Chennai, Cyclone, Flights Hit: ಮೈಚಾಂಗ್ ಚಂಡಮಾರುತ ಆರ್ಭಟ ; ಚೆನ್ನೈ ವಿಮಾನ ನಿಲ್ದಾಣ ಸಂಪೂರ್ಣ ಜಲಾವೃತ, ಭಾರಿ ಮಳೆಗೆ ಜನಜೀವನ ತತ್ತರ, ಗೋಡೆ ಕುಸಿದು ಇಬ್ಬರ ಸಾವು

04-12-23 01:23 pm       HK News Desk   ದೇಶ - ವಿದೇಶ

ಮೈಚಾಂಗ್ ಚಂಡಮಾರುತ ಸೋಮವಾರ ತಮಿಳುನಾಡಿನ ಕರಾವಳಿ ಪ್ರದೇಶಗಳತ್ತ ಮುನ್ನುಗ್ಗುತ್ತಿದ್ದು ಪರಿಣಾಮ ಚೆನ್ನೈ ಸುತ್ತ ಮುತ್ತ ಭಾರಿ ಮಳೆಯಾಗುತ್ತಿದೆ.

ಚೆನ್ನೈ , ಡಿ 04: ಮೈಚಾಂಗ್ ಚಂಡಮಾರುತ ಸೋಮವಾರ ತಮಿಳುನಾಡಿನ ಕರಾವಳಿ ಪ್ರದೇಶಗಳತ್ತ ಮುನ್ನುಗ್ಗುತ್ತಿದ್ದು ಪರಿಣಾಮ ಚೆನ್ನೈ ಸುತ್ತ ಮುತ್ತ ಭಾರಿ ಮಳೆಯಾಗುತ್ತಿದೆ.

ಇದರ ಪರಿಣಾಮ ಚೆನ್ನೈ ವಿಮಾನ ನಿಲ್ದಾಣದಲ್ಲಿ ಮಳೆ ನೀರಿನಿಂದ ಆವರಿಸಿದ್ದು ಈ ಭಾಗದ ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಭಾರಿ ಮಳೆಯಿಂದ ವಿಮಾನ ನಿಲ್ದಾಣದ ರನ್ ವೇ, ಪಾರ್ಕಿಂಗ್ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ಕೆಲವೊಂದು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶ ಕರಾವಳಿಯ ಸಮೀಪ ಮೈಚಾಂಗ್ ಚಂಡಮಾರುತವು ಸಮೀಪಿಸುತ್ತಿರುವ ಕಾರಣ ಸೋಮವಾರ ರಾತ್ರಿಯಿಡೀ ಚೆನ್ನೈನಲ್ಲಿ ಭಾರೀ ಮಳೆ ಸುರಿದಿದೆ. ಭಾರತ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ 24 ಗಂಟೆಗಳಲ್ಲಿ ನಗರ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.

ಚೆನ್ನೈನ ಕನಿಷ್ಠ 14 ಸಬ್‌ವೇಗಳು ಮುಚ್ಚಿಹೋಗಿವೆ. ಸಬ್ ಅರ್ಬನ್ ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿದ್ಯುತ್ ಹಾಗೂ ಇಂಟರ್ನೆಟ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರು ಕುದಿಸಿದ ನೀರನ್ನೇ ಕುಡಿಯುವಂತೆ ಜನರಿಗೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಮಳೆ ಹಾಗೂ ಥಂಡಿ ವಾತಾವರಣದಿಂದ ಬ್ಯಾಕ್ಟೀರಿಯಾ, ವೈರಸ್‌ಗಳು ಹೆಚ್ಚುವ ಅಪಾಯವಿದೆ ಎಂದು ಅದು ಹೇಳಿದೆ.

ಚೆನ್ನೈ, ಕಂಚೀಪುರಂ, ಚೆಂಗಲಪಟ್ಟು, ತಿರುವಳ್ಳೂರ್ ಜಿಲ್ಲೆಗಳಲ್ಲಿ ಗಂಟೆಗೆ 60- 70 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಕಡ್ಡಲೋರ್, ಕಲ್ಲಕುರಿಚಿ ಮತ್ತು ತಿರುಪತ್ತೂರ್ ಜಿಲ್ಲೆಗಳಲ್ಲಿ ವಿಪರೀತ ಮಳೆ ಸಾಧ್ಯತೆ ಇದೆ. ರಾಣಿಪೇಟೆ, ವೆಲ್ಲೂರ್, ತಿರುವಣ್ಣಾಮಲೈ, ವಿಲ್ಲುಪುರಂ ಜಿಲ್ಲೆಗಳಲ್ಲಿ ಮಳೆ ಆರ್ಭಟ ಇನ್ನಷ್ಟು ಜೋರಾಗಿರಲಿದೆ. ಚೆನ್ನೈ, ಕಾಂಚಿಪುರಂ, ಚೆಂಗಲಪಟ್ಟು ಹಾಗೂ ತಿರುವಳ್ಳೂರು ಜಿಲ್ಲೆಗಳ ಹಲವೆಡೆ ಕುಂಭದ್ರೋಣ ಮಳೆಯ ಎಚ್ಚರಿಕೆ ನೀಡಲಾಗಿದೆ.

ಎನ್‌ಡಿಆರ್‌ಎಫ್ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಸಕ್ರಿಯವಾಗಿದ್ದು, ತಂಬರಮ್ ಪ್ರದೇಶದಲ್ಲಿ ಜಲಾವೃತ ಪ್ರದೇಶಗಳಲ್ಲಿ ಸಿಲುಕಿದ್ದ 15ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ.

ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಚೆನ್ನೈ ಸಾರಿಗೆ ಸಂಸ್ಥೆಯು 2,800 ಬಸ್‌ಗಳ ಪೈಕಿ 600 ಬಸ್‌ಗಳನ್ನು ಮಾತ್ರ ರಸ್ತೆಗಿಳಿಸಿದೆ. ಚಾಲಕರು ಮತ್ತು ನಿರ್ವಾಹಕರಿಗೆ ಕರ್ತವ್ಯಕ್ಕೆ ಹಾಜರಾಗಲು ಕೂಡ ಸಾಧ್ಯವಾಗುತ್ತಿಲ್ಲ. ಕೊಯಂಬೇಡು, ಎಗ್ಮೋರೆ ಮತ್ತು ತಂಬಾರಂನಂತಹ ಪ್ರದೇಶಗಳಿಗೆ ರೈಲು ಹಾಗೂ ಬಸ್‌ಗಳಲ್ಲಿ ಬಂದಿಳಿದಿ ಪ್ರಯಾಣಿಕರಿಗೆ ಅಲ್ಲಿಂದ ಹೋಗಲು ವಾಹನಗಳಿಲ್ಲದೆ ಪರದಾಡುತ್ತಿದ್ದಾರೆ. ಕೇವಲ 2- 3 ಕಿಮೀ ದೂರದ ಪ್ರಯಾಣಿಕರಿಗೆ ಆಟೋ ರಿಕ್ಷಾ ಚಾಲಕರು ಕನಿಷ್ಠ 500 ರೂ ದರ ಕೇಳುತ್ತಿರುವುದು ಅವರ ಪರದಾಟ ಹೆಚ್ಚಿಸಿದೆ.

Chennai city and its neighboring districts received heavy rainfall overnight, with Meenambakkam recording 196 mm and Nungambakkam receiving 154.3 mm in the 24 hours leading up to 5:30 am this morning.