ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ, ಸ್ವಯಂಸೇವಕರ ಬದ್ಧತೆಯಿಂದ ಬೆಳೆದಿದ್ದೇವೆ ; ಎಲ್ಲ ಜನರನ್ನೂ ವಿಶ್ವಾಸಕ್ಕೆ ಪಡೆದು ಏಕರೂಪದ ಸಂಹಿತೆ ಜಾರಿಗೆ ತರಬೇಕು, ಭಾಗವತ್ ಸಲಹೆ 

08-02-26 10:18 pm       HK News Desk   ದೇಶ - ವಿದೇಶ

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೆ ತರಬೇಕು ವಿನಾ ಅದು ಮತ್ತೆ ವಿಭಜನೆಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ನವದೆಹಲಿ, ಫೆ.8: ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೆ ತರಬೇಕು ವಿನಾ ಅದು ಮತ್ತೆ ವಿಭಜನೆಗೆ ಕಾರಣವಾಗಬಾರದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ RSSಗೆ ಅಚ್ಛೇ ದಿನ್’ (ಒಳ್ಳೆಯ ದಿನಗಳು) ಬಂದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, “ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬಂದಿಲ್ಲ. ಅವರದ್ದು ಬೇರೆ ದಾರಿ, ನಾವು ರಾಮಮಂದಿರ ನಿರ್ಮಾಣಕ್ಕೆ ಬದ್ಧರಾಗಿದ್ದೆವು. ನಮ್ಮನ್ನು ಬೆಂಬಲಿಸಿದವರಿಗೆ ಲಾಭವಾಗಿದೆ ಎಂದಷ್ಟೇ ಉತ್ತರಿಸಿದರು.

ಸ್ವಯಂಸೇವಕರ ಕಠಿಣ ಪರಿಶ್ರಮ ಮತ್ತು ಸೈದ್ಧಾಂತಿಕ ನೀತಿಗಳ ಬದ್ಧತೆಯಿಂದ ಆರ್‌ಎಸ್‌ಎಸ್‌ಗೆ 'ಅಚ್ಛೇ ದಿನ್' ಬಂದಿದೆ. ಅಗತ್ಯವಿದ್ದಾಗ ಆರ್‌ಎಸ್‌ಎಸ್ ಸಲಹೆ ನೀಡುತ್ತದೆ. ಅವರು ನಮ್ಮೊಳಗಿಂದ ಬಂದವರಾಗಿರುವುದರಿಂದ ಅವರ ಪಾಪಗಳು ನಮ್ಮ ಮೇಲೆ ಹೊರಿಸಲ್ಪಡುತ್ತವೆ. ರಾಜಕೀಯ ಒತ್ತಡವು ಮತದಾರರಿಂದ ಬರುತ್ತದೆಯೇ ಹೊರತು ಆರ್‌ಎಸ್‌ಎಸ್‌ನಿಂದಲ್ಲ ಎಂದು ಹೇಳಿದರು.

100 ವರ್ಷಗಳಲ್ಲಿ ಕಮ್ಯುನಿಸ್ಟರ ನೆಲೆ ಏಕೆ ಬೆಳೆದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಭಾಗವತ್, ಒಂದು ವೇಳೆ ಕೇಳಿದರೆ ಅವರಿಗೂ ಆರ್ ಎಸ್ ಎಸ್ ಮಾರ್ಗದರ್ಶನ ನೀಡಬಹುದು. ಆರ್‌ಎಸ್‌ಎಸ್ ಯುವ ಸಂಘಟನೆಯಾಗಿದ್ದು, ಸರಾಸರಿ ವಯಸ್ಸು 28. ಅದನ್ನು 25ಕ್ಕೆ ಇಳಿಸಲು ಬಯಸಿರುವುದಾಗಿ ಎಂದು ಅವರು ಹೇಳಿದರು. 

ಹಿಂದುತ್ವ ಸಿದ್ಧಾಂತವಾದಿ ವಿ.ಡಿ ಸಾವರ್ಕರ್‌ಗೆ ಭಾರತ ರತ್ನ ನೀಡಬೇಕೆಂಬ ಬಹುದಿನಗಳ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಭಾಗವತ್, ಅವರಿಗೆ ಪ್ರಶಸ್ತಿ ನೀಡಿದರೆ ಅದರ ಘನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಹೇಳಿದರು. ಆರ್‌ಎಸ್‌ಎಸ್‌ ಶತಮಾನೋತ್ಸವ ಅಂಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿದರು. ನಟಿಯರಾದ ರವೀನಾ ಟಂಡನ್, ಅನನ್ಯಾ ಪಾಂಡೆ, ನಟ ವಿಕ್ಕಿ ಕೌಶಲ್, ಚಲನಚಿತ್ರ ನಿರ್ಮಾಪಕರಾದ ಕರಣ್ ಜೋಹರ್, ಮಧುರ್ ಭಂಡಾರ್ಕರ್, ರಮೇಶ್ ತೌರಾನಿ, ಸಂಗೀತಗಾರ ಪಂಡಿತ್ ಹೃದಯನಾಥ್ ಮಂಗೇಶ್ಕರ್ ಸೇರಿದಂತೆ ಹಲವು ಪ್ರಮುಖರು ಸಂವಾದದಲ್ಲಿ ಉಪಸ್ಥಿತರಿದ್ದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಏಕರೂಪ ನಾಗರಿಕ ಸಂಹಿತೆ ರೂಪಿಸಬೇಕು. ಅದು ವಿಭಜನೆಗಳನ್ನು ಸೃಷ್ಟಿಸಬಾರದು. ಉತ್ತರಾಖಂಡದಲ್ಲಿ ಮೂರು ಲಕ್ಷ ಸಲಹೆಗಳನ್ನು ನೀಡಲಾಯಿತು. ಸಂಬಂದಪಟ್ಟ ಎಲ್ಲರೊಂದಿಗೆ ಮಾತನಾಡಿ, ಕಾಯ್ದೆ ಅಂಗೀಕರಿಸಲಾಯಿತು ಎಂದು ಅವರು ಉಲ್ಲೇಖಿಸಿದರು. 

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಸಮುದಾಯ ಎಂಬುದು ಇಲ್ಲ. 'ನಾವೆಲ್ಲರೂ ಒಂದೇ ಸಮಾಜ. ಈ ದೇಶದಲ್ಲಿರುವ ಎಲ್ಲರೂ ಹಿಂದುಗಳೇ. ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳೊಂದಿಗೆ ವಿಶ್ವಾಸ, ಸ್ನೇಹ ಮತ್ತು ಸಂವಾದದ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇಸ್ಲಾಂ ಅನ್ನು ಶಾಂತಿಯ ಧರ್ಮ ಎಂದು ಕರೆಯುತ್ತಾರೆ, ಆದರೆ ಅಲ್ಲಿ ಶಾಂತಿ ಕಾಣುತ್ತಿಲ್ಲ. ಧರ್ಮದಲ್ಲಿ ಆಧ್ಯಾತ್ಮಿಕತೆ ಇಲ್ಲದಿದ್ದರೆ, ಅದು ಆಕ್ರಮಣಕಾರಿಯಾಗುತ್ತದೆ. ಇಂದು ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಕಾಣುತ್ತಿರುವುದು ಯೇಸುಕ್ರಿಸ್ತ ಮತ್ತು ಪ್ರವಾದಿ ಮುಹಮ್ಮದ್ ಅವರ ಬೋಧನೆಗಳಲ್ಲ, ನಮಗೆ ನಿಜವಾದ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದ ಆಚರಣೆ ಅಗತ್ಯವಿದೆ ಎಂದು ಹೇಳಿದರು.