ಲಾರಿ - ಬೈಕ್ ಡಿಕ್ಕಿಯಾಗಿ ಇಬ್ಬರು ಯುವಕರು ದುರಂತ ಸಾವು ; ಪರಾರಿಗೆ ಯತ್ನಿಸಿದ ಲಾರಿಯನ್ನು ಹಿಡಿದು ನಿಲ್ಲಿಸಿದ ಸ್ಥಳೀಯರು

14-06-22 08:51 pm       Mangalore Correspondent   ಕರಾವಳಿ

ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಬಳಿಯ ಸೋರ್ನಾಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬಂಟ್ವಾಳ, ಜೂನ್ 14: ಟಿಪ್ಪರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಬಳಿಯ ಸೋರ್ನಾಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬೈಕಿನಲ್ಲಿ ತೆರಳುತ್ತಿದ್ದ ಲೊರೆಟ್ಟೋ ಪದವು ಕಮಲ್ ಕಟ್ಟೆ ನಿವಾಸಿಗಳಾದ ನಿತಿನ್ ಹಾಗೂ ಶಶಿರಾಜ್ ಮೃತ ಯುವಕರು. ಇವರು ಸಿದ್ದಕಟ್ಟೆಯಿಂದ ಬಿಸಿ ರೋಡು ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಎದುರಿನಿಂದ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಸವಾರರಿಬ್ಬರು ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಡಿಕ್ಕಿಯಾದ ಬಳಿಕ ಲಾರಿ ಚಾಲಕ ನಿಲ್ಲಿಸದೆ ತೆರಳಿದ್ದು, ಸ್ಥಳೀಯರು ಬೆನ್ನಟ್ಟಿ ಕುದ್ಕೋಳಿ ಎಂಬಲ್ಲಿ ತಡೆಗಟ್ಟಿದ್ದಾರೆ. ಬಳಿಕ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಬಂದು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಲಾರಿ ಚಾಲಕ ಬಿಸಿ ರೋಡಿನಿಂದ ಕಾರ್ಕಳದತ್ತ ವೇಗವಾಗಿ ತೆರಳುತ್ತಿದ್ದಾಗ ಸೋರ್ನಾಡು ಹೆದ್ದಾರಿ ತಿರುವಿನಲ್ಲಿ ಬೈಕಿಗೆ ಡಿಕ್ಕಿಯಾಗಿದೆ. ಮೃತ ಯುವಕರ ಪೈಕಿ ನಿತಿನ್ ಬೈಕ್ ಮೆಕ್ಯಾನಿಕ್ ಆಗಿದ್ದು, ಶಶಿರಾಜ್ ಪಿಕಪ್ ವಾಹನದಲ್ಲಿ ಚಾಲಕನಾಗಿ ದುಡಿಯುತ್ತಿದ್ದ. ಇಬ್ಬರು ಕೂಡ ಬೈಕಿನಲ್ಲಿ ಕಾರ್ಯ ನಿಮಿತ್ತ ತೆರಳುತ್ತಿದ್ದಾಗ ಜವರಾಯ ಲಾರಿಯ ಮೂಲಕ ಎದುರಾಗಿದ್ದಾನೆ.

Bantwal accident Truck bike collision two youths die on spot in Mangalore.