ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ನಿರ್ಣಯ ಪ್ರಶ್ನೆ ಮಾಡಿದ್ದಕ್ಕೆ ವಿದ್ಯಾರ್ಥಿನಿಯರಿಗೆ ನೋಟೀಸ್ ; ಅಮಾನತು ಕ್ರಮ ಸಾಧ್ಯತೆ

07-06-22 12:03 pm       Mangalore Correspondent   ಕರಾವಳಿ

ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ವಿರೋಧಿಸಿ ಕಾಲೇಜು ಆಡಳಿತದ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಪ್ರಶ್ನೆ ಮಾಡಿದ ಆರು ಮಂದಿ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ಅನಸೂಯ ರೈ ಶೋಕಾಸ್ ನೋಟೀಸ್ ನೀಡಿದ್ದಾರೆ.

ಮಂಗಳೂರು, ಜೂನ್ 7: ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿರುವುದನ್ನು ವಿರೋಧಿಸಿ ಕಾಲೇಜು ಆಡಳಿತದ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಪ್ರಶ್ನೆ ಮಾಡಿದ ಆರು ಮಂದಿ ವಿದ್ಯಾರ್ಥಿನಿಯರಿಗೆ ಕಾಲೇಜಿನ ಪ್ರಾಂಶುಪಾಲೆ ಅನಸೂಯ ರೈ ಶೋಕಾಸ್ ನೋಟೀಸ್ ನೀಡಿದ್ದಾರೆ.

ಜೂನ್ 4ರಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ವಿದ್ಯಾರ್ಥಿನಿಯರು ಕಾಲೇಜಿನ ಆಡಳಿತ ಎಬಿವಿಪಿ ವಿದ್ಯಾರ್ಥಿಗಳ ಒತ್ತಡಕ್ಕೆ ಮಣಿದು ಹಿಜಾಬ್ ನಿಷೇಧ ನಿರ್ಣಯ ತೆಗೆದುಕೊಂಡಿದೆ ಎಂದು ಆರೋಪಿಸಿದ್ದರು. ಇದೇ ವಿಚಾರದಲ್ಲಿ ನೋಟೀಸ್ ನೀಡಲಾಗಿದ್ದು, ನೀವು ಹೊರಗಿನ ಶಕ್ತಿಗಳ ಬೆಂಬಲದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಿರಿ. ಕಾಲೇಜಿನ ಆಡಳಿತ ಮತ್ತು ಪ್ರಾಂಶುಪಾಲರ ಬಗ್ಗೆ ಪ್ರಶ್ನೆ ಮಾಡಿದ್ದರಿಂದ ಕಾಲೇಜಿನ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಈ ಬಗ್ಗೆ ನಿಮ್ಮ ವಿರುದ್ಧ ಶಿಸ್ತು ಕ್ರಮ ಯಾಗೆ ತಗೊಳ್ಳಬಾರದು ಎಂದು ಪ್ರಶ್ನೆ ಮಾಡಿದ್ದು, ಈ ಬಗ್ಗೆ ಮೂರು ದಿನದೊಳಗೆ ಉತ್ತರಿಸುವಂತೆ ಶೋಕಾಸ್ ನೋಟೀಸ್ ನಲ್ಲಿ ತಿಳಿಸಲಾಗಿದೆ.

ಸುದ್ದಿಗೋಷ್ಟಿಯಲ್ಲಿ ಕಾಲೇಜು ವಿರುದ್ಧ ಮಾತನಾಡಿದ್ದ ಗೌಸಿಯಾ ಸೇರಿದಂತೆ ಆರು ಮಂದಿ ವಿದ್ಯಾರ್ಥಿನಿಯರಿಗೆ ನೋಟೀಸ್ ನೀಡಲಾಗಿದೆ. ಮುಂದೆಯೂ ಇದೇ ರೀತಿ ವರ್ತಿಸಿದರೆ ಕಾಲೇಜಿನಿಂದ ಅಮಾನತು ಮಾಡುವ ಬಗ್ಗೆ ನೋಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈಗಾಗಲೇ ಉಪ್ಪಿನಂಗಡಿ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಹಾಕಲು ಪಟ್ಟು ಹಿಡಿದು ರಂಪಾಟ ನಡೆಸಿದ್ದ ಆರು ಮಂದಿ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಅಮಾನತು ಮಾಡಿತ್ತು. ಮಂಗಳೂರಿನಲ್ಲಿಯೂ ಅದೇ ರೀತಿಯ ಬೆಳವಣಿಗೆ ಆಗಿದ್ದರೂ, ಹಿಜಾಬ್ ನಿಷೇಧದ ಬಳಿಕ ವಿದ್ಯಾರ್ಥಿನಿಯರು ಕಾಲೇಜಿನಿಂದ ದೂರ ಉಳಿದಿದ್ದರು. ಇದರ ನಡುವೆ, ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿನಿಯರು ಮತ್ತು ಅವರ ಹೆತ್ತವರ ಜೊತೆಗೆ ಸಭೆಯನ್ನು ನಡೆಸಿದ್ದರು. ತರಗತಿ ಒಳಗೆ ಹಿಜಾಬ್ ನಿಷೇಧ ಮಾಡಿರುವ ಸಿಂಡಿಕೇಟ್ ನಿರ್ಣಯದ ಬಗ್ಗೆ ಮನವರಿಕೆ ಮಾಡಿದ್ದರು.

ಹಾಗಿದ್ದರೂ, ವಿದ್ಯಾರ್ಥಿನಿಯರು ಸುದ್ದಿಗೋಷ್ಟಿ ನಡೆಸಿ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ ಮುಗಿಯಲು ಎರಡು ತಿಂಗಳು ಇರುವಾಗ ಹಿಜಾಬ್ ನಿರ್ಣಯ ತೆಗೆದುಕೊಂಡಿರುವುದಕ್ಕೆ ಟೀಕಿಸಿದ್ದರು. ಇದೀಗ ಕಾಲೇಜಿನಿಂದ ನೋಟೀಸ್ ನೀಡಿರುವುದರಿಂದ ವಿದ್ಯಾರ್ಥಿನಿಯರು ಸೂಕ್ತ ಉತ್ತರ ನೀಡದೇ ಇದ್ದರೆ ಅಮಾನತು ಆಗುವ ಸಾಧ್ಯತೆ ಇದೆ.

ಎಬಿವಿಪಿ ಒತ್ತಡಕ್ಕೆ ಮಣಿದು ಪದವಿ ಕಾಲೇಜಿನಲ್ಲಿ ಹಿಜಾಬ್ ನಿಷೇಧ ; ಸಮಸ್ಯೆ ಸರಿಪಡಿಸದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ಎಚ್ಚರಿಕೆ

Mangalore university Hijab row, show cause notice issued to 6 girl students for questioning college by holding a press meet at press club. The notice has been issued by principal Anasuya Rai