ್ದಾರೆ. ಕಂಪನಿ ಮಂದಿ ಬಣ್ಣದ ಮಾತಿಗೆ ಮರುಳಾಗಿ ಹಣ ಕಳಕೊಂಡವರು ಈಗ ಊಟಕ್ಕೂ ಗತಿಯಿಲ್ಲದ ಸ್ಥಿತಿ ಎದುರಿಸುತ್ತಿದ್ದಾರೆ.

Fraud has been busted out at ITM Company Mangalore where youngsters have alleged of cheating and fraud. Youngsters along with VHP Leaders enter falt of directors house at Kuttar near Pandit Resport demanding for justice and money back.