DS announces alliance with BJP, Kannada News: ದೆಹಲಿ ಮಾತುಕತೆ ಸಕ್ಸಸ್, ಅಂತೂ ಎನ್ ಡಿಎ ತೆಕ್ಕೆಗೆ ಸೇರಿದ ಜೆಡಿಎಸ್ ; ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾರಿಂದಲೇ ಪ್ರಕಟ

22-09-23 05:21 pm       HK News Desk   ದೇಶ - ವಿದೇಶ

ನಿರೀಕ್ಷೆಯಂತೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಅಧಿಕೃತ ಸೇರ್ಪಡೆಯಾಗಿದೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ನವದಹೆಲಿ, ಸೆ.22: ನಿರೀಕ್ಷೆಯಂತೆ ಕರ್ನಾಟಕದ ಪ್ರಾದೇಶಿಕ ಪಕ್ಷ ಜೆಡಿಎಸ್, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಅಧಿಕೃತ ಸೇರ್ಪಡೆಯಾಗಿದೆ. ಈ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದು, ಎನ್ ಡಿಎ ಮೈತ್ರಿಕೂಟಕ್ಕೆ ಸೇರುವುದನ್ನು ಖಚಿತ ಪಡಿಸಿದ್ದಾರೆ. ಜೆಡಿಎಸ್ ನಮ್ಮ ಮೈತ್ರಿಕೂಟ ಸೇರಲು ನಿರ್ಧರಿಸಿದ್ದು ಸಂತೋಷದ ವಿಷಯ. ಅವರನ್ನು ನಮ್ಮ ಕೂಟಕ್ಕೆ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಜೆಪಿ ನಡ್ಡಾ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸುವ ನಿಟ್ಟಿನಲ್ಲಿ ಹಲವು ದಿನಗಳಿಂದ ಜೆಡಿಎಸ್ ನಾಯಕರು ಬಿಜೆಪಿ ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಸಿದ್ದರು. ಲೋಕಸಭೆ ಸೀಟು ಹಂಚಿಕೆ ಬಗ್ಗೆಯೂ ಮಾತುಕತೆ ನಡೆಸಿದ್ದರು. ನಾಲ್ಕು ಅಥವಾ ಐದು ಸೀಟನ್ನು ಜೆಡಿಎಸ್ ಪಡೆದುಕೊಳ್ಳಲು ಮುಂದಾಗಿದೆ. ಹಾಸನ, ಚಿಕ್ಕಬಳ್ಳಾಪುರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ರಾಯಚೂರು ಸೀಟುಗಳನ್ನು ತಮಗೆ ಬಿಟ್ಟು ಕೊಡಬೇಕೆಂದು ಜೆಡಿಎಸ್ ನಾಯಕರು ಹಕ್ಕು ಮಂಡಿಸಿದ್ದಾರೆ. ಆದರೆ ಸೀಟು ಹಂಚಿಕೆ ಎಷ್ಟೆಷ್ಟು ಅನ್ನೋದು ಗೊತ್ತಾಗಿಲ್ಲ.

ಮಂಡ್ಯ ಕ್ಷೇತ್ರ ಬಿಟ್ಟುಕೊಡ್ತಾರಾ ಸುಮಲತಾ ?

ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಭದ್ರ ನೆಲೆ ಹೊಂದಿರುವುದರಿಂದ ಆ ಕ್ಷೇತ್ರದತ್ತ ಕಣ್ಣು ಹಾಕಿದೆ. ಮಂಡ್ಯ ಕ್ಷೇತ್ರವನ್ನು ಬಿಟ್ಟು ಕೊಟ್ಟಲ್ಲಿ ಸಂಸದೆ ಸುಮಲತಾಗೆ ಕೊಕ್ ನೀಡಬೇಕಾಗುತ್ತದೆ. ಹಾಗಾದಲ್ಲಿ, ಈಗಾಗಲೇ ಬಿಜೆಪಿಗೆ ಬೆಂಬಲ ಘೋಷಿಸಿರುವ ಸುಮಲತಾ ಅವರ ರಾಜಕೀಯ ನಡೆ ಏನಿರುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಸೀಟು ಸಿಗದೇ ಇದ್ದರೆ, ಹಿಂದಿನಂತೆ ಪಕ್ಷೇತರ ಸ್ಪರ್ಧಿಸುತ್ತಾರೆಯೇ ಅಥವಾ ಅವರಿಗೆ ಬೇರೆ ಕ್ಷೇತ್ರದಲ್ಲಿ ಬಿಜೆಪಿ ಸೀಟು ದೊರಕಿಸುತ್ತದೆಯೇ ಅನ್ನುವ ಪ್ರಶ್ನೆ ಇದೆ. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಸೇರಿ ಲೋಕಸಭೆ ಕಣಕ್ಕಿಳಿದಿದ್ದ ಜೆಡಿಎಸ್ ಗೆ ಹಾಸನದಲ್ಲಿ ಮಾತ್ರ ಒಂದು ಸೀಟು ಸಿಕ್ಕಿತ್ತು. ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಗೆದ್ದಿತ್ತು. ಬಿಜೆಪಿ 25 ಕ್ಷೇತ್ರಗಳನ್ನು ಗೆದ್ದು ಕೇಂದ್ರಕ್ಕೆ ದೊಡ್ಡ ಕೊಡುಗೆ ನೀಡಿತ್ತು. ಈ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಬಹುಮತದ ಸರ್ಕಾರ ರಚಿಸಿರುವುದರಿಂದ ಬಿಜೆಪಿಗೆ ಸೀಟು ಕಳೆದುಕೊಳ್ಳುವ ಭೀತಿಯಿದ್ದು, ಇದಕ್ಕಾಗಿ ಜೆಡಿಎಸ್ ಜೊತೆ ಸೇರಿ ಹಣಾಹಣಿಗೆ ಸಿದ್ಧತೆ ನಡೆಸಿದೆ.

The Janata Dal (Secular) of former Prime Minister HD Deve Gowda on Friday announced alliance with the BJP in Karnataka and formally joined the National Democratic Alliance (NDA) ahead of the 2024 Lok Sabha elections.