ಕೇರಳದ ಕಣ್ಣೂರಿನಲ್ಲಿ ನಕ್ಸಲ್- ಪೊಲೀಸರ ಗುಂಡಿನ ಚಕಮಕಿ, ಇಬ್ಬರು ನಕ್ಸಲರಿಗೆ ಗುಂಡೇಟು ಶಂಕೆ

14-11-23 01:37 pm       HK News Desk   ದೇಶ - ವಿದೇಶ

ಕೇರಳದ ಕಣ್ಣೂರು ಜಿಲ್ಲೆಯ ಅಯ್ಯಂಕುನ್ನು ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಮವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ನಕ್ಸಲರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಣ್ಣೂರು, ನ.14: ಕೇರಳದ ಕಣ್ಣೂರು ಜಿಲ್ಲೆಯ ಅಯ್ಯಂಕುನ್ನು ಅರಣ್ಯ ಪ್ರದೇಶದಲ್ಲಿ ಪೊಲೀಸರು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿದೆ. ಸೋಮವಾರ ಬೆಳಗ್ಗೆ ನಡೆದ ಗುಂಡಿನ ಚಕಮಕಿ ವೇಳೆ ಇಬ್ಬರು ನಕ್ಸಲರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಬೆಳಗ್ಗೆ ಅಯ್ಯಂಕುನ್ನು- ಉರುಪ್ಪುಕುಟ್ಟಿ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಥಂಡರ್ ಬೋಲ್ಟ್ ತಂಡದ ಪೊಲೀಸ್ ತಂಡದ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ನಿರಂತರ ಹತ್ತು ನಿಮಿಷ ಕಾಲ ಗುಂಡಿನ ಚಕಮಕಿ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆ ಬಳಿಕ ಸ್ಥಳಕ್ಕೆ ಎಎನ್ಎಫ್ ಪಡೆ ಆಗಮಿಸಿದ್ದು, ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳದಲ್ಲಿ ರಕ್ತದ ಕಲೆಗಳು ಕಂಡುಬಂದಿರುವುದರಿಂದ ನಕ್ಸಲರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ.

ಸ್ಥಳದಲ್ಲಿ ಮೂರು ಬಂದೂಕು ಪತ್ತೆಯಾಗಿದ್ದು, ಅವನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ನಕ್ಸಲರು ಅರಣ್ಯ ಪ್ರದೇಶದಲ್ಲಿ ಶಿಬಿರ ನಡೆಸಿರುವ ಸಾಧ್ಯತೆ ಬಗ್ಗೆ ಪೊಲೀಸರು ಅಂದಾಜಿಸಿದ್ದಾರೆ. ಕಣ್ಣೂರು ಜಿಲ್ಲೆಯ ಕರಿಕೋಟ್ಟಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೆಲವು ಮನೆಗಳಿಗೆ 9 ಮಂದಿಯಿದ್ದ ನಕ್ಸಲರ ತಂಡ ಭೇಟಿ ನೀಡಿದ್ದಾಗಿ ಸುದ್ದಿ ಹಬ್ಬಿತ್ತು. ಬಂದೂಕುಧಾರಿಗಳಾಗಿದ್ದ ತಂಡ, ಸ್ಥಳೀಯ ಮನೆಗಳಿಂದ ಆಹಾರ ಸಂಗ್ರಹ ಮಾಡಿತ್ತು. ಹೀಗಾಗಿ ಪೊಲೀಸರು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಸೋಮವಾರ ಬೆಳಗ್ಗೆ ಥಂಡರ್ ಬೋಲ್ಟ್ ತಂಡದ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿರುವುದರಿಂದ ನಕ್ಸಲರು ಈ ಭಾಗದಲ್ಲಿ ಬೀಡು ಬಿಟ್ಟಿರುವುದು ಖಚಿತವಾಗಿದೆ.

The Kerala Police on Monday engaged in an encounter with Maoist in Kerala's Kannur district after the outlawed group opened fire on them deep inside the forest.