Coimbatore Serial Blasts, 'Tailor Raja' Arrest: ಕೊಯಂಬತ್ತೂರು ಸೀರಿಯಲ್ ಬ್ಲಾಸ್ಟ್ ಪ್ರಕರಣ ; 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ‘ಟೈಲರ್ ರಾಜಾ’ ವಿಜಯಪುರದಲ್ಲಿ ಮೂಟೆ ಹೊರುತ್ತಿದ್ದಾಗಲೇ ಅರೆಸ್ಟ್! ಎಂಬ್ರಾಯ್ಡರಿ ಸ್ಪೆಷಲಿಸ್ಟ್ ಆಗಿದ್ದಾತ ಬಾಂಬರ್ ಆಗಿದ್ದೇಕೆ..?! 

11-07-25 12:08 pm       HK News Desk   ದೇಶ - ವಿದೇಶ

ತಮಿಳುನಾಡಿನ ಕೊಯಂಬತ್ತೂರಿನಲ್ಲಿ 1998ರಲ್ಲಿ ನಡೆದಿದ್ದ ಸೀರಿಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಟೈಲರ್ ರಾಜ ಅಲಿಯಾಸ್ ಶಹಜಾನ್ ಅಲಿಯಾಸ್ ಅಬ್ದುಲ್ ಮಜೀದ್ ಮಕಂದರ್ ನನ್ನು ತಮಿಳುನಾಡು ಎಟಿಎಸ್ ಪೊಲೀಸರು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿದ್ದಾರೆ.

ಕೊಯಂಬತ್ತೂರು, ಜುಲೈ 11 : ತಮಿಳುನಾಡಿನ ಕೊಯಂಬತ್ತೂರಿನಲ್ಲಿ 1998ರಲ್ಲಿ ನಡೆದಿದ್ದ ಸೀರಿಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಟೈಲರ್ ರಾಜ ಅಲಿಯಾಸ್ ಶಹಜಾನ್ ಅಲಿಯಾಸ್ ಅಬ್ದುಲ್ ಮಜೀದ್ ಮಕಂದರ್ ನನ್ನು ತಮಿಳುನಾಡು ಎಟಿಎಸ್ ಪೊಲೀಸರು ಕರ್ನಾಟಕದ ವಿಜಯಪುರದಲ್ಲಿ ಬಂಧಿಸಿದ್ದಾರೆ.

2023ರಲ್ಲಿ ತಮಿಳುನಾಡಿನಲ್ಲಿ ಏಂಟಿ ಟೆರರಿಸ್ಟ್ ಸ್ಕ್ವಾಡ್ ರಚಿಸಿದ ಬಳಿಕ ಆರೋಪಿಗಳು ಸಿಗದೇ ಬಿಟ್ಟುಹೋಗಿದ್ದ ಕೊಯಂಬತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಚುರುಕು ಸಿಕ್ಕಿತ್ತು. ಪ್ರಕರಣ ಸಂಬಂಧಿಸಿ ತಮಿಳುನಾಡಿನ ಸಿಬಿ-ಸಿಐಡಿ ತಂಡದ ಲಿಸ್ಟ್ ನಲ್ಲಿ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದವರ ಪತ್ತೆಗೆ ಎಟಿಎಸ್ ಮುಂದಾಗಿತ್ತು. ಇತ್ತೀಚೆಗೆ ಪ್ರಕರಣ ಸಂಬಂಧಿಸಿ ಅಬು ಬಕ್ರ್ ಸಿದ್ದಿಕ್ ಮತ್ತು ಮೊಹಮ್ಮದ್ ಆಲಿ ಎಂಬಿಬ್ಬರನ್ನು ಆಂಧ್ರಪ್ರದೇಶದ ಅಣ್ಣಮಯ್ಯ ಜಿಲ್ಲೆಯಿಂದ ಬಂಧಿಸಲಾಗಿತ್ತು. ಆನಂತರ ದೊರೆತ ಖಚಿತ ಮಾಹಿತಿ ಆಧರಿಸಿ ಎಟಿಎಸ್ ಪೊಲೀಸರು ಕರ್ನಾಟಕದಲ್ಲಿ ಸದ್ದಿಲ್ಲದೆ ಕಾರ್ಯಾಚರಣೆ ಶುರು ಮಾಡಿದ್ದರು.

ಎಬ್ರಾಯಿಡರಿ ಸ್ಪೆಷಲಿಸ್ಟ್ ಆಗಿದ್ದ ಮಜೀದ್

ಮೂಲತಃ ಕೊಯಂಬತ್ತೂರು ಜಿಲ್ಲೆಯ ಉಕ್ಕಡಂ ಎಂಬಲ್ಲಿನ ಬಿಲಾಲ್ ಎಸ್ಟೇಟ್ ನಿವಾಸಿಯಾಗಿರುವ ಅಬ್ದುಲ್ ಮಜೀದ್ ಮಕಂದರ್ ಸ್ವತಃ ಟೈಲರಿಂಗ್ ಮತ್ತು ಎಂಬ್ರಾಯ್ಡರಿ ಸ್ಪೆಷಲಿಸ್ಟ್ ಆಗಿದ್ದು, 1996-98ರ ಹೊತ್ತಿಗೆ ತನ್ನ ಊರಲ್ಲೇ ಟೈಲರ್ ಅಂಗಡಿ ಇಟ್ಟುಕೊಂಡಿದ್ದ. ಇದರ ನಡುವೆಯೇ ಅಲ್ ಉಮ್ಮಾ ಸಂಪರ್ಕಕ್ಕೆ ಬಂದು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ. ಅಲ್ಲಿರುವಾಗಲೇ ನಾನಾ ಹೆಸರುಗಳನ್ನು ಇಟ್ಟುಕೊಂಡಿದ್ದರೂ ಕೊಯಂಬತ್ತೂರಿನಲ್ಲಿ ಟೈಲರ್ ರಾಜ ಎಂದೇ ಫೇಮಸ್ ಆಗಿದ್ದ. ಪೊಲೀಸರ ಮಾಹಿತಿ ಪ್ರಕಾರ, ಸಾದಿಕ್, ವೇಲಾರಂತ ರಾಜ, ಶಹಜಾನ್ ಶೇಕ್, ಅಬ್ದುಲ್ ಮಜೀದ್ ಮಕಂದರ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದ. ಟೈಲರ್ ಮತ್ತು ಎಂಬ್ರಾಯಿಡರಿ ಎಕ್ಸ್ ಪರ್ಟ್ ಆಗಿದ್ದ ಅಬ್ದುಲ್ ಮಜೀದ್ ಉಕ್ಕಡಮ್ ಬಳಿಯ ವಲ್ಲಾಲ್ ನಗರದಲ್ಲಿ ಬಾಡಿಗೆ ಶಾಪ್ ನಲ್ಲಿ ಟೈಲರ್ ಅಂಗಡಿ ನಡೆಸುತ್ತಿದ್ದ. 1998ರ ಸೀರಿಯಲ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಳಕೆಯಾಗಿದ್ದ ಬಾಂಬುಗಳನ್ನು ಇದೇ ಅಂಗಡಿಯಲ್ಲಿ ಶೇಖರಣೆ ಮಾಡಿಟ್ಟಿದ್ದ ಎಂಬ ಆರೋಪ ಇದೆ.

ಆಡ್ವಾಣಿ ಹತ್ಯೆಗೆ ಸಂಚು ರೂಪಿಸಿದ್ದ ಉಗ್ರರು

ಎಲ್.ಕೆ.ಆಡ್ವಾಣಿ ಅವರು ಚುನಾವಣೆ ಪ್ರಚಾರಕ್ಕಾಗಿ ಕೊಯಂಬತ್ತೂರಿಗೆ ಬರುವ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕಾಗಿ ನಿಷೇಧಿತ ಅಲ್ ಉಮ್ಮಾ ಉಗ್ರ ಸಂಘಟನೆ ಸಂಚು ರೂಪಿಸಿತ್ತು. ಆಡ್ವಾಣಿ ಪ್ರಚಾರ ಕಾರ್ಯ ನಡೆಯಲಿದ್ದ 1998ರ ಫೆಬ್ರವರಿ 14ರ ಸಂಜೆ ನಾಲ್ಕು ಗಂಟೆಗೆ ಮೊದಲೇ ಸರಣಿ ಬಾಂಬ್ ಸ್ಫೋಟಗಳಾಗಿದ್ದವು. ಸ್ಫೋಟ ಘಟನೆಯಲ್ಲಿ 58 ಮಂದಿ ಅಮಾಯಕರು ಜೀವ ಕಳಕೊಂಡಿದ್ದು, ಸುಮಾರು 250 ಮಂದಿ ಗಾಯಗೊಂಡಿದ್ದರು. 12 ಕಿಮೀ ವ್ಯಾಪ್ತಿಯಲ್ಲಿ 11 ಕಡೆಗಳಲ್ಲಿ ಇಡಲಾಗಿದ್ದ ಟೈಮ್ ಬಾಂಬುಗಳು ಸ್ಫೋಟಗೊಂಡಿದ್ದವು. ಕಾರು, ಮೋಟರ್ ಸೈಕಲ್, ನಿಲ್ಲಿಸಿದ್ದ ಸೈಕಲ್, ಬೈಕ್ ಗಳ ಸೈಡ್ ಬಾಕ್ಸ್, ಹಣ್ಣು ಮಾರುವ ತಳ್ಳುಗಾಡಿಗಳಲ್ಲಿ ಇಟ್ಟಿದ್ದ ಬಾಂಬುಗಳು ಸ್ಫೋಟಗೊಂಡು ಕೆಲವೇ ಸಮಯದಲ್ಲಿ ಕೊಯಂಬತ್ತೂರಿನಲ್ಲಿ ಮಾರಣ ಹೋಮ ಆಗಿತ್ತು. ಇನ್ನೂ ಕೆಲವು ಕಡೆಗಳಲ್ಲಿ ಇಡಲಾಗಿದ್ದ ಬಾಂಬುಗಳು ಸ್ಫೋಟಗೊಳ್ಳದೆ ಆನಂತರ ಅವುಗಳನ್ನು ತಜ್ಞರು ನಿಷ್ಕ್ರಿಯಗೊಳಿಸಿದ್ದರು.  

1996ರಲ್ಲಿ ಕೊಯಂಬತ್ತೂರು ಜೈಲ್ ವಾರ್ಡನ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಘಟನೆಯಲ್ಲೂ ಇದೇ ಟೈಲರ್ ರಾಜ ಆರೋಪಿಯಾಗಿದ್ದ. ಆ ಕೃತ್ಯದಲ್ಲಿ ಜೈಲ್ ವಾರ್ಡನ್ ಬೂಪಾಲನ್ ಸಾವನ್ನಪ್ಪಿದ್ದರು. 1996ರಲ್ಲಿ ಕೊಯಂಬತ್ತೂರಿನ ನಾಗೋರ್ ನಲ್ಲಿ ನಡೆದ ಸಯೀತಾ ಎನ್ನುವ ಮಹಿಳೆಯ ಹತ್ಯೆ ಪ್ರಕರಣ, 1997ರಲ್ಲಿ ಮದುರೈನಲ್ಲಿ ನಡೆದ ಜೈಲರ್ ಜಯಪ್ರಕಾಶ್ ಹತ್ಯೆ ಪ್ರಕರಣದಲ್ಲೂ ಇದೇ ವ್ಯಕ್ತಿ ಆರೋಪಿಯಾಗಿದ್ದ. ಬಾಂಬ್ ಬ್ಲಾಸ್ಟ್ ಪ್ರಕರಣದ ಹೊಣೆ ಹೊತ್ತುಕೊಂಡಿದ್ದ ಅಲ್ ಉಮ್ಮಾ ಉಗ್ರ ಸಂಘಟನೆಯಲ್ಲೂ ರಾಜಾ ಮುಂಚೂಣಿಯಲ್ಲಿದ್ದ. ಅಲ್ ಉಮ್ಮಾ ಸಂಘಟನೆಯನ್ನು ಎಸ್.ಎ ಬಾಷಾ ಎನ್ನುವಾತ ಸ್ಥಾಪಿಸಿದ್ದು, ಸರಣಿ ಸ್ಫೋಟ ಪ್ರಕರಣದಲ್ಲಿ ಆತನನ್ನು ಪ್ರಮುಖ ಆರೋಪಿಯಾಗಿ ಬಂಧಿಸಲ್ಪಟ್ಟು ಜೀವಾವಧಿ ಶಿಕ್ಷೆಗೊಳಗಾಗಿದ್ದ.

ಟೈಲರಿಂಗ್ ಬಿಟ್ಟು ಮೂಟೆ ಹೊರುತ್ತಿದ್ದ ರಾಜಾ

ಸರಣಿ ಸ್ಫೋಟ ಪ್ರಕರಣದ ಬಳಿಕ ಪೊಲೀಸರು ಹುಡುಕಾಟ ನಡೆಸಿದ್ದರಿಂದ ಟೈಲರ್ ರಾಜಾ ಅಲ್ಲಿಂದ ತಪ್ಪಿಸಿಕೊಂಡು ಆಂಧ್ರ, ಉತ್ತರ ಕರ್ನಾಟಕದಲ್ಲಿ ತಲೆಮರೆಸಿಕೊಂಡಿದ್ದ. ಆನಂತರ, ವಿಯಜಪುರದಲ್ಲಿ ಶಹಜಾನ್ ಹೆಸರಿನಲ್ಲಿ ಗುರುತಿಸಿಕೊಂಡು ತರಕಾರಿ ಮಾರುಕಟ್ಟೆಯಲ್ಲಿ ಮೂಟೆ ಹೊರುವ ಕಾರ್ಮಿಕನಾಗಿ ಸೇರಿಕೊಂಡಿದ್ದ. ಅಲ್ಲಿಯೇ ಯುವತಿಯೊಬ್ಬಳನ್ನು ಮದುವೆಯಾಗಿ ಇಬ್ಬರು ಮಕ್ಕಳನ್ನೂ ಹೊಂದಿದ್ದಾನೆ. ಇತ್ತೀಚೆಗೆ ಕೊಯಂಬತ್ತೂರು ತೆರಳಿದ್ದ ಶಹಜಾನ್, ತನ್ನ ಹಳೆಯ ಗೆಳೆಯರನ್ನು ಭೇಟಿಯಾಗಿ ಬಂದಿದ್ದ. ಆ ಗೆಳೆಯರ ಬಗ್ಗೆ ಪೊಲೀಸರು ಮೊದಲೇ ನಿಗಾ ಇಟ್ಟಿದ್ದರಿಂದ ಅಪರಿಚಿತ ವ್ಯಕ್ತಿ ಬಂದು ಭೇಟಿಯಾಗಿರುವುದು ಎಟಿಎಸ್ ತಂಡಕ್ಕೆ ಮಾಹಿತಿ ಹೋಗಿತ್ತು. ತಕ್ಷಣವೇ ಟ್ರ್ಯಾಕಿಂಗ್ ಮಾಡಿದ ಅಧಿಕಾರಿ ತಂಡ ಶಹಜಹಾನ್ ಅಲಿಯಾಸ್ ಟೈಲರ್ ರಾಜಾನನ್ನು ವಿಜಯಪುರದಲ್ಲಿ ಮೊನ್ನೆ ಜುಲೈ 8ರಂದು ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡದೆ ಎತ್ತಾಕ್ಕೊಂಡು ಹೋಗಿದೆ.

ಕೊಯಂಬತ್ತೂರು ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಇಬ್ಬರನ್ನು ಬಂಧಿಸಿದ್ದ ಎಟಿಎಸ್ ತಂಡಕ್ಕೆ ಇದೀಗ ಮೂರನೇ ಆರೋಪಿ ಬಲೆಗೆ ಬಿದ್ದಂತಾಗಿದೆ. ಇನ್ನಿಬ್ಬರು ಆರೋಪಿಗಳೆಂದು ಗುರುತಿಸಲ್ಪಟ್ಟ ಮುಜೀಬುರ್ ರೆಹ್ಮಾನ್ ಅಲಿಯಾಸ್ ಮುಜಿ ಮತ್ತು ಯೂಸುಫ್ ಎಂಬಿಬ್ಬರು 1998ರ ಫೆಬ್ರವರಿಯಿಂದಲೂ ತಲೆಮರೆಸಿಕೊಂಡಿದ್ದಾರೆ. ಟೈಲರ್ ರಾಜಾನನ್ನು ಎಟಿಎಸ್ ಪೊಲೀಸರು ಕೊಯಂಬತ್ತೂರಿಗೆ ಕರೆತಂದಿದ್ದು, ಪೊಲೀಸ್ ರಿಕ್ರೂಟ್ ಸ್ಕೂಲ್ ನಲ್ಲಿ ಇರಿಸಿ ವಿಚಾರಣೆ ನಡೆಸಿದ್ದಾರೆ. ಆನಂತರ, ಇಲ್ಲಿನ 5ನೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿದ್ದು, ಜುಲೈ 24ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆತನನ್ನು ಕಸ್ಟಡಿ ಪಡೆದು ಹೆಚ್ಚಿನ ವಿಚಾರಣೆ ನಡೆಸಲು ಎಟಿಎಸ್ ಮುಂದಾಗಿದೆ.

ಎಟಿಎಸ್ ತಂಡಕ್ಕೆ ಸ್ಟಾಲಿನ್ ಅಭಿನಂದನೆ

30 ವರ್ಷಗಳ ಹಿಂದಿನ ಪ್ರಕರಣದ ಹಿಂದೆ ಬಿದ್ದು ಆರೋಪಿಗಳನ್ನು ಬಂಧಿಸಿದ ಎಟಿಎಸ್ ಮತ್ತು ಗುಪ್ತಚರ ತಂಡವನ್ನು ತಮಿಳುನಾಡು ಸಿಎಂ ಸ್ಟಾಲಿನ್ ಶ್ಲಾಘಿಸಿದ್ದು, ದೇಶದ ಆಂತರಿಕ ಭದ್ರತೆ ಸಲುವಾಗಿ ತಮಿಳುನಾಡು ಪೊಲೀಸ್ ಇಲಾಖೆಯಲ್ಲೇ ಎಟಿಎಸ್ ತಂಡವನ್ನು ರಚಿಸಲಾಗಿತ್ತು. ಉತ್ತಮ ಕೆಲಸ ಮಾಡಿದ್ದಕ್ಕಾಗಿ ತಂಡವನ್ನು ಅಭಿನಂದಿಸುತ್ತೇನೆ. ಅಲ್ಲದೆ, ಸಹಕಾರ ನೀಡಿದ ಕರ್ನಾಟಕ ಮತ್ತು ಆಂಧ್ರಪ್ರದೇಶ ಪೊಲೀಸ್ ತಂಡಕ್ಕೂ ಕೃತಜ್ಞತೆ ಹೇಳುತ್ತೇನೆ ಎಂದಿದ್ದಾರೆ. (ಮಾಹಿತಿ-ಇಂಡಿಯನ್ ಎಕ್ಸ್ ಪ್ರೆಸ್)

In a major breakthrough in the 1998 Coimbatore serial bomb blast case, the Tamil Nadu Anti-Terrorism Squad (ATS) has arrested one of the most wanted accused, Tailor Raja alias Shahjahan alias Abdul Majid Makandar, after 27 years of evading the law. He was arrested in Vijayapura, Karnataka, while working as a porter in a vegetable market.