Deep fake, PM Modi: ಡೀಪ್‌ ಫೇಕ್‌ ಕಂಟಕ ; ಭಾರತೀಯ  ವ್ಯವಸ್ಥೆಯ ಅತ್ಯಂತ ದೊಡ್ಡ ಬೆದರಿಕೆ ಇದು, ಬಹಳ ಜಾಗರೂಕರಾಗಿರಬೇಕು ಎಂದ ಪ್ರಧಾನಿ ಮೋದಿ

17-11-23 04:30 pm       HK News Desk   ದೇಶ - ವಿದೇಶ

ಡೀಪ್‌ ಫೇಕ್‌ ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಹೊಸದಿಲ್ಲಿ, ನ.17: ಡೀಪ್‌ ಫೇಕ್‌ ಗಳು ಪ್ರಸ್ತುತ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ.

ಇದು ಸಮಾಜದಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಬಹುದು. ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಜನರಿಗೆ ಶಿಕ್ಷಣ ನೀಡಬೇಕು ಎಂದು ಪ್ರಧಾನಿ ಮಾಧ್ಯಮಗಳಿಗೆ ಒತ್ತಾಯಿಸಿದರು.

ದೆಹಲಿಯ ಬಿಜೆಪಿಯ ಪ್ರಧಾನ ಕಛೇರಿಯಲ್ಲಿ ಬಿಜೆಪಿಯ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಡೀಪ್‌ ಫೇಕ್‌ ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದ ಸಮಗ್ರತೆಗೆ ಡೀಪ್‌ಫೇಕ್‌ಗಳು ಹೇಗೆ ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ? ನಕಲಿ ಮತ್ತು ನೈಜ ಕ್ಲಿಪ್‌ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ. ಇದು ಇತ್ತೀಚೆಗೆ ರಾಜಕಾರಣಿಗಳನ್ನೂ ಗುರಿ ಮಾಡಲಾಗುತ್ತಿದೆ, ಕೃತಕ ವಾಯ್ಸ್‌ಓವರ್‌, ನಕಲಿ ವೀಡಿಯೋ ಕ್ಲಿಪ್‌ಗಳನ್ನು ಬಳಸಿ ರಾಜಕಾರಣಿಗಳನ್ನ ಗುರಿಯಾಗಿಸಲಾಗುತ್ತಿದೆ. ಇಂತಹ ಎಲ್ಲ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಬಾ ನೃತ್ಯ ಮಾಡುತ್ತಿರುವ ಡೀಪ್‌ ಫೇಕ್‌ ವಿಡಿಯೋ ಉಲ್ಲೇಖಿಸಿ ಮಾತನಾಡಿದ್ದು, ತಾನು ಚಿಕ್ಕಂದಿನಿಂದಲೂ ಗರ್ಬಾ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ.

ವೈರಲ್‌ ವೀಡಿಯೋದಲ್ಲಿ ಪ್ರಧಾನಿಯನ್ನೇ ಹೋಲುವ ವ್ಯಕ್ತಿಯೊಬ್ಬರು ಕೆಲ ಮಹಿಳೆಯರೊಂದಿಗೆ ನೃತ್ಯ ಮಾಡುವುದು ಕಂಡುಬಂದಿತ್ತು. ಆದ್ರೆ ಮಾಧ್ಯಮ ಸಂಸ್ಥೆಯೊಂದು ಅದನ್ನು ಫ್ಯಾಕ್ಟ್‌ಚೆಕ್‌ಗೆ ಒಳಪಡಿಸಿದಾಗ ವೀಡಿಯೋದಲ್ಲಿದ್ದ ವ್ಯಕ್ತಿ ಪ್ರಧಾನಿಯಲ್ಲ, ವಿಕಾಸ್‌ ಮಹಂತೆ ಎನ್ನುವ ನಟ‌ ಎಂದು ತಿಳಿದುಬಂದಿತ್ತು.

ಇತ್ತೀಚೆಗೆ ಡೀಪ್‌ ಫೇಕ್‌ ವೀಡಿಯೋಗಳು ಹೆಚ್ಚಾಗುತ್ತಿದ್ದು, ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿಕ ಕಾಜೋಲ್, ಕತ್ರಿನಾ ಕೈಫ್‌ ಅವರ ಡೀಪ್‌ಫೇಕ್ ವೀಡಿಯೋಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ

Deep fake is a dangerous threat to India says PM Modi. Prime Minister Narendra Modi on Friday said that deepfakes are one of the biggest threats that the Indian system is facing at the moment, adding that these can cause chaos in society. The Prime Minister also urged the media to educate people about the rising problem.