ಸೋಮೇಶ್ವರ ರೈಲ್ವೇ ಗೋದಾಮಿನಿಂದ‌ ಲಕ್ಷಾಂತರ ಮೌಲ್ಯದ ವಿದ್ಯುತ್ ತಂತಿ ದೋಚಿದ್ದ ಟೆಂಪೋ ಪಲ್ಟಿ ; ಆರೋಪಿಗಳು ಆಸ್ಪತ್ರೆಗೆ ದಾಖಲು 

22-07-22 09:43 pm       Mangalore Correspondent   ಕರಾವಳಿ

ರೈಲ್ವೇ ಇಲಾಖೆಯ ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ವಿದ್ಯುತ್ ತಂತಿಗಳನ್ನ ಕಳವುಗೈದು ಪರಾರಿಯಾಗುತ್ತಿದ್ದ ಟೆಂಪೋ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ. 

ಉಳ್ಳಾಲ, ಜು.22 : ರೈಲ್ವೇ ಇಲಾಖೆಯ ಗೋದಾಮಿನಲ್ಲಿದ್ದ ಲಕ್ಷಾಂತರ ಮೌಲ್ಯದ ವಿದ್ಯುತ್ ತಂತಿಗಳನ್ನ ಕಳವುಗೈದು ಪರಾರಿಯಾಗುತ್ತಿದ್ದ ಟೆಂಪೋ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ಉರುಳಿ ಬಿದ್ದು ನಾಲ್ವರು ಗಾಯಗೊಂಡ ಘಟನೆ ನಡೆದಿದೆ. 

ಗುರುವಾರ ನಸುಕಿನಲ್ಲಿ 2.30 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಸೋಮೇಶ್ವರ ಬಳಿ ರೈಲ್ವೇ ಕಾಮಗಾರಿಗಾಗಿ ಗೋದಾಮಿನಲ್ಲಿ ಇರಿಸಿದ್ದ ಲಕ್ಷಾಂತರ ಬೆಳೆಬಾಳುವ ವಿದ್ಯುತ್ ತಂತಿಗಳನ್ನು ಕಳವು ಮಾಡಿ, ಟೆಂಪೋದಲ್ಲಿ ಮಂಗಳೂರು ಕಡೆ ತೆರಳುತ್ತಿದ್ದಾಗ ಓವರ್ ಬ್ರಿಡ್ಜ್ ನಿಂದ ತೊಕ್ಕೊಟ್ಟು ಒಳಪೇಟೆ ಸಂಪರ್ಕದ ಇಳಿಜಾರು ರಸ್ತೆಯಲ್ಲಿ ಟೆಂಪೊ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು ಟೆಂಪೋದಲ್ಲಿದ್ದ ಆರೋಪಿಗಳನ್ನ ಉಳ್ಳಾಲ ಪೊಲೀಸರ ವಶಕ್ಕೆ ನೀಡಿದ್ದು ಉಳ್ಳಾಲ ಪೊಲೀಸರು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ಇಬ್ಬರು ಮಹಿಳೆಯರ ಸಹಿತ ನಾಲ್ಕು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಪ್ರಸಕ್ತ ಮಂಗಳೂರಿನ ಸೂಟರ್ ಪೇಟೆಯ ನಿವಾಸಿ ವೆಂಕಟೇಶ್, ಹೊಯ್ಗೆ ಬಜಾರಿನ ಜಯಲಕ್ಷ್ಮಿ, ನಂದಿನಿ ಹಾಗೂ ಮೂಲ್ಕಿಯ ರಾಜ್ ಕುಮಾರ್ ಪೊಲೀಸರ ವಶದಲ್ಲಿದ್ದಾರೆ. ಜಯಲಕ್ಷ್ಮಿ, ನಂದಿನಿ ಹಾಗೂ ವೆಂಕಟೇಶನ ಮೇಲೆ ಈ ಮೊದಲೇ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿತ್ತು. ಕಳ್ಳತನ ಮಾಡಿದ್ದ ವಿದ್ಯುತ್ ತಂತಿಯ ಮೌಲ್ಯ 3.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಗಾಯಾಳು ಆರೋಪಿಗಳನ್ನ ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

A tempo met with an accident after robbery of Electronic wires from Ullal Railway Godown in Mangalore. The accused have been hospitalized.