ಬುರ್ಖಾ ಹಾಕೊಂಡು ಬಂದಿದ್ದ ಮುಸ್ಲಿಂ  ಮತದಾರರಿಗೆ ನಿಮ್ಮ ಮುಖ ತೋರಿಸಿ, ಐಡಿ ಕಾರ್ಡ್ ಕೊಡಿ ಎಂದು ಹೈದರಾಬಾದ್‌ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಧಮ್ಕಿ ; ಓವೈಸಿ ಕಿಡಿ 

13-05-24 03:53 pm       HK News Desk   ದೇಶ - ವಿದೇಶ

ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಈ ನಡುವೆ ಕೆಲವೊಂದು ಕಡೆ ಅಭ್ಯರ್ಥಿಗಳಿಂದ ಎಡವಟ್ಟುಗಳೂ ನಡೆದಿವೆ.

ಹೈದರಾಬಾದ್‌, ಮೇ 13: ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಈ ನಡುವೆ ಕೆಲವೊಂದು ಕಡೆ ಅಭ್ಯರ್ಥಿಗಳಿಂದ ಎಡವಟ್ಟುಗಳೂ ನಡೆದಿವೆ. ಹೈದರಾಬಾದ್‌ ಬಿಜೆಪಿ ಲೋಕಸಭಾ ಅಭ್ಯರ್ಥಿ ಮಾಧವಿ ಲತಾ ಮತಗಟ್ಟೆಯಲ್ಲಿ ಬುರ್ಖಾ ಧರಿಸಿದ್ದ ಮತದಾರರ ಗುರುತಿನ ಚೀಟಿ ಪರಿಶೀಲನೆ ಮಾಡಿ ವಿವಾದಕ್ಕೀಡಾಗಿದ್ದಾರೆ.

ಈ ವಿಡಿಯೋ ವೈರಲ್‌ ಆಗಿದ್ದು, ಪ್ರತಿಸ್ಪರ್ಧಿ ಎಐಎಂಐಎಂ ಪಕ್ಷ ಮುಖಂಡ ಅಸಾದುದ್ದೀನ್‌ ಓವೈಸಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಣಕ್ಕಿಳಿದಿರುವ ಲತಾ, ಇಂದು ಅಜಂಪುರದಲ್ಲಿರುವ ಅಮೃತ ವಿದ್ಯಾಲಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ವಿವಿಧ ಮತಗಟ್ಟೆಗಳಿಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಕಾದು ಕುಳಿತಿದ್ದ ಮುಸ್ಲಿಂ ಮಹಿಳೆಯ ಬಳಿ ಬಂದು, ಮುಖಕ್ಕೆ ಧರಿಸಿದ್ದ ಹಿಜಾಬ್‌ ತೆಗೆಯುವಂತೆ ಹೇಳಿ ಅವರ ಗುತುತಿನ ಚೀಟಿ ಚೆಕ್ ಮಾಡಿದರು. ಅದೂ ಅಲ್ಲದೇ ಸರಿಯಾದ ರೀತಿಯಲ್ಲಿ ಪರಿಶೀಲನೆ ನಡೆದ ಬಳಿಕಷ್ಟೇ ಮತದಾನಕ್ಕೆ ಅವಕಾಶ ಮಾಡಿಕೊಡುವಂತೆ ಅಲ್ಲಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. 


ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಈ ರೀತಿ ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಗುರುತಿನ ಚೀಟಿಯಲ್ಲಿ ಇರುವ ಫೋಟೋ ಜೊತೆಗೆ ಮುಖದ ಹೋಲಿಕೆ ಮಾಡಲು ಆಗ್ರಹಿಸಿದ ವಿಡಿಯೋ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗುವ ಜೊತೆಯಲ್ಲೇ ವಿವಾದಕ್ಕೂ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಚುನಾವಣಾ ಅದಿಕಾರಿ ರೊನಾಲ್ಡ್‌ ರೋಸ್, ಈ ಪ್ರಕರಣ ಸಂಬಂಧ ಪೊಲೀಸರು ಮಾಧವಿ ಲತಾ ವಿರುದ್ದ ಎಫ್‌ಐಆರ್ ದಾಖಲಿಸಲಿದ್ದಾರೆ ಎಂದು ತಿಳಿಸಿದರು.

ಚುನಾವಣೆ ವೇಳೆ ಯಾವುದೇ ಅಭ್ಯರ್ಥಿಗೆ ಮತದಾರರ ಗುರು ಪತ್ತೆ ಮಾಡುವ ಅಧಿಕಾರ ಇರೋದಿಲ್ಲ. ಒಂದು ವೇಳೆ ಅಭ್ಯರ್ಥಿ ಸೇರಿದಂತೆ ಯಾರಿಗಾದ್ರೂ ಅನುಮಾನ ಬಂದರೆ ಅವರು ಮತಗಟ್ಟೆ ಅಧಿಕಾರಿಗೆ ಮಾಹಿತಿ ನೀಡಿ ಮತದಾರರ ಗುರುತು ಪತ್ತೆ ಮಾಡಿಸಬಹುದು ಎಂದು ರೊನಾಲ್ಡ್ ರೋಸ್ ಮಾಹಿತಿ ನೀಡಿದ್ದಾರೆ.

ಈ ಕುರಿತಾಗಿ ಮಾಧ್ಯಮಗಳ ಜೊತೆ ಮಾತನಾಡಿರುವ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ, ನಾನೊಬ್ಬ ಅಭ್ಯರ್ಥಿ. ನನಗೆ ಕಾನೂನಿನ ಪ್ರಕಾರ ಮತದಾರರ ಗುರುತನ್ನು ಪರಿಶೀಲಿಸುವ ಹಕ್ಕು ಇದೆ. ಏಕೆಂದರೆ ಅವರು ಮುಖ ಮುಚ್ಚಿಕೊಂಡಿದ್ದರು. ನಾನು ಪುರುಷ ಅಲ್ಲ. ಮಹಿಳೆ. ನಾನು ಏಕೆ ಮತ್ತೊಬ್ಬ ಮಹಿಳೆಯ ಗುರುತು ಪತ್ತೆ ಮಾಡಬಾರದು. ನಾನು ಅವರಿಗೆ ಮನವಿ ಮಾಡಿಕೊಂಡಿದ್ದ ಎಂದು ಮಾಧವಿ ಲತಾ ಹೇಳಿದ್ದಾರೆ.

ವೀಡಿಯೋ ವೈರಲ್‌ ಆದ ಬೆನ್ನಿಗೆ ಎಐಎಂಐಎಂ ಅಧ್ಯಕ್ಷ ಹಾಗೂ ಪಕ್ಷದ ಅಭ್ಯರ್ಥಿ ಅಸಾದುದ್ದೀನ್‌ ಓವೈಸಿ ಅವರು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

ಮಾಧವಿ ಲತಾ ವಿವಾದಕ್ಕೀಡಾಗುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿರುವ ಸಿದ್ದಿಯಂಬರ್ ಬಜಾರ್ ಮಸೀದಿಯತ್ತ ಮಾಧವಿ ಲತಾ ಬಾಣ ಬಿಟ್ಟಂತೆ ಸನ್ನೆ ಮಾಡುವ ಮೂಲಕ ಸುದ್ದಿಯಾಗಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಮಾಧವಿ ಲತಾ ಕೇಸರಿ ಶಾಲು ಧರಿಸಿ ವಾಹನವೊಂದರ ಮೇಲೆ ನಿಂತು ಮಸೀದಿಯತ್ತ ಬಾಣ ಬಿಟ್ಟಂತೆ ಸನ್ನೆ ಮಾಡಿರುವುದು ಮತ್ತು ಸುತ್ತಲು ಕೇಸರಿ ಧ್ವಜ ಹಿಡಿದು ನಿಂತಿದ್ದ ನೂರಾರು ಜನರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮೊಳಗಿಸಿದ್ದು ವೈರಲ್ ವಿಡಿಯೋದಲ್ಲಿತ್ತು.

Kompella Madhavi Latha, BJP's firebrand candidate from Hyderabad, faces a police case after a video showed her asking burqa-clad Muslim women at a polling booth to reveal their faces so that she can match them with the photographs on their voter ID cards