ಬಿಹಾರದಲ್ಲಿ ಆರ್‌ಜೆಡಿ-ಜೆಡಿಯು ಮೈತ್ರಿ ಪತನ ; ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಿತೀಶ್ ಕುಮಾರ್, ಬಿಜೆಪಿ ಜೊತೆ ಹೊಸ ಸರ್ಕಾರ, ಸಂಜೆ ಪ್ರಮಾಣ

28-01-24 12:08 pm       HK News Desk   ದೇಶ - ವಿದೇಶ

ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಆರ್‌ಜೆಡಿ-ಜೆಡಿಯು ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದೆ.

ಪಾಟ್ನಾ, ಜ 28: ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರೊಂದಿಗೆ ಆರ್‌ಜೆಡಿ-ಜೆಡಿಯು ನೇತೃತ್ವದ ಮೈತ್ರಿ ಸರ್ಕಾರ ಪತನವಾಗಿದೆ.

ಭಾನುವಾರ ಬೆಳಗ್ಗೆ ರಾಜಭವನಕ್ಕೆ ತೆರಳಿದ್ದ ನಿತೀಶ್‌ ಕುಮಾರ್‌, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಮೂಲಕ ರಾಷ್ಟ್ರೀಯ ಜನತಾ ದಳ ಜೊತೆಗಿನ ಮೈತ್ರಿಯನ್ನು ಕೊನೆಗೊಳಿಸಿದ್ದಾರೆ.

ಎಲ್ಲಾ ಪಕ್ಷಗಳು ನಿರ್ಣಾಯಕ ಸಭೆಯ ನಂತರ ನಿತೀಶ್‌, ರಾಜೀನಾಮೆ ಸಲ್ಲಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ಜೊತೆ ನಿತೀಶ್ ಕುಮಾರ್ ಸರ್ಕಾರ ರಚನೆ ಬಹುತೇಕ ಫಿಕ್ಸ್ ಆಗಿದ್ದು, ಇಂದು ಸಂಜೆ ಅಥವಾ ಸೋಮವಾರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇನ್ನೊಂದೆಡೆ ಬಿಹಾರದಲ್ಲಿ  ರಾಜಕೀಯ ಬಿಕ್ಕಟ್ಟು ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ವೀಕ್ಷಕರನ್ನ ನೇಮಕ ಮಾಡಿದೆ. ಭೂಪೇಶ್ ಬಘೇಲ್ ಅವರನ್ನು ವೀಕ್ಷಕನನ್ನಾಗಿ ನೇಮಸಿದೆ. ಮಗದೊಂದು ಕಡೆ ಜೆಡಿಯುನ 10 ಶಾಸಕರನ್ನು ಸೆಳೆಯಲು ಲಾಲೂ ಪ್ರಸಾದ್ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಕೆಲದಿನಗಳಿಂದ ಬಿಹಾರದ ರಾಜಕೀಯದಲ್ಲಿ ಭಾರೀ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಜೆಡಿಯು ಮತ್ತು ಆರ್‌ಜೆಡಿ ಪಕ್ಷದ ಮೈತ್ರಿ ಮುರಿಯುವ ಬಗ್ಗೆ ಇಂದು ಬೆಳಗ್ಗಿನ ತನಕ ಯಾವುದೇ ಪಕ್ಷದ ನಾಯಕರು ಮಾತು ಬಿಟ್ಟುಕೊಟ್ಟಿರಲಿಲ್ಲ. ಗಣರಾಜ್ಯೋತ್ಸವ ದಿನ ಸಿಎಂ ನಿತೀಶ್ ಮತ್ತು ಡಿಸಿಎಂ ತೇಜಸ್ವಿ ಯಾದವ್ ಒಂದೇ ವೇದಿಕೆಯಲ್ಲಿದ್ದರೂ ದೂರ ದೂರ ಕುಳಿತು ಮಾತಾಡಲೇ ಇರಲಿಲ್ಲ.

ಈ ಮಧ್ಯೆ ಮೂರ್ನಾಲ್ಕು ದಿನಗಳಿಂದ ಆರ್‌ಜೆಡಿ, ಜೆಡಿಯು ಮತ್ತು ಬಿಜೆಪಿ ಪಕ್ಷದ ನಾಯಕರು ಆಂತರಿಕ ಲೆಕ್ಕಾಚಾರಗಳನ್ನು ಮಾಡಿ, ಆಯಾ ಪಕ್ಷದ ಶಾಸಕರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ನಿತೀಶ್ ಕುಮಾರ್ ಕೆಲ ದಿನಗಳ ಹಿಂದೆಯೇ ಬಿಜೆಪಿ ಜೊತೆಗೆ ಪುನಃ ಕೈ ಜೋಡಿಸಿ ಸರ್ಕಾರ ರಚಿಸುವ ಸಿದ್ಧತೆ ಮಾಡಿದ್ದರು. ಇದೀಗ ಅಧಿಕೃತವಾಗಿ ಆರ್‌ಜೆಡಿ-ಜೆಡಿಯು ಸರ್ಕಾರ ಪತನವಾಗಿದ್ದು, ಪುನಃ ಬಿಜೆಪಿ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಇಂದು ಸಂಜೆಯೇ 9ನೇ ಬಾರಿಗೆ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ

ಜೆಡಿಯು ಶಾಸಕಾಂಗದ ಪಕ್ಷದ  ಸಭೆಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು, ಮಹಾಮೈತ್ರಿಕೂಟದಲ್ಲಿ ಆರ್‌ಜೆಡಿ ಜತೆ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಆರ್‌ಜೆಡಿ ಮೈತ್ರಿಯಿಂದ ಸಾಕಷ್ಟು ತೊಂದರೆಗಳಿವೆ ಎಂದು ಹೇಳಿದ್ದಾರೆ.

Bihar chief minister Nitish Kumar on Sunday resigned from his position and is likely to form the government with BJP.  The move comes amid heightened rumors of rift in INDIA bloc. As per media reports, Kumar will be taking oath today as the CM with BJP backing post 3pm.