ಮುಂಬೈ ; ರೈಲ್ವೆ ಸಿಗ್ನಲಿಂಗ್ ಸಮಸ್ಯೆ ರಿಪೇರ್ ಮಾಡುತಿದ್ದ ಮೂವರ ಮೇಲೆ ಹರಿದ ರೈಲು, ಸ್ಥಳದಲ್ಲೇ ಸಾವು 

23-01-24 05:13 pm       HK News Desk   ದೇಶ - ವಿದೇಶ

ಮಹಾರಾಷ್ಟ್ರದ ಪಾಲ್ಘಾರ್‌ ಜಿಲ್ಲೆಯಲ್ಲಿ ಪಶ್ಚಿಮ ರೈಲ್ವೆಯ ಮೂವರು ಉದ್ಯೋಗಿಗಳು, ಸ್ಥಳೀಯ ರೈಲು ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮುಂಬೈ, ಜ 23: ಮಹಾರಾಷ್ಟ್ರದ ಪಾಲ್ಘಾರ್‌ ಜಿಲ್ಲೆಯಲ್ಲಿ ಪಶ್ಚಿಮ ರೈಲ್ವೆಯ ಮೂವರು ಉದ್ಯೋಗಿಗಳು, ಸ್ಥಳೀಯ ರೈಲು ಹರಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಸೋಮವಾರ ಉದ್ಯೋಗಿಗಳು ರೈಲ್ವೆ ಸಿಗ್ನಲಿಂಗ್ ಸಮಸ್ಯೆಯೊಂದನ್ನು ಸರಿಪಡಿಸಲು ಪಾಲ್ಘಾರ್‌ನ ವಾಸೈನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ದುರ್ದೈವಿಗಳನ್ನು ಚೀಫ್ ಸಿಗ್ನಲಿಂಗ್ ಅಧಿಕಾರಿ ವಾಸು ಮಿತ್ರ, ಎಲೆಕ್ಟ್ರಿಕಲ್ ಸಿಗ್ನಲಿಂಗ್ ನಿರ್ವಾಹಕ ಸೋಮನಾಥ್ ಉತ್ತಮ್ ಲಾಂಬುತ್ರೆ ಮತ್ತು ಸಹಾಯಕ ಸಚಿನ್ ವಾಂಖೆಡೆ ಎಂದು ಗುರುತಿಸಲಾಗಿದೆ. ಈ ಎಲ್ಲಾ ನೌಕರರು ಪಶ್ಚಿಮ ರೈಲ್ವೆಯ ಮುಂಬಯಿ ವಿಭಾಗದಲ್ಲಿನ ಸಿಗ್ನಲಿಂಗ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು

ವಾಸೈ ರಸ್ತೆ ಮತ್ತು ನೈಗಾವ್ ನಿಲ್ದಾಣಗಳ ನಡುವಿನ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ದೋಷ ಕಂಡುಬಂದಿತ್ತು. ಹೀಗಾಗಿ ಈ ಮೂವರು ನೌಕರರು ಸೋಮವಾರ ಸಂಜೆ ಅದನ್ನು ಸರಿಪಡಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಆಗ ರಾತ್ರಿ 8.55ರ ವೇಳೆಗೆ ಚರ್ಚ್‌ಗೇಟ್ ನಿಲ್ದಾಣದ ಕಡೆಗೆ ಸಾಗುತ್ತಿದ್ದ ಸ್ಥಳೀಯ ರೈಲು ಅವರ ಮೇಲೆ ಹರಿದು ಭೀಕರ ಅಪಘಾತ ಸಂಭವಿಸಿದೆ.

ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವಾಸೈ ಸರ್ಕಾರಿ ರೈಲ್ವೆ ಪೊಲೀಸರು ಅಪಘಾತದ ಸಾವು ಪ್ರಕರಣ ದಾಖಲಿಸಿದ್ದಾರೆ.

ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ದುರಂತ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ರೈಲ್ವೆ ಇಲಾಖೆ ತನಿಖೆಗೆ ಆದೇಶಿಸಿದೆ. ಪಶ್ಚಿಮ ರೈಲ್ವೆ ಅಧಿಕಾರಿಗಳು, ಮೃತಪಟ್ಟ ಮೂವರ ಕುಟುಂಬಗಳಿಗೆ ತಲಾ 50 ಸಾವಿರ ರೂ ತಕ್ಷಣದ ಪರಿಹಾರ ನೀಡಿದ್ದಾರೆ. ಇನ್ನು 15 ದಿನಗಳ ಒಳಗೆ ಮೃತ ನೌಕರರಿಗೆ ಹಾನಿ ಪರಿಹಾರದ ಮೊತ್ತ ಮತ್ತು ಇತರೆ ನೆರವುಗಳನ್ನು ಬಿಡುಗಡೆ ಮಾಡಲಾಗುತ್ತದೆ. ವಾಸು ಮಿತ್ರ ಅವರ ಕುಟುಂಬ ಅಂದಾಜು 1.24 ಕೋಟಿ ರೂ ಪಡೆಯಲಿದೆ. ಸಚಿನ್ ವಾಂಖೆಡೆ ಮತ್ತು ಸೋಮನಾಥ್ ಉತ್ತಮ್ ಅವರ ಕುಟುಂಬಗಳಿಗೆ ಸುಮಾರು 40 ಲಕ್ಷ ರೂ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

A local train ran over three employees of Western Railways near Vasai in Maharashtra's Palghar district, killing them on the spot. The incident happened on Monday when the employees were fixing a signalling issue, police officials told PTI.