ಸೌತಡ್ಕದಲ್ಲಿ ಹೊಸ ಅಭಿಯಾನ, ಅನ್ಯಮತೀಯರು ಆಟೋ, ಟ್ಯಾಕ್ಸಿ ತರಬಾರದಂತೆ, ಲವ್ ಜಿಹಾದ್ ಕೃತ್ಯಕ್ಕೆ ಪ್ರತೀಕಾರ!

03-06-22 08:17 pm       Mangalore Correspondent   ಕರಾವಳಿ

ದೇವಸ್ಥಾನದ ಜಾತ್ರೆ, ಉತ್ಸವಗಳಲ್ಲಿ ಇತ್ತೀಚೆಗೆ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಿಸಿ ಅಭಿಯಾನ ನಡೆಸಿದ್ದು ಜಾತ್ರೆಗಳ ಸೀಸನ್ ಮುಗಿಯುತ್ತಿದ್ದಂತೆ ತಣ್ಣಗಾಗಿತ್ತು.

ಬೆಳ್ತಂಗಡಿ, ಜೂನ್ 3: ದೇವಸ್ಥಾನದ ಜಾತ್ರೆ, ಉತ್ಸವಗಳಲ್ಲಿ ಇತ್ತೀಚೆಗೆ ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧಿಸಿ ಅಭಿಯಾನ ನಡೆಸಿದ್ದು ಜಾತ್ರೆಗಳ ಸೀಸನ್ ಮುಗಿಯುತ್ತಿದ್ದಂತೆ ತಣ್ಣಗಾಗಿತ್ತು. ಇದೀಗ ಪ್ರಸಿದ್ಧ ಕಾರಣಿಕ ಕ್ಷೇತ್ರ ಎಂದೇ ಖ್ಯಾತಿ ಗಳಿಸಿರುವ ಧರ್ಮಸ್ಥಳ ಬಳಿಯ ಸೌತಡ್ಕ ಮಹಾಗಣಪತಿ ಕ್ಷೇತ್ರದ ಆವರಣದಲ್ಲಿ ಹೊಸತೊಂದು ಅಭಿಯಾನ ಶುರುವಾಗಿದೆ. ಅನ್ಯಮತೀಯರು ಆಟೋ, ಟ್ಯಾಕ್ಸಿಗಳಲ್ಲಿ ಭಕ್ತರನ್ನು ಕರೆದುಕೊಂಡು ಬರಬಾರದು ಅನ್ನುವ ರೀತಿಯ ಫಲಕಗಳನ್ನು ಸೌತಡ್ಕ ಬಳಿಯ ರಸ್ತೆ ಬದಿಗಳಲ್ಲಿ ಹಾಕಲಾಗಿದೆ.

ವಿಶ್ವ ಹಿಂದು ಪರಿಷತ್, ಬಜರಂಗದಳ, ಹಿಂದು ಜಾಗರಣ ವೇದಿಕೆ ಎಂಬ ಹೆಸರಲ್ಲಿ ಫಲಕ ಹಾಕಲಾಗಿದ್ದು, ಹಿಂದುಯೇತರರಿಗೆ ಸೌತಡ್ಕ ದೇವಸ್ಥಾನಕ್ಕೆ ಆಟೋ, ಟ್ಯಾಕ್ಸಿ ಮಾಡಬಾರದು ಎಂದು ಫರ್ಮಾನು ವಿಧಿಸಲಾಗಿದೆ. ಸೌತಡ್ಕದಲ್ಲಿ ಅನ್ಯಕೋಮಿನವರು ದೇವಸ್ಥಾನಕ್ಕೆ ಪ್ರವೇಶಿಸಿ ಹಿಂದು ಯುವತಿಯರನ್ನು ಲವ್ ಜಿಹಾದ್ ನಡೆಸಿದ್ದು ಕಂಡುಬಂದಿದೆ. ಹೀಗಾಗಿ ಹಿಂದುಯೇತನ ಜನರ ಆಟೋ, ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬರೆಯಲಾಗಿದೆ.

ಸೌತಡ್ಕ ದೇವಸ್ಥಾನವು ಮುಜರಾಯಿ ಇಲಾಖೆಗೆ ಸೇರಿದ ಕ್ಷೇತ್ರವಾಗಿದ್ದು ಈ ಫಲಕ ಹಾಕಿದ್ದಕ್ಕೂ ದೇವಸ್ಥಾನಕ್ಕೂ ಸಂಬಂಧ ಇರುವುದಿಲ್ಲ. ದೇವಸ್ಥಾನಕ್ಕೆ ಬರುವ ಆಸುಪಾಸಿನ ರಸ್ತೆಗಳ ಬದಿ ಫಲಕ ಹಾಕಿರುವುದು ಕಂಡುಬಂದಿದೆ. ಇತ್ತೀಚೆಗೆ ದೇವಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ಹಿಂದುಯೇತರ ವ್ಯಕ್ತಿಗಳು ವ್ಯಾಪಾರ ಮಾಡಬಾರದು ಎಂದು ಪುತ್ತೂರು ಸೇರಿದಂತೆ ಕೆಲವು ಮುಜರಾಯಿ ದೇವಸ್ಥಾನಗಳ ಹೊರಭಾಗದಲ್ಲಿ ಇದೇ ರೀತಿ ಬ್ಯಾನರ್ ಹಾಕಲಾಗಿತ್ತು. ಈ ವಿಚಾರದಲ್ಲಿ ಭಾರೀ ಟೀಕೆಯೂ ಕೇಳಿಬಂದಿತ್ತು. ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆಯುವ ಕೆಲಸ ಎಂದು ಟೀಕಿಸಲಾಗಿತ್ತು. ಆನಂತರ ಜಾತ್ರೆ ಸೀಸನ್ ಕಡಿಮೆಯಾಗುತ್ತಿದ್ದಂತೆ ಅದರ ಕಾವು ಕಡಿಮೆಯಾಗಿತ್ತು.

ಇತ್ತೀಚೆಗೆ ಸೌತಡ್ಕಕ್ಕೆ ಬಂದಿದ್ದ ಯುವತಿಯೊಬ್ಬಳನ್ನು ಸ್ಥಳೀಯ ಆಟೋ ಚಾಲಕನೊಬ್ಬ ಪ್ರೀತಿಯ ಬಲೆಗೆ ಬೀಳಿಸಿ ಮದುವೆಯಾಗಿದ್ದಾನೆ ಎನ್ನುವ ಸುದ್ದಿ ಹರಡಿತ್ತು. ಇದೇ ವಿಚಾರವನ್ನು ಮುಂದಿಟ್ಟು ಹಿಂದು ಸಂಘಟನೆಗಳು ಹಿಂದುಯೇತರ ವ್ಯಕ್ತಿಗಳು ಆಟೋ, ಟ್ಯಾಕ್ಸಿ ಮಾಡಬಾರದು ಎಂದು ಹೊಸ ಅಭಿಯಾನ ಶುರು ಮಾಡಿದ್ದಾರೆ. ಲವ್ ಜಿಹಾದ್ ಕೃತ್ಯದ ನೆಪದಲ್ಲಿ ಈ ರೂಪದಲ್ಲಿ ಪ್ರತೀಕಾರ ತೀರಿಸಲು ಹಿಂದು ಸಂಘಟನೆ ಕಾರ್ಯಕರ್ತರು ಹೊರಟಿದ್ದಾರೆ.

Mangalore No entry for Muslim taxi and auto at Sowthadka temple at Dharmasthala in Dakshina Kannada, VHP installs notice board after Muslim auto driver tried to trap a Bangalore Hindu girl by love jihad says VHP.