ಬ್ರೇಕಿಂಗ್ ನ್ಯೂಸ್
20-08-25 06:40 pm HK News Desk ದೇಶ - ವಿದೇಶ
ನವದೆಹಲಿ, ಆ.20 : ಗಂಭೀರ ಕ್ರಿಮಿನಲ್ ಆರೋಪವಿದ್ದು, ಅದರಲ್ಲಿ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳಲ್ಲಿ ಬಂಧನಕ್ಕೊಳಗಾಗಿ ಸತತ 30 ದಿನ ಜೈಲಿನಲ್ಲಿದ್ದರೆ ಪ್ರಧಾನಮಂತ್ರಿ, ಯಾವುದೇ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಅವರ ಕೆಳಗಿನ ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಕುರಿತ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಲೋಕಸಭೆಯಲ್ಲಿ ಬುಧವಾರ ಮಂಡಿಸಿದರು. ಈ ಮಸೂದೆ ಮಂಡನೆ ಆದ ಕೆಲವೇ ನಿಮಿಷಗಳಲ್ಲಿ ಪ್ರತಿಪಕ್ಷದ ಸದಸ್ಯರು ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದರಿಂದ ಘರ್ಷಣೆ ಉಂಟಾಯಿತಲ್ಲದೆ ಕೆಲವು ಸಂಸದರು ಸ್ಪೀಕರ್ ಪೀಠದ ಮುಂಭಾಗಕ್ಕೆ ಧಾವಿಸಿ ಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು.
ಗೃಹ ಸಚಿವ ಅಮಿತ್ ಷಾ ವಿಧೇಯಕ ಮಂಡಿಸುತ್ತಿದ್ದಂತೆ ಈ ಮಸೂದೆಗಳನ್ನು ತರಾತುರಿಯಲ್ಲಿ ಮಂಡಿಸಲಾಗಿದೆ ಎಂದು ಪ್ರತಿಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿ ಅಮಿತ್ ಷಾ ಮೇಲೆಯೇ ಎಸೆದರು. ಎಐಎಂಐಎಂನ ಅಸಾದುದ್ದೀನ್ ಒವೈಸಿ ಮತ್ತು ಕಾಂಗ್ರೆಸ್‌ನ ಮನೀಷ್ ತಿವಾರಿ ಮತ್ತು ಕೆ.ಸಿ.ವೇಣುಗೋಪಾಲ್ ಮೊದಲಾದವರು ಮಸೂದೆ ವಿರುದ್ಧ ಮಾತನಾಡಿ, ಉದ್ದೇಶಿತ ವಿಧೇಯಕ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಯಾಗಿ ಮಾತನಾಡಿದ ಗೃಹ ಸಚಿವರು, ಪ್ರತಿಪಕ್ಷ ಸದಸ್ಯರ ಆರೋಪಗಳನ್ನು ನಿರಾಕರಿಸಿ, ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲಿ ಪ್ರತಿಪಕ್ಷದವರೂ ಸೇರಿ, ಎರಡೂ ಸದನಗಳ ಸದಸ್ಯರು ತಮ್ಮ ಸಲಹೆ ನೀಡಲು ಅವಕಾಶ ಪಡೆಯುತ್ತಾರೆ ಎಂದರು.
ಯಾವುದೇ ಗಂಭೀರ ಆರೋಪಗಳನ್ನು ಎದುರಿಸುತ್ತಿರುವಾಗ ನಾವು ಸಾಂವಿಧಾನಿಕ ಹುದ್ದೆಗಳಲ್ಲಿ ಮುಂದುವರಿಯುವಷ್ಟು ಹೊಣೆಗೇಡಿಗಳಾಗಲು ಸಾಧ್ಯವಿಲ್ಲ ಎಂದು ಅಮಿತ್ ಷಾ ಕಟುವಾಗಿ ಪ್ರತ್ಯುತ್ತರ ನೀಡಿದರು. ನಿರಂತರ ಗದ್ದಲ, ಪ್ರತಿಭಟನೆಗಳ ನಡುವೆ, ಸದನವನ್ನು ಮುಂದೂಡಲಾಯಿತು. ಸ್ವಲ್ಪ ಸಮಯದ ನಂತರ ಅಧಿವೇಶನ ಪುನರಾರಂಭವಾದಾಗ, ಮಸೂದೆಗಳನ್ನು 31 ಸದಸ್ಯರ ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗುವುದು ಎಂದು ಅಮಿತ್ ಷಾ ಹೇಳಿದರು. ಮತ್ತೆ ಗದ್ದಲ ಕಡಿಮೆಯಾಗದಿದ್ದಾಗ ಮತ್ತೊಮ್ಮೆ ಸದನವನ್ನು ಮುಂದೂಡಲಾಯಿತು.
ಒಬ್ಬ ಸಚಿವರು ಅಧಿಕಾರದಲ್ಲಿದ್ದಾಗ ಗಂಭೀರ ಪ್ರಕರಣಗಳ ಕುರಿತಂತೆ ಸತತ 30 ದಿನಗಳ ಕಾಲ ಬಂಧನಕ್ಕೊಳಗಾಗಿ, ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ವಿಧಿಸಬಹುದಾದ ಯಾವುದೇ ಕಾನೂನಿನಡಿಯಲ್ಲಿ ಅಪರಾಧ ಎಸಗಿದ ಆರೋಪದ ಮೇಲೆ, ರಾಷ್ಟ್ರಪತಿಗಳು ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ಅವರನ್ನು ಅಧಿಕಾರದಿಂದ ತೆಗೆದುಹಾಕಬಹುದು ಎಂದು ಮಸೂದೆ ಹೇಳುತ್ತದೆ. ಪ್ರಧಾನ ಮಂತ್ರಿಯವರು ಅಂತಹ ಸಚಿವರನ್ನು ಪದಚ್ಯುತಗೊಳಿಸುವ ಸಲಹೆ ರಾಷ್ಟ್ರಪತಿಗಳಿಗೆ ನೀಡದಿದ್ದರೆ, ಮೂವತ್ತೊಂದನೇ ದಿನದಿಂದ ಜಾರಿಗೆ ಬರುವಂತೆ ಅವರು ಸಚಿವರಾಗಿರುವುದಿಲ್ಲ ಎಂದು ಮಸೂದೆ ಹೇಳುತ್ತದೆ. ಪ್ರತಿಪಕ್ಷವು ಈ ಮಸೂದೆಯನ್ನು ಟೀಕಿಸುತ್ತ ಆಡಳಿತಾರೂಢ ಬಿಜೆಪಿ ದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ. ಇದಕ್ಕೂ ಮುನ್ನ ಮಾತನಾಡಿದ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ, ಈ ಮಸೂದೆಯು ಇದು ಎಲ್ಲದಕ್ಕೂ ವಿರುದ್ಧವಾಗಿರುವುದರಿಂದ ಇದೊಂದು ಕ್ರೂರ ವಿಷಯ ಎಂದು ನಾನು ಪರಿಗಣಿಸುತ್ತೇನೆ. ಈ ಮಸೂದೆಯು ಭ್ರಷ್ಟಾಚಾರ ವಿರೋಧಿ ಕ್ರಮ ಎಂದು ಹೇಳುವುದು ಜನರ ಕಣ್ಣಿಗೆ ಮಣ್ಣೆರಚುವ ಕ್ರಮ ಎಂದು ಹೇಳಿದರು. ಈ ಮಸೂದೆ ಜಾರಿಯಾದರೆ ಒಬ್ಬ ಮುಖ್ಯಮಂತ್ರಿಯ ಮೇಲೆ ಯಾವುದೇ ಪ್ರಕರಣ ದಾಖಲಿಸಿ ಅವರನ್ನು 30 ದಿನಗಳ ವರೆಗೆ ಬಂಧಿಸಿ, ಅವರನ್ನು ಅಧಿಕಾರದಿಂದ ತೆಗೆದು ಹಾಕಬಹುದು. ಆದ್ದರಿಂದ ಈ ಮಸೂದೆಯು ಸಂಪೂರ್ಣವಾಗಿ ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಅತ್ಯಂತ ದುರದೃಷ್ಟಕರ ಎಂದು ಬಣ್ಣಿಸಿದರು.
ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ಮಾತನಾಡಿ, ಬಿಜೆಪಿ ಸರ್ಕಾರ ದೇಶವನ್ನು ಪೊಲೀಸ್ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಈ ಮಸೂದೆಯೇ ಸಂವಿಧಾನಬಾಹಿರ. ನಿಮ್ಮ ಕಾನೂನಿನಲ್ಲಿ ಪ್ರಧಾನಿಯನ್ನು ಯಾರು ಬಂಧಿಸುತ್ತಾರೆ? ಅಧಿಕಾರ ಶಾಶ್ವತವಲ್ಲ ಎಂಬುದನ್ನು ಬಿಜೆಪಿ ಮರೆಯುತ್ತಿದೆ ಎಂದು ಹೇಳಿದರು. ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಮಾತನಾಡಿ, ಸರ್ಕಾರ ಯಾವುದೇ ಹೊಣೆಗಾರಿಕೆ ಇಲ್ಲದೆ ಅಧಿಕಾರ, ಸಂಪತ್ತು ಮತ್ತು ನಿಯಂತ್ರಣವನ್ನು ಬಯಸುವುದರಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿದೆ. ನಾವು ಈ ಸರ್ವಾಧಿಕಾರಿ ಮನೋಭಾವವನ್ನು ಬಲವಾಗಿ ಖಂಡಿಸುತ್ತೇವೆ ಎಂದರು. ಕಾಂಗ್ರೆಸ್ ಸಂಸದ ಶಶಿ ತರೂರ್ ಮಾತ್ರ ಈ ಬಾರಿಯೂ ಪಕ್ಷದ ನಿಲುವಿನ ವಿರುದ್ಧ ತನ್ನ ಅಭಿಪ್ರಾಯ ಹೇಳಿದ್ದು ಹೊಸ ಮಸೂದೆಗೆ ಸಹಮತ ತೋರಿದ್ದಾರೆ. 30 ದಿನ ಕಾಲ ಜೈಲಿನಲ್ಲಿದ್ದರೂ ಆನಂತರವೂ ಸಚಿವ ಸ್ಥಾನದಲ್ಲಿ ಇರಬೇಕೇ ಎನ್ನುವುದು ಕಾಮನ್ ಸೆನ್ಸ್ ವಿಷಯ. ಇದರಲ್ಲೇನು ತಪ್ಪಿದೆ ಅಂತ ನಂಗನಿಸುತ್ತಿಲ್ಲ ಎಂದಿದ್ದಾರೆ.
ಕುತೂಹಲದ ವಿಷಯವೆಂದರೆ ಇತ್ತೀಚೆಗೆ, ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ತಮಿಳುನಾಡು ಸಚಿವ ವಿ.ಸೆಂಥಿಲ್ ಬಾಲಾಜಿ ಅವರು ವಿಭಿನ್ನ ಆರೋಪಗಳ ಪ್ರಕರಣದಲ್ಲಿ ತಿಂಗಳ ಕಾಲ ಬಂಧನಕ್ಕೊಳಗಾದ ನಂತರವೂ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರಲಿಲ್ಲ. ಇದೇ ಹಿನ್ನೆಲೆಯಲ್ಲಿ ಕ್ರಿಮಿನಲ್ ಅಪರಾಧಿಗಳನ್ನು ಸಾಂವಿಧಾನಿಕ ಹುದ್ದೆಯಿಂದ ದೂರ ಇಡುವುದಕ್ಕಾಗಿ ಈ ಮಸೂದೆ ತರಲಾಗಿತ್ತು.
A new bill introduced in the Lok Sabha by Union Home Minister Amit Shah has sparked uproar in Parliament. The bill proposes that the Prime Minister, Chief Ministers, and ministers at both central and state levels be removed from office if they are jailed for 30 consecutive days in connection with a serious criminal case involving offenses punishable with a minimum of five years’ imprisonment.
20-08-25 09:54 pm
Bangalore Correspondent
Heart Attack, Mangalore, Bangalore: 3 ವರ್ಷದಲ್...
20-08-25 12:33 pm
'Shakti' Scheme, Golden Book of World Records...
20-08-25 12:11 pm
ರಾಜ್ಯದಲ್ಲಿ ಸಹಕಾರ ವ್ಯವಸ್ಥೆಗೆ ಬಿಗ್ ಸರ್ಜರಿ ; ಸಹಕ...
19-08-25 11:13 am
Dharmasthala Case on Social Media: ಧರ್ಮಸ್ಥಳ ವ...
19-08-25 10:39 am
20-08-25 06:40 pm
HK News Desk
ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಆಗಂತುಕನಿಂದ ಹಲ್ಲೆ...
20-08-25 11:01 am
ಭಾರತ ಟಿ20 ತಂಡಕ್ಕೆ ಮರಳಿದ ಶುಭಮನ್ ಗಿಲ್ ; ಏಷ್ಯಾ...
19-08-25 06:59 pm
ಇಂಡಿಯಾ ಬಣದಿಂದ ಉಪ ರಾಷ್ಟ್ರಪತಿ ಅಭ್ಯರ್ಥಿ ಬಿ.ಸುದರ್...
19-08-25 06:41 pm
ಎನ್ ಡಿಎ ಒಕ್ಕೂಟಕ್ಕೆ ಇಂಡಿಯಾ ಕೂಟದ ಠಕ್ಕರ್ ; ಉಪ ರಾ...
18-08-25 09:19 pm
20-08-25 04:28 pm
Mangalore Correspondent
ಕಡಬ ಪಟ್ಟಣ ಪಂಚಾಯತ್ ಚುನಾವಣೆ ; 13ರಲ್ಲಿ 8 ಗೆದ್ದ ಕ...
20-08-25 03:01 pm
SIT, Exhumation, Dharmasthala: ಶವ ಶೋಧ ಬಳಿಕ ಎಸ...
20-08-25 02:38 pm
Wild Elephant, Belthangady, Eshwar Khandre: ಬ...
20-08-25 01:36 pm
ಧರ್ಮಸ್ಥಳ ಪ್ರಕರಣ ನೆಪದಲ್ಲಿ ಬಿಎಲ್ ಸಂತೋಷ್ ಅವಹೇಳನ...
19-08-25 11:07 pm
20-08-25 08:10 pm
Mangalore Correspondent
Mangalore Lucky Scheme Scam Fraud, Wahab Kula...
19-08-25 10:52 pm
ಕಸ್ಟಮ್ಸ್ ಅಧಿಕಾರಿಗಳ ಸೋಗಿನಲ್ಲಿ ಚಿನ್ನದ ವ್ಯಾಪಾರಿಯ...
19-08-25 10:30 pm
ಡಾಕ್ಟರ್ ಮನೆ ದೋಚಿದ್ದ ಮನೆ ಕೆಲಸದವಳು ; ಚಿನ್ನ, ವಜ್...
19-08-25 09:27 pm
Gold Chain robbery, Puttur: ಮೈಸೂರಿನಲ್ಲಿ ಕದ್ದ...
19-08-25 12:54 pm