ಮಧ್ಯರಾತ್ರಿ ಹೊಳೆಗೆ ಬಿದ್ದ ಕಾರು ; ಕಾಣಿಯೂರು ಹೊಳೆಯಲ್ಲಿ ಅಗ್ನಿಶಾಮಕ ದಳ ಹುಡುಕಾಟ, ಕಾರಿನಲ್ಲಿ ಮೂವರಿದ್ದ ಶಂಕೆ ! 

10-07-22 11:11 am       Mangalore Correspondent   ಕರಾವಳಿ

ಕಾಣಿಯೂರಿನ ಬೈತಡ್ಕ ಎಂಬಲ್ಲಿ ಕಾರೊಂದು ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಶನಿವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಕಾರು ವೇಗವಾಗಿ ಬಂದು ಸೇತುವೆಯ ತಡೆಗೋಡೆ ದಾಟಿ ನೀರಿಗೆ ಬಿದ್ದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 

ಪುತ್ತೂರು, ಜುಲೈ 10: ಕಾಣಿಯೂರಿನ ಬೈತಡ್ಕ ಎಂಬಲ್ಲಿ ಕಾರೊಂದು ಉಕ್ಕಿ ಹರಿಯುತ್ತಿದ್ದ ಹೊಳೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಶನಿವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಕಾರು ವೇಗವಾಗಿ ಬಂದು ಸೇತುವೆಯ ತಡೆಗೋಡೆ ದಾಟಿ ನೀರಿಗೆ ಬಿದ್ದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 

ಕಾರಿನ ಬಾನೆಟ್ ಭಾಗ ಹೊಳೆಯಲ್ಲಿ ಬೆಳಗ್ಗೆ ಪತ್ತೆಯಾಗಿದ್ದು ಅಗ್ನಿಶಾಮಕ ದಳ ಸಿಬಂದಿ, ಪೊಲೀಸರು, ಸ್ಥಳೀಯರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಸೇತುವೆಗೆ ಪ್ರತ್ಯೇಕ ತಡೆಗೋಡೆ ಇಲ್ಲದಿರುವುದರಿಂದ ತಿರುವು ರಸ್ತೆಯಲ್ಲಿ ವೇಗವಾಗಿ ಬಂದ ಕಾರು ನೇರವಾಗಿ ನದಿಗೆ ಬಿದ್ದಿದೆ. 

800 ಮಾರುತಿ ಕಾರು ಎನ್ನಲಾಗುತ್ತಿದ್ದು ಗುತ್ತಿಗಾರು ಮೂಲದ್ದೆಂದು ಹೇಳಲಾಗುತ್ತಿದೆ. ಕಾರಿನಲ್ಲಿ ಮೂವರು ಇದ್ದರೆಂದು ಹೇಳಲಾಗುತ್ತಿದೆ. ಆದರೆ ಕಾರಿನಲ್ಲಿ ಇದ್ದ ಜನರ ಬಗ್ಗೆ, ಕಾರು ಎಲ್ಲಿಯದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಸ್ಥಳೀಯರು ಕುತೂಹಲದಿಂದ ಸ್ಥಳದಲ್ಲಿ ಸೇರುತ್ತಿದ್ದಾರೆ. 

ಸುಬ್ರಹ್ಮಣ್ಯ - ಪುತ್ತೂರು- ಮಂಜೇಶ್ವರ ರಾಜ್ಯ ಹೆದ್ದಾರಿಯಾಗಿದ್ದು ಕಾಣಿಯೂರು ಮೂಲಕ ಹಾದು ಹೋಗುತ್ತದೆ. ಕಾರು ಪುತ್ತೂರು ಕಡೆಯಿಂದ ವೇಗವಾಗಿ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿತ್ತು. ಅಗ್ನಿಶಾಮಕ ದಳ ಸಿಬಂದಿ ಹೊಳೆಯಲ್ಲಿ ಬೋಟ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳೀಯವಾಗಿ ಗೌರಿ ಹೊಳೆಯೆಂದು ಕರೆಯಲ್ಪಡುವ ಈ ಹೊಳೆ ಮುಂದೆ ಕುಮಾರಧಾರಾ ನದಿಯನ್ನು ಸೇರುತ್ತದೆ. ಭಾರೀ ಮಳೆಯಿಂದಾಗಿ ಹೊಳೆ ಉಕ್ಕಿ ಹರಿಯುತ್ತಿದೆ. ಕಾರು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆಯೂ ವ್ಯಕ್ತವಾಗಿದೆ.

Puttur heavy rains car gets washed away after falling from bridge in Mangalore. The incident has occurred last night and it is said there were there people inside the car.