ಪೊಲೀಸರ ಕೈಯಿಂದ ತಪ್ಪಿಸಿ ಪರಾರಿ ಯತ್ನ ; ಜೀವದ ಹಂಗು ತೊರೆದು ಆರೋಪಿಯನ್ನ ಬೆನ್ನಟ್ಟಿ ಹಿಡಿದ ಕಾನ್ ಸ್ಟೇಬಲ್ ! 

08-06-22 04:54 pm       Mangalore Correspondent   ಕರಾವಳಿ

ದನ ಕಳವು ಪ್ರಕರಣದ ಮೂವರು ಆರೋಪಿಗಳನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ವೇಳೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದು, ತನ್ನ ಜೀವದ ಹಂಗು ತೊರೆದು ಬೆನ್ನಟ್ಟಿದ ಪೊಲೀಸ್ ಕಾನ್ಸ್ಟೇಬಲ್ ಓರ್ವರು ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ. 

ಉಳ್ಳಾಲ, ಜೂ. 8 : ದನ ಕಳವು ಪ್ರಕರಣದ ಮೂವರು ಆರೋಪಿಗಳನ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗೆ ಕರೆದೊಯ್ದ ವೇಳೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದು, ತನ್ನ ಜೀವದ ಹಂಗು ತೊರೆದು ಬೆನ್ನಟ್ಟಿದ ಪೊಲೀಸ್ ಕಾನ್ಸ್ಟೇಬಲ್ ಓರ್ವರು ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ. 

ದೇರಳಕಟ್ಟೆ ನಿವಾಸಿ ಮಹಮ್ಮದ್ ಮುಸ್ತಾಫ ಎಂಬಾತನೇ ಪೊಲೀಸರಿಂದ ಎಸ್ಕೇಪ್ ಆಗಲು ಯತ್ನಿಸಿ ಮತ್ತೆ ಕಾನ್ ಸ್ಟೇಬಲ್ ಕೈಗೆ ತಗಲಾಕ್ಕೊಂಡ ಆರೋಪಿ. ಕೊಣಾಜೆ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಎಂ.ಬಿ. ಅಸುಂಡಿ ಎಂಬವರು ತಮ್ಮ ಪ್ರಾಣದ ಹಂಗು ತೊರೆದು ದನಕಳವು ಆರೋಪಿ ಮುಸ್ತಾಫನನ್ನ ಹಿಡಿದಿದ್ದು ಸಮಯ ಪ್ರಜ್ಞೆ ಮರೆದಿದ್ದು ನೆರೆದಿದ್ದವರ ಪ್ರಶಂಸೆಗೆ ಪಾತ್ರರಾಗಿದ್ದಾರೆ. 

ಇಂದು ಬೆಳಗ್ಗೆ ಕೊಣಾಜೆ ಠಾಣೆ ವ್ಯಾಪ್ತಿಯ ಚೇಳೂರು ಚೆಕ್ ಪೋಸ್ಟ್ ಬಳಿ ಪಿ.ಎಸ್.ಐ ಯೋಗೇಶ್ವರ್ ಮತ್ತು ಸಿಬ್ಬಂದಿಗಳು ಗಸ್ತಿನಲ್ಲಿದ್ದ ವೇಳೆ ಮೆಲ್ಕಾರ್ ನಿಂದ ಸಜಿಪ ಕಡೆಗೆ ಬರುತ್ತಿದ್ದ ಈಕೋ ಕಾರನ್ನ ತಡೆದಿದ್ದಾರೆ. ತಪಾಸಣೆ ನಡೆಸಿದಾಗ ಕಾರಲ್ಲಿ ಒಂದು ಹೆಣ್ಣು ಕರುವನ್ನ ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದ್ದು ಆರೋಪಿಗಳಾದ ದೇರಳಕಟ್ಟೆ ನಿವಾಸಿ ಮಹಮ್ಮದ್ ಮುಸ್ತಾಫ, ಸಜಿಪ ನಿವಾಸಿ ಮುನಾಫರ್, ಕಲ್ಲಾಪು ನಿವಾಸಿಗಳಾದ ಮಹಮ್ಮದ್ ಜುನೈದ್ ನನ್ನ ಬಂಧಿಸಿದ್ದರು. 

ಇಂದು ಮಧ್ಯಾಹ್ನದ ವೇಳೆ ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾದ ಪೊಲೀಸರು ಪಿ.ಸಿ.ಆರ್ ವಾಹನದಲ್ಲಿ ಮೂವರು ದನಕಳವು ಆರೋಪಿಗಳನ್ನ ನಾಟೆಕಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯಕೀಯ ತಪಾಸಣೆಗೆ ಕರೆ ತಂದಿದ್ದಾರೆ. ಈ ವೇಳೆ ಸಮೀಪದ ತಹಶೀಲ್ದಾರ್ ಕಚೇರಿಯಲ್ಲಿ ನೆರೆದಿದ್ದ ಜನರು ನೋಡ ನೋಡುತ್ತಿದ್ದಂತೆಯೇ ಮುಸ್ತಾಫ ಎಂಬಾತ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದ ಗುಡ್ಡ ಹಾರಿ ತಪ್ಪಿಸಲು ಯತ್ನಿಸಿದ್ದು ಸ್ಥಳದಲ್ಲಿದ್ದ ಪೊಲೀಸ್ ಕಾನ್ಸ್ಟೇಬಲ್ ಎಮ್.ಬಿ ಅಸುಂಡಿ ಅವರು ಗುಡ್ಡದಲ್ಲಿ ಎದ್ದು, ಬಿದ್ದು ಚೇಸ್ ಮಾಡಿ ಆರೋಪಿಯನ್ನ ಹೆಡೆಮುರಿ ಕಟ್ಟಿದ್ದಾರೆ. ಘಟನೆಯಲ್ಲಿ ಆರೋಪಿಯನ್ನ ಚೇಸ್ ಮಾಡಿ ಹಿಡಿದ ಪೊಲೀಸ್ ಸಿಬ್ಬಂದಿ ಅಸುಂಡಿ ಅವರಿಗೆ ತರಚಿದ ಗಾಯಗಳಾಗಿವೆ.

ಪರಾರಿಯಾಗುತ್ತಿದ್ದ ಆರೋಪಿಯನ್ನ ಹಿಡಿಯಲು ಕಾನ್ ಸ್ಟೇಬಲ್ ಅಸುಂಡಿ ಜೊತೆಗೆ ಎಎಸ್ ಐ ಸಂಜೀವ ಅವರು ಸಹಕರಿಸಿದ್ದಾರೆ.

Mangalore Accused escapes from police custody, Konaje police constable Asundi risks life to nab the accused at Ullal. The three accused who were caught for cattle trafficking were taken to Ullal Medical Centre where one one of prime accused managed to escape but police constable who risked his life caught the accused finally.