Bangle Seller, Changur Baba Arrest, Uttar Pradesh: ಒಂದು ಕಾಲದಲ್ಲಿ ಬಳೆಗಳನ್ನು ಮಾರುತ್ತಿದ್ದ ವ್ಯಕ್ತಿಯಲ್ಲಿ ನೂರು ಕೋಟಿಗೂ ಹೆಚ್ಚು ಆಸ್ತಿ ! ಮತಾಂತರ ಜಾಲದ ಮಾಸ್ಟರ್ ಮೈಂಡ್ ಚಾಂಗೂರ್ ಬಾಬಾ ಅರೆಸ್ಟ್, ಇಸ್ಲಾಮಿಕ್ ರಾಷ್ಟ್ರಗಳಿಂದ 40 ಖಾತೆಗಳಿಗೆ ಕೋಟಿ ಕೋಟಿ ದೇಣಿಗೆ 

10-07-25 03:24 pm       HK News Desk   ದೇಶ - ವಿದೇಶ

ಒಂದು ಕಾಲದಲ್ಲಿ ಸೈಕಲ್ ತುಳಿಯುತ್ತಾ ಬಳೆ, ಉಂಗುರಗಳನ್ನು ಮಾರುತ್ತಿದ್ದ ಜಮಾಲುದ್ದೀನ್ ಅಲಿಯಾಸ್ ಚಾಂಗೂರ್ ಬಾಬಾ ಮತಾಂತರ ಜಾಲದಲ್ಲಿ ಸಿಕ್ಕಿಬಿದ್ದಿದ್ದು, ಪೊಲೀಸರ ತನಿಖೆಯ ಸಂದರ್ಭದಲ್ಲಿ ಕೆಲವೇ ವರ್ಷಗಳಲ್ಲಿ ಈತ ನೂರು ಕೋಟಿಗೂ ಮಿಕ್ಕಿ ಆಸ್ತಿ ಮಾಡಿಕೊಂಡಿರುವುದು ಪತ್ತೆಯಾಗಿದೆ. 40 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಪ್ರಮುಖವಾಗಿ ಗಲ್ಫ್ ದೇಶಗಳಿಂದ ಭಾರೀ ಹಣ ಜಮೆ ಆಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಲಕ್ನೋ, ಜುಲೈ 10 : ಒಂದು ಕಾಲದಲ್ಲಿ ಸೈಕಲ್ ತುಳಿಯುತ್ತಾ ಬಳೆ, ಉಂಗುರಗಳನ್ನು ಮಾರುತ್ತಿದ್ದ ಜಮಾಲುದ್ದೀನ್ ಅಲಿಯಾಸ್ ಚಾಂಗೂರ್ ಬಾಬಾ ಮತಾಂತರ ಜಾಲದಲ್ಲಿ ಸಿಕ್ಕಿಬಿದ್ದಿದ್ದು, ಪೊಲೀಸರ ತನಿಖೆಯ ಸಂದರ್ಭದಲ್ಲಿ ಕೆಲವೇ ವರ್ಷಗಳಲ್ಲಿ ಈತ ನೂರು ಕೋಟಿಗೂ ಮಿಕ್ಕಿ ಆಸ್ತಿ ಮಾಡಿಕೊಂಡಿರುವುದು ಪತ್ತೆಯಾಗಿದೆ. 40 ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಪ್ರಮುಖವಾಗಿ ಗಲ್ಫ್ ದೇಶಗಳಿಂದ ಭಾರೀ ಹಣ ಜಮೆ ಆಗಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಉತ್ತರ ಪ್ರದೇಶದ ಬಲರಾಂಪುರ್ ಜಿಲ್ಲೆಯಲ್ಲಿ ಭಾರೀ ಮತಾಂತರ ಜಾಲವನ್ನು ಭೇದಿಸಿರುವ ಪೊಲೀಸರು ಪ್ರಕರಣ ಸಂಬಂಧಿಸಿ ಜಮಾಲುದ್ದೀನ್ ಅಲಿಯಾಸ್ ಚಾಂಗೂರ್ ಬಾಬಾ ಮತ್ತು ಆತನ ಸಹಚರ ನೀತು ಅಲಿಯಾಸ್ ನಸ್ರೀನ್ ನನ್ನು ಲಕ್ನೋದಿಂದ ಬಂಧನ ಮಾಡಿದ್ದಾರೆ. ಬಡವರು, ಕೂಲಿ ಕಾರ್ಮಿಕರು, ಪತಿಯನ್ನು ಕಳಕೊಂಡ ಮಹಿಳೆಯರು ಹೀಗೆ ಅಬಲೆಯರನ್ನು ಹಣಕಾಸು ನೆರವಿನ ಆಮಿಷವೊಡ್ಡಿ ಇವರು ಮತಾಂತರ ಮಾಡುತ್ತಿದ್ದರು. ಗಂಡನನ್ನು ಕಳಕೊಂಡವರಿಗೆ ಮರು ಮದುವೆ ಮಾಡಿಸುವುದಾಗಿ ಹೇಳಿ ಬಲೆಗೆ ಬೀಳಿಸುತ್ತಿದ್ದರು. ಈ ರೀತಿಯ ಮತಾಂತರ ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯಡಿ ಅಕ್ರಮವಾಗಿದ್ದು, ಜಾಲ ಪತ್ತೆಯಾಗುತ್ತಿದ್ದಂತೆ ಪೊಲೀಸರು ಮಾಸ್ಟರ್ ಮೈಂಡ್ ಎನ್ನಲಾದ ಚಾಂಗೂರ್ ಬಾಬಾನನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್ ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ಜಾಲದಲ್ಲಿ ಶಾಮೀಲಾದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇದೇ ವೇಳೆ, ಏಂಟಿ ಟೆರರಿಸ್ಟ್ ಸ್ಕ್ವಾಡ್ ಕೂಡ ಇವರಿಗೆ ಟೆರರ್ ಲಿಂಕ್ ಇದ್ಯಾ ಎನ್ನುವ ಬಗ್ಗೆ ತನಿಖೆಗಿಳಿದಿದೆ. ಚಾಂಗೂರ್ ಬಾಬಾ ಅಗಣಿತ ಆಸ್ತಿ ಮಾಡಿರುವುದರಿಂದ ಇಡಿ ಅಧಿಕಾರಿಗಳು ಕೂಡ ತನಿಖೆ ಶುರು ಮಾಡಿದ್ದಾರೆ. ಕಿವಿಯೋಲೆ, ಬಲೆಗಳನ್ನು ಮಾರುತ್ತಿದ್ದ ವ್ಯಕ್ತಿ ಕೋಟ್ಯಂತರ ರೂಪಾಯಿ ವಹಿವಾಟು ಮಾಡುತ್ತಿರುವುದು ಮತ್ತು ಕೋಟ್ಯಂತರ ಮೌಲ್ಯದ ಕಟ್ಟಡ, ಆಸ್ತಿಗಳನ್ನು ಹೊಂದಿರುವುದು ಅಧಿಕಾರಿಗಳ ಕಿವಿ ನೆಟ್ಟಗಾಗಿಸಿದೆ. ಲಕ್ನೋ ವಿಭಾಗದ ಇಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದೆ. ಜಮಾಲುದ್ದೀನ್ ಪೀರ್ ಬಾಬಾ ಎಂಬ ಹೆಸರಿನಲ್ಲೂ ಕರೆಯಲ್ಪಡುತ್ತಿದ್ದಾನೆ. ಇವನಿಗೆ ಹಣ ಕಳಿಸಿದವರು ಯಾವ ಉದ್ದೇಶಕ್ಕಾಗಿ ಕೋಟ್ಯಂತರ ರೂಪಾಯಿ ಕಳಿಸಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಒಂದು ಕಾಲದಲ್ಲಿ ಬಳೆಗಳನ್ನು ಮಾರುತ್ತಿದ್ದ ಜಮಾಲುದ್ದೀನ್ ಆನಂತರ ಗ್ರಾಮಕ್ಕೆ ಪ್ರಮುಖನಾಗಿ ಆಯ್ಕೆಯಾಗಿದ್ದ. ಈಗ ಸಿಕ್ಕಿರುವ ದಾಖಲೆಗಳ ಪ್ರಕಾರ, ಪೊಲೀಸರು ಆತನ ಬ್ಯಾಂಕ್ ಖಾತೆಗಳ ಆಸ್ತಿ 106 ಕೋಟಿ ರೂಪಾಯಿ ಇದೆಯೆಂದು ಲೆಕ್ಕ ಹಾಕಿದ್ದಾರೆ. 40 ಬ್ಯಾಂಕ್ ಖಾತೆಗಳಿಗೆ ಇಷ್ಟೊಂದು ಹಣವನ್ನು ಗಲ್ಫ್ ಭಾಗದ ಇಸ್ಲಾಮಿಕ್ ರಾಷ್ಟ್ರಗಳಿಂದ ಪಾವತಿ ಮಾಡಲಾಗಿದೆ ಎನ್ನುವುದನ್ನು ಪತ್ತೆ ಮಾಡಲಾಗಿದೆ. ಜಮಾಲುದ್ದೀನ್ ನೇಪಾಳ ಗಡಿಗೆ ಹೊಂದಿಕೊಂಡಿರುವ ಬಲರಾಂಪುರ ಜಿಲ್ಲೆಯ ಉತ್ತರೌಲಾ ಪ್ರದೇಶದ ರೇಹ್ರಾ ಮಾಫಿ ಎನ್ನುವ ಗ್ರಾಮದ ನಿವಾಸಿಯಾಗಿದ್ದು, ಒಂದು ಬಾರಿ ಗ್ರಾಮ ಪ್ರಮುಖನಾಗಿದ್ದು ಬಿಟ್ಟರೆ ಬೇರಾವುದೇ ಹುದ್ದೆಯನ್ನು ಹೊಂದಿರಲಿಲ್ಲ.

ರೇಹ್ರಾ ಮಾಫಿ ಪ್ರದೇಶದಿಂದ ಮೂರು ಕಿಮೀ ದೂರದಲ್ಲಿ ಮಾಧುಪುರ್ ಎನ್ನುವಲ್ಲಿ ದರ್ಗಾ ಬಳಿಯಲ್ಲೇ ಜಮಾಲುದ್ದೀನ್ ಪರವಾಗಿ ಆತನ ಸಹಚರ ನೀತು ದೊಡ್ಡ ಕಟ್ಟಡವನ್ನು ಕಟ್ಟಿಸಿದ್ದ. ಕಂದಾಯ ಇಲಾಖೆಯ ತನಿಖೆಯಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡವೆಂದು ಪತ್ತೆಯಾಗಿದ್ದರಿಂದ ಅದನ್ನು ಬುಲ್ಡೋಜರ್ ಮೂಲಕ ಇದೇ ಬುಧವಾರ ತೆರವು ಮಾಡಲಾಗಿದೆ. ಹಲವು ವರ್ಷಗಳಿಂದ ಈ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, ಮೊದಲಿಗೆ ಆಸ್ಪತ್ರೆ ಎಂದು ಹೇಳಲಾಗುತ್ತಿತ್ತು. ಆನಂತರ, ಶಾಲೆ ಅಥವಾ ಕಾಲೇಜು ಆಗಿರಬೇಕು ಎನ್ನುವ ಮಾತು ಕೇಳಿಬಂದಿತ್ತು. ಆದರೆ ಯಾವ ಉದ್ದೇಶಕ್ಕೆ ಅಷ್ಟು ದೊಡ್ಡ ಬಂಗಲೆ ಕಟ್ಟುತ್ತಿದ್ದಾರೆ ಎನ್ನುವುದು ಗೊತ್ತಾಗಿರಲಿಲ್ಲ. ಸ್ಥಳದಲ್ಲಿ ಎರಡು ನಾಯಿ ಮತ್ತು 15 ಸಿಸಿಟಿವಿಗಳನ್ನು ಭದ್ರತೆ ಉದ್ದೇಶಕ್ಕೆ ಹಾಕಲಾಗಿತ್ತು.

ಇದಲ್ಲದೆ, ಚಾಂಗೂರ್ ಬಾಬಾ ಆಸುಪಾಸಿನ ಹಲವಾರು ಕಡೆ ಕಟ್ಟಡ, ಇನ್ನಿತರ ಆಸ್ತಿಗಳನ್ನು ಹೊಂದಿದ್ದಾನೆ. ಮಹಾರಾಷ್ಟ್ರದ ಲೋನಾವಾಲದಲ್ಲಿ ಚಾಂಗೂರ್ ಬಾಬಾ ಮತ್ತು ನವೀನ್ ಎಂಬಿಬ್ಬರ ಹೆಸರಿನಲ್ಲಿ 16 ಕೋಟಿ ಮೌಲ್ಯದ ಜಮೀನು ಹೊಂದಿದ್ದಾರೆ. ನವೀನ್ 2023ರ ಆಗಸ್ಟ್ 2ರಂದು ಬಂಧನಕ್ಕೀಡಾಗಿದ್ದ. ಈ ಜಾಗವನ್ನು ಮೊಹಮ್ಮದ್ ಅಹ್ಮದ್ ಖಾನ್ ಎಂಬಾತನಿಗೆ ಮಾರಾಟ ಮಾಡಿದ್ದರು. ಚಾಂಗೂರ್ ಬಾಬಾನಿಗೆ ಹಣಕಾಸು ನೆರವನ್ನೂ ಮಹಮ್ಮದ್ ಖಾನ್ ನೀಡಿರುವುದು ಕಂಡುಬಂದಿದ್ದು, ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದಲ್ಲದೆ, ಈತನ ಅಕ್ರಮ ಚಟುವಟಿಕೆಗೆ ಸರಕಾರದ ಕೆಲವು ಅಧಿಕಾರಿಗಳು ಸಹಾಯ ನೀಡಿದ್ದು, ಈ ಬಗ್ಗೆಯೂ ತನಿಖೆ ಸಾಗಿದೆ. ಈತನಿಗೆ ಬಂದಿರುವ ಹಣ ದೇಶದ್ರೋಹಿ ಕೃತ್ಯಗಳಿಗೆ ಬಳಕೆ ಆಗಿದೆಯಾ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗಿದೆ.

ಜಮಾಲುದ್ದೀನ್ ಬಂಧನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಯೋಗಿ ಆದಿತ್ಯನಾಥ್, ಪ್ರಾಥಮಿಕ ತನಿಖೆಯಲ್ಲಿ ಆ ವ್ಯಕ್ತಿ ಇಡೀ ಸಮಾಜಕ್ಕೆ ಮತ್ತು ದೇಶದ ವಿರುದ್ಧ ಕೆಲಸ ಮಾಡುತ್ತಿದ್ದ ಎನ್ನುವುದು ಪತ್ತೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ರಾಜಿಯನ್ನೂ ಮಾಡುವುದಿಲ್ಲ. ಈ ಜಾಲದಲ್ಲಿರುವ ಕ್ರಿಮಿನಲ್ ಗಳಿಗೆ ಸೇರಿದ ಆಸ್ತಿಯನ್ನೂ ಜಪ್ತಿ ಮಾಡಲಾಗುವುದು ಎಂದು ಹೇಳಿದ್ದಾರೆ.

In a startling revelation, a man who once sold bangles and rings on a bicycle has been arrested as the alleged mastermind behind a massive religious conversion racket in Uttar Pradesh. Identified as Jamaluddin alias ‘Changur Baba’, he reportedly amassed over ₹100 crore in assets in just a few years and maintained over 40 bank accounts, many of which received crores in foreign funds—primarily from Islamic nations in the Gulf region.