ಮತಾಂತರ ನಿಷೇಧ ಕಾಯ್ದೆ ಅತ್ಯಂತ ಅಪ್ರಬುದ್ಧ , ದುರುದ್ದೇಶ ಪೂರಿತ, ಯಾರು ಬೇಕಾದ್ರೂ ದೂರು ಕೊಟ್ಟು ನಿಮ್ಮನ್ನು ಜೈಲಿಗೆ ತಳ್ಳಬಹುದು ! 

26-05-22 02:13 pm       Mangalore Correspondent   ಕರಾವಳಿ

ಅಲ್ಪಸಂಖ್ಯಾತರ ಶಿಕ್ಷಣ ಇನ್ನಿತರ ಸೇವಾ ಸಂಸ್ಥೆಗಳನ್ನು ತುಳಿಯುವ ದುರುದ್ದೇಶದಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಮೂಲಕ ಸಮಾಜದಲ್ಲಿ ಒಡಕು ಸೃಷ್ಟಿಸುವ ಕುತಂತ್ರ ಇದೆ.‌

ಮಂಗಳೂರು, ಮೇ 26 : ಅಲ್ಪಸಂಖ್ಯಾತರ ಶಿಕ್ಷಣ ಇನ್ನಿತರ ಸೇವಾ ಸಂಸ್ಥೆಗಳನ್ನು ತುಳಿಯುವ ದುರುದ್ದೇಶದಿಂದ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಮೂಲಕ ಸಮಾಜದಲ್ಲಿ ಒಡಕು ಸೃಷ್ಟಿಸುವ ಕುತಂತ್ರ ಇದೆ.‌ ವಿಧಾನ ಪರಿಷತ್ತಿನಲ್ಲಿ ಚರ್ಚೆಯನ್ನೇ ಮಾಡದೆ ರಾಜ್ಯ ಸರಕಾರ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ತಂದಿದೆ. ಇದನ್ನು ನಾವು ಜಾರಿಯಾಗಲು ಬಿಡುವುದಿಲ್ಲ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಹೇಳಿದ್ದಾರೆ.  

ಸಿಪಿಎಂ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮತಾಂತರ ಕಾಯ್ದೆಯ ಸೆಕ್ಷನ್ 4ರಲ್ಲಿ ಆರೋಪಿ ವಿರುದ್ಧ ಯಾರು ಕೂಡ ದೂರು ಕೊಡಬಹುದು. ಪಾಲಕರಾಗಲೀ, ದಾರಿಹೋಕನಾಗಲೀ ಯಾವುದೇ ದುರುದ್ದೇಶ ಇಟ್ಟುಕೊಂಡು ದೂರು ನೀಡಬಹುದು. ಅನ್ಯಾಯಕ್ಕೊಳಗಾದ ಸಂಬಂಧಪಟ್ಟ ವ್ಯಕ್ತಿಯೇ ದೂರು ಕೊಡಬೇಕಿಲ್ಲ. ಯಾರದ್ದೇ ದೂರು ಆಧರಿಸಿ ಪೊಲೀಸರಿಗೆ ಎಫ್ಐಆರ್ ದಾಖಲಿಸಲು ಅವಕಾಶವಿದೆ ಎಂದರು. 

ಸೆಕ್ಷನ್ 7 ರ ಪ್ರಕಾರ ಎಫ್ಐಆರ್ ದಾಖಲಾದರೆ ಜಾಮೀನು ಇಲ್ಲದೆ ಆರೋಪಿಯನ್ನು ಬಂಧಿಸಬಹುದು. ಆರೋಪಿಗೆ ಮೂರರಿಂದ ಐದು ವರ್ಷದ ವರೆಗೆ ಜೈಲು ಶಿಕ್ಷೆ ನೀಡಬಹುದು. ಈ ಕಾನೂನನ್ನು ಯಾರಾದರೂ ಉದ್ದೇಶಪೂರ್ವಕ ಟಾರ್ಗೆಟ್ ಮಾಡಲು ಕಾರಣವಾಗುತ್ತದೆ. ‌ಸೆಕ್ಷನ್ 12 ಪ್ರಕಾರ, ಯಾರಾದರೂ ದೂರು ಕೊಟ್ಟರೆ ಆರೋಪಿಯಾದವನೇ ತಾನು ಅಪರಾಧಿ ಅಲ್ಲ ಎಂದು ಸಾಬೀತು ಮಾಡಬೇಕಾಗುತ್ತದೆ. ಇತರೇ ಯಾವುದೇ ಅಪರಾಧಗಳಲ್ಲಿ ಆಪಾದಿತನ ಮೇಲಿನ ಆರೋಪವನ್ನು ದೂರುದಾರನ ಸಾಕ್ಷ್ಯ ಆಧರಿಸಿ ಪೊಲೀಸರೇ ರುಜು ಮಾಡಬೇಕು. ಆದರೆ ಈ ಕಾಯಿದೆಯಲ್ಲಿ ಹೊಸ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಈ ರೀತಿಯ ಕಾನೂನು ಸ್ವಾತಂತ್ರ್ಯ ಭಾರತದಲ್ಲಿ ಈವರೆಗೆ ಜಾರಿಗೆ ತಂದಿಲ್ಲ. ಸಮಾಜ ಸೇವೆಯಲ್ಲಿ ನಿರತವಾದ ಯಾವುದೇ ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸಂಸ್ಥೆಗಳ ವಿರುದ್ಧ ತಮಗಾಗದವರು ದುರುದ್ದೇಶ ಇಟ್ಟುಕೊಂಡು ದೂರು ಕೊಡಲು ಇದು ಅವಕಾಶ ನೀಡುತ್ತದೆ. ‌

ಈ ರೀತಿಯ ಅನೈಸರ್ಗಿಕ ಕಾನೂನಿಂದ ಮೇಲ್ವರ್ಗದವರಿಗೆ ತೊಂದರೆ ಆಗಲ್ಲ. ಇದರಿಂದ ಹೆಚ್ಚು ಪೀಡನೆಗೆ ಒಳಗಾಗುವುದು ಬಡವರ್ಗದ ಜನರು. ದ.ಕ. ಜಿಲ್ಲೆಯಲ್ಲಿ ಅದೆಷ್ಟೋ ಕ್ರೈಸ್ತರು ಮತ್ತು ಮುಸ್ಲಿಮರ ಶಿಕ್ಷಣ ಸಂಸ್ಥೆಗಳು, ಆಶ್ರಮಗಳು ಇವೆ. ಸಾವಿರಾರು ಜನರು ವಿದ್ಯೆ ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತರನ್ನು ತುಳಿಯುವ ದೃಷ್ಟಿಯಿಂದಲೇ ಇಂತಹ ಕಾನೂನು ತರಲಾಗಿದೆ ಎಂದು ಲೋಬೊ ಹೇಳಿದರು. 

ಸಿಪಿಎಂ ನಾಯಕ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಬಿಜೆಪಿ ಸರಕಾರ ತಮ್ಮ ಆಡಳಿತ ವೈಫಲ್ಯ ಮುಚ್ಚಿಹಾಕಲು ಮುಸ್ಲಿಂ ಮತ್ತು ಕ್ರೈಸ್ತರನ್ನು ತುಳಿಯುವ ಉದ್ದೇಶ ಇಟ್ಟುಕೊಂಡು ಈ ಕಾನೂನು ತಂದಿದೆ. ದೇಶದಲ್ಲಿ ಕ್ರೈಸ್ತರ ಜನಸಂಖ್ಯೆ ಕಡಿಮೆಯಾಗಿ 1.7ಕ್ಕೆ ಇಳಿದಿದೆ. ಹಾಗಿದ್ದರೂ ಕ್ರೈಸ್ತರನ್ನು ಗುರಿಯಾಗಿಸಿ ಕಾನೂನು ತಂದಿದ್ದಾರೆ. ಇದರ ಪ್ರಕಾರ ಮತಾಂತರ ಆಗಬಾರದು, ಮರು ಮತಾಂತರಕ್ಕೆ ಅವಕಾಶ ಇದೆಯಂತೆ. ಈ ರೀತಿಯ ಕಾನೂನಿಗೆ ಯಾವುದೇ ಅರ್ಥವಿಲ್ಲ ಎಂದರು. 

ಜೆಡಿಎಸ್ ಮುಖಂಡ ಎಂಬಿ ಸದಾಶಿವ ಮಾತನಾಡಿ, ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೆ, ಯಾವುದೋ ದುರುದ್ದೇಶ ಇಟ್ಟುಕೊಂಡು ಕಾಯಿದೆ ತರುತ್ತಿದ್ದಾರೆ. ಕ್ರೈಸ್ತರನ್ನು ಬದಿಗಿಟ್ಟು ಈ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಶಿಕ್ಷಣ, ಆರೋಗ್ಯ ವಿಚಾರದಲ್ಲಿ ಕ್ರೈಸ್ತರ ಕೊಡುಗೆ ದೊಡ್ಡದು. ಈ ಬಗ್ಗೆ ನಾವು ಕಾನೂನು ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದರು. 

ಸಾಮಾಜಿಕ ಕಾರ್ಯಕರ್ತ ಎಂಜಿ ಹೆಗಡೆ ಮಾತನಾಡಿ, ಯಾರು ಕೂಡ ದೂರು ಕೊಡಬಹುದು ಎನ್ನುವುದೇ ಅಪಭ್ರಂಶ. ಶಿಸ್ತಿನ ವಿಚಾರದಲ್ಲಿ ಕಾಲೇಜಿನಲ್ಲಿ ಬೈದರೂ ಅದರ ನೆಪದಲ್ಲಿ ಮತಾಂತರದ ಬಗ್ಗೆ ದೂರು ಕೊಡಲು ಅವಕಾಶ ಸಿಗುತ್ತದೆ. ನನಗೆ ಅನ್ಯಾಯವಾಗಿದೆ ಎಂದು ಹೇಳಲು ಕ್ರೈಸ್ತ ಶಿಕ್ಷಣ ಸಂಸ್ಥೆಯೇ ಆಗಬೇಕೆಂದಿಲ್ಲ. ಯಾರೋ ಸ್ನೇಹಿತನೂ ದೂರು ಕೊಡಬಹುದು ಅಂದರೆ, ಸಂಘಟನೆಯ ವ್ಯಕ್ತಿಗಳು ಇದನ್ನು ದುರುಪಯೋಗ ಮಾಡಲು ಅವಕಾಶ ಸಿಗುತ್ತದೆ. ಇದರಿಂದ ಮುಂದೆ ಒಬ್ಬರಿಗೊಬ್ಬರು ಬೇಕೆಂದೇ ದೂರು ಕೊಟ್ಟು ಸಿಕ್ಕಿಸಿ ಹಾಕಬಹುದು. ಹಿಂದುಗಳ ಸಂಸ್ಥೆಯಲ್ಲೂ ಈ ರೀತಿ ಕಾನೂನು ದುರುಪಯೋಗಕ್ಕೆ ಅವಕಾಶ ಇರುತ್ತದೆ. ಒಂದು ಸಂಸ್ಥೆಯನ್ನು ಮುಗಿಸಿಬಿಡಲು ಈ ಕಾನೂನು ಅವಕಾಶ ಕೊಡುತ್ತದೆ. ಮುಂದಿನ ಚುನಾವಣೆ ಮೊದಲು ದಕ್ಷಿಣ ಕನ್ನಡದಲ್ಲಿ ಈ ಬಗ್ಗೆ ಎಲ್ಲಿಯಾದ್ರೂ ದೂರು ದಾಖಲಾಗಬಹುದು. ಅತ್ಯಂತ ಅಪ್ರಬುದ್ಧ, ಕಾನೂನು ಪರಿಭಾಷೆಯಲ್ಲಿ ಅಪಕ್ವ ಕಾಯಿದೆ ಇದಾಗಿದೆ ಎಂದು ಹೇಳಿದರು.‌

ಕಳ್ಳಿಗೆ ತಾರನಾಥ ಶೆಟ್ಟಿ ಮಾತನಾಡಿ, ಇಂಡಿಯನ್ ಪೀನಲ್ ಕೋಡ್ ಪ್ರಕಾರ ದೂರು ಕೊಟ್ಟವನೇ ತನಗಾದ ಅನ್ಯಾಯವನ್ನು ತೋರಿಸಬೇಕಾಗುತ್ತದೆ. ಆದರೆ ಇಲ್ಲಿ ದೂರು ಕೊಟ್ಟವನ ಬದಲು ಆರೋಪಿಯೇ ನಿರಪರಾಧಿ ಎಂಬುದನ್ನು ಸಾಬೀತು ಮಾಡಬೇಕು ಎನ್ನುವುದು ಅನ್ಯಾಯ. ಭಾರೀ ವಿಚಿತ್ರವಾದ ಕಾನೂನು ಇದಾಗಿದ್ದು ಸಮಾಜದಲ್ಲಿ ದೊಡ್ಡ ದುರಂತಕ್ಕೆ ದಾರಿಯಾಗುತ್ತದೆ. ಎಫ್ಐಆರ್ ಆದರೆ ನೇರವಾಗಿ ಜೈಲಿಗೆ ಹೋಗ ಬೇಕಾಗುತ್ತದೆ. ಎಸ್ಸಿ - ಎಸ್ಟಿ ಏಕ್ಟನ್ನು ಮಿಸ್ ಯೂಸ್ ಮಾಡಿದಂತೆ ಇದನ್ನೂ ದುರುಪಯೋಗ ಮಾಡುವುದಕ್ಕೆ ಧಾರಾಳ ಅವಕಾಶ ಇದೆ ಎಂದು ಹೇಳಿದರು.

Anti conversion law bill, anyone can file a case against anyone and send them to jail slams J R Lobo. This bill itself is inappropriate and can create turmoil in the state he added.