ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುತ್ತಿದ್ದ ಕಾರು ಅಪಘಾತ ; ತಡೆಗೋಡೆಗೆ ಬಡಿದು ಇಬ್ಬರು ಮೃತ್ಯು

06-06-22 10:47 pm       Mangalore Correspondent   ಕರಾವಳಿ

ಸುಬ್ರಹ್ಮಣ್ಯ ಬಳಿಯ ಕೈಕಂಬ ಚೇರು ಎಂಬಲ್ಲಿ ಐಟ್ವಿಂಟಿ ಕಾರು ಚಾಲಕನ ನಿರ್ಲಕ್ಷ್ಯ ಮತ್ತು ಧಾವಂತದಿಂದಾಗಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ಅದರಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ಪುತ್ತೂರು, ಜೂನ್ 6: ಸುಬ್ರಹ್ಮಣ್ಯ ಬಳಿಯ ಕೈಕಂಬ ಚೇರು ಎಂಬಲ್ಲಿ ಐಟ್ವಿಂಟಿ ಕಾರು ಚಾಲಕನ ನಿರ್ಲಕ್ಷ್ಯ ಮತ್ತು ಧಾವಂತದಿಂದಾಗಿ ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಯಾಗಿ ಅಪಘಾತವಾಗಿದ್ದು, ಅದರಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಬೆಂಗಳೂರಿನ ರಾಮನಗರ ನಿವಾಸಿಗಳಾಗಿರುವ ನಾಗೇಶ್ (31), ತೇಜಸ್ವಿನಿ(14) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಚಾಲಕ ರವಿ(30), ರಜನಿ(24), ಮಕ್ಕಳಾದ ರಂಜಿತ್, ಅಚಿಂತ್ಯ ಹಾಗೂ ಒಂದು ಸಣ್ಣ ಮಗುವಿಗೆ ಗಾಯಗಳಾಗಿವೆ. ಇವರು ಬೆಂಗಳೂರಿನಿಂದ ಸುಬ್ರಹ್ಮಣ್ಯಕ್ಕೆ ಬರುವ ದಾರಿಯಲ್ಲಿ ಗುಂಡ್ಯ- ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ.

 ಭಾನುವಾರ ರಾತ್ರಿ ಕಾರು ಕಿರುಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದ್ದು ಬೈಕಿನಲ್ಲಿ ತೆರಳುತ್ತಿದ್ದ ಪ್ರಕಾಶ್ ಎಂಬವರು ಸ್ಥಳೀಯ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಕಾರು ಪಲ್ಟಿಯಾಗಿ ರಸ್ತೆ ಮಧ್ಯೆ ಬಿದ್ದುಕೊಂಡಿತ್ತು. ಇಬ್ಬರು ತೀವ್ರ ಗಾಯಗೊಂಡು ಪ್ರಜ್ಞೆ ಕಳಕೊಂಡಿದ್ದರು. ಉಳಿದವರು ಕೂಡ ಗಾಯಗೊಂಡು ಕಾರಿನ ಒಳಗಡೆಯೇ ಇದ್ದರು. ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು. ತೀವ್ರ ಗಾಯಗೊಂಡಿದ್ದವರನ್ನು ಬಳಿಕ ಪುತ್ತೂರು ಮತ್ತು ಕಡಬ ಆಸ್ಪತ್ರೆಗೆ ಪೊಲೀಸರು ದಾಖಲಿಸಿದ್ದರು. ಅಲ್ಲಿ ಇಂದು ಬೆಳಗ್ಗೆ ಇಬ್ಬರು ಸಾವು ಕಂಡಿದ್ದಾರೆ.

Puttur Accident two dead after car hits compound wall.