Parliament, 78 Opposition MPs suspended: ಭದ್ರತಾ ಲೋಪ ; ಸಂಸತ್ತಿನಲ್ಲಿ ಮತ್ತೆ ವಿಪಕ್ಷಗಳ ಗದ್ದಲ, ಒಂದೇ ದಿನ 78 ಸಂಸದರ ಅಮಾನತು, ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಕಾಂಗ್ರೆಸ್  

18-12-23 06:51 pm       HK News Desk   ದೇಶ - ವಿದೇಶ

ಮಹತ್ವದ ಬೆಳವಣಿಗೆಯಲ್ಲಿ ಸಂಸತ್ತಿನ ಭದ್ರತಾ ಲೋಪದ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿದ ವಿರೋಧ ಪಕ್ಷಗಳ 78 ಸಂಸದರನ್ನು ಸೋಮವಾರ ಒಂದೇ ದಿನ ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ನವದೆಹಲಿ, ಡಿ.18: ಮಹತ್ವದ ಬೆಳವಣಿಗೆಯಲ್ಲಿ ಸಂಸತ್ತಿನ ಭದ್ರತಾ ಲೋಪದ ವಿಚಾರದಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿದ ವಿರೋಧ ಪಕ್ಷಗಳ 78 ಸಂಸದರನ್ನು ಸೋಮವಾರ ಒಂದೇ ದಿನ ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಅಮಾನತು ಮಾಡಲಾಗಿದೆ.

ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಡಿಎಂಕೆಯ ಟಿಆರ್ ಬಾಲು, ದಯಾನಿಧಿ ಮಾರನ್, ಕನಿಮೋಳಿ, ಟಿಎಂಸಿಯ ಸುಗತ ರಾಯ್, ಕಾಸರಗೋಡು ಕಾಂಗ್ರೆಸ್ ಸಂಸದ ರಾಜಮೋಹನ್ ಉಣ್ಣಿತ್ತಾನ್ ಸೇರಿದಂತೆ 33 ಸಂಸದರನ್ನು ಅಮಾನತು ಮಾಡಿದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸಿನ ಹಿರಿಯ ಸಂಸದರಾದ ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಸೇರಿ 45 ಮಂದಿಯನ್ನು ಸಂಸತ್ತಿನಿಂದ ಅಮಾನತು ಮಾಡಲಾಗಿದೆ. ಚಳಿಗಾಲದ ಅಧಿವೇಶನ ಡಿ.22ರ ವರೆಗೆ ನಡೆಯಲಿದ್ದು, ಅಲ್ಲಿಯ ವರೆಗೂ ಇವರು ಸಂಸತ್ತಿನ ಒಳಗೆ ಬರದಂತೆ ಸಸ್ಪೆಂಡ್ ಮಾಡಿ ಸ್ಪೀಕರ್ ಆದೇಶ ಮಾಡಿದ್ದಾರೆ.

ಡಿ.15ರಂದು ಒಬ್ಬರು ರಾಜ್ಯಸಭೆ ಸದಸ್ಯ, 13 ಲೋಕಸಭೆ ಸದಸ್ಯರು ಸೇರಿ ಒಟ್ಟು 14 ಸಂಸದರನ್ನು ಇದೇ ವಿಚಾರಕ್ಕೆ ಅಮಾನತು ಮಾಡಲಾಗಿತ್ತು. 22 ವರ್ಷಗಳ ಬಳಿಕ ಸಂಸತ್ತಿನಲ್ಲಿ ಭದ್ರತಾ ಲೋಪ ಆಗಿರುವ ಬಗ್ಗೆ ಸರಕಾರದ ಕಡೆಯಿಂದ ಸ್ಪಷ್ಟನೆ ನೀಡಬೇಕು ಮತ್ತು ಚರ್ಚೆಗೆ ಅವಕಾಶ ನೀಡಬೇಕೆಂದು ಸಂಸದರು ಸ್ಪೀಕರ್ ಕುರ್ಚಿಯ ಎದುರಲ್ಲಿ ಪ್ಲೇಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಸೋಮವಾರವೂ ಈ ರೀತಿಯ ಪ್ರತಿಭಟನೆ, ಧಿಕ್ಕಾರ ಘೋಷಣೆ ಮುಂದುವರಿದಿದ್ದರಿಂದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ 33 ಸಂಸದರನ್ನು ಅಮಾನತುಗೊಳಿಸಿದ್ದಾರೆ. ಆನಂತರ, ರಾಜ್ಯಸಭೆಯಲ್ಲಿಯೂ ಇದೇ ರೀತಿಯ ವರ್ತನೆ ಮರುಕಳಿಸಿದ್ದು, ಸಭಾಪತಿ ಕುರ್ಚಿಯ ಮೇಲೇರಿ ಘೋಷಣೆ ಕೂಗಲು ಯತ್ನಿಸಿದ್ದಾರೆ. ಇದರಿಂದ ಕ್ರುದ್ಧರಾದ ಸಭಾಪತಿ ಜಗದೀಪ್ ಧನ್ಕರ್, 45 ರಾಜ್ಯಸಭೆ ಸದಸ್ಯರನ್ನು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಕಗ್ಗೊಲೆ

ಸಂಸತ್ತಿನಲ್ಲಿ ವಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹಿರಿಯ ಸಂಸದ ಜೈರಾಮ್ ರಮೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಸಿ ವೇಣುಗೋಪಾಲ್ ಮಾತನಾಡಿ, ಎಲ್ಲ ವಿಪಕ್ಷ ಸದಸ್ಯರ ಧ್ವನಿಯನ್ನು ಕಟ್ಟಿಹಾಕಲು ಅಮಾನತು ಮಾಡಿದ್ದಾರೆ. ನಾವು ದೇಶದ ಭದ್ರತೆ ಮತ್ತು ಜನರ ಪರವಾಗಿ ಧ್ವನಿ ಎತ್ತಿದ್ದೇವೆ. ಸಂಸತ್ತು ಇರುವುದು ಸಂಸದರನ್ನು ಅಮಾನತು ಮಾಡುವುದಕ್ಕಾಗಿ ಎನ್ನುವಂತಾಗಿದೆ. ದೇಶದ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕಲ್ಲ ಎಂದು ಹೇಳಿದ್ದಾರೆ.

ಸಂಸತ್ ಸದಸ್ಯರ ಅಮಾನತ್ತಿನ ನಡುವೆಯೇ ಲೋಕಸಭೆಯಲ್ಲಿ ಟೆಲಿಕಮ್ಯುನಿಕೇಶನ್ ಬಿಲ್ -2023 ಅನ್ನು ಮಂಡಿಸಿ ಅನುಮೋದನೆ ಪಡೆಯಲಾಗಿದೆ. 138 ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಇಂಡಿಯನ್ ಟೆಲಿಗ್ರಾಫ್ ಆಕ್ಟ್ ಬದಲಿಗೆ ಹೊಸ ಮಸೂದೆಯನ್ನು ತರಲಾಗಿದೆ.

Thirty-three Opposition MPs from the Lok Sabha and 45 from the Rajya Sabha were suspended in an unprecedented move on Monday for the remainder of the Winter Session for allegedly disrupting the proceedings of the ouse as they sought discussion on the December 13 Parliament security breach.