ಹೊಸ ಸಂಸತ್ತಿನಲ್ಲಿ ಐತಿಹಾಸಿಕ ಮಹಿಳಾ ಮೀಸಲು ಮಸೂದೆ ಮಂಡನೆ ; ಲೋಕಸಭೆ, ವಿಧಾನಸಭೆಗಳಲ್ಲಿ 33 ಶೇ. ಮೀಸಲು ಖಚಿತ, "ನಾರಿ ಶಕ್ತಿ ವಂದನ್ ಅಧಿನಿಯಮ"ಕ್ಕೆ ಇನ್ನೊಂದೇ ಮೆಟ್ಟಿಲು  

19-09-23 07:00 pm       HK News Desk   ದೇಶ - ವಿದೇಶ

ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲು ಒದಗಿಸುವ "ನಾರಿ ಶಕ್ತಿ ವಂದನ್ ಅಧಿನಿಯಮ್" ಎನ್ನುವ ಮಹಿಳಾ ಮೀಸಲು ಮಸೂದೆಯನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆ ಮಾಡಲಾಗಿದೆ.

ನವದೆಹಲಿ, ಸೆ.19: ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲು ಒದಗಿಸುವ "ನಾರಿ ಶಕ್ತಿ ವಂದನ್ ಅಧಿನಿಯಮ್" ಎನ್ನುವ ಮಹಿಳಾ ಮೀಸಲು ಮಸೂದೆಯನ್ನು ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡನೆ ಮಾಡಲಾಗಿದೆ. ನೂತನ ಸಂಸತ್ ಭವನದಲ್ಲಿ ಮಂಗಳವಾರ ಬೆಳಗ್ಗೆ ಹೊಸ ಮಸೂದೆಯನ್ನು ಮಂಡಿಸಲಾಗಿದ್ದು ಪ್ರಧಾನಿ ಮೋದಿ ಸೆಪ್ಟೆಂಬರ್ 19 ಐತಿಹಾಸಿಕ ದಿವಸ ಎಂದು ಬಣ್ಣಿಸಿದ್ದಾರೆ. 

ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಿಳಾ ಮೀಸಲು ಮಸೂದೆಯನ್ನು ಮೋದಿ ಸರ್ಕಾರ ಹೊಸ ಸಂಸತ್ತಿನಲ್ಲಿ ನಡೆದ ಮೊದಲ ಅಧಿವೇಶನದಲ್ಲಿಯೇ ಮಂಡನೆ ಮಾಡಿದೆ. ಹೊಸ ಸಂಸತ್ ಭವನದಲ್ಲಿ ಅಧಿವೇಶನ ಮತ್ತು ಇದೇ ಸಂದರ್ಭದಲ್ಲಿ ಐತಿಹಾಸಿಕ ಮಸೂದೆ ಮಂಡನೆ ಮಾಡುತ್ತಿರುವುದು ಐತಿಹಾಸಿಕ ಕ್ಷಣ. ಈ ಮೂಲಕ ನಾವು ಮಹಿಳಾ ಸಶಕ್ತೀಕರಣಕ್ಕೆ ಹೆಬ್ಬಾಗಿಲು ತೆರೆಯುತ್ತಿದ್ದೇವೆ. ವಿರೋಧ ಪಕ್ಷಗಳು ಈ ಮಸೂದೆಯನ್ನು ಬೆಂಬಲಿಸಿ ಅವಿರೋಧವಾಗಿ ಪಾಸ್ ಆಗುವಂತೆ ಮಾಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಮಹಿಳೆಯರ ಮೀಸಲು ಮಸೂದೆ ಪ್ರಜಾಪ್ರಭುತ್ವ ಬಲಪಡಿಸಲಿದೆ. ಹಲವು ದಶಕಗಳಿಂದ ಈ ಕುರಿತು ಚರ್ಚೆ ನಡೆಯುತ್ತ ಬಂದಿತ್ತು. ಈ ಕ್ಷಣದಲ್ಲಿ ನಾವು ಶಾಸನ ರಚನಕಾರರು ಮಸೂದೆ ಜಾರಿಗೆ ಕೈಜೋಡಿಸಬೇಕಾಗಿದೆ. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಹೆಚ್ಚೆಚ್ಚು ಮಹಿಳೆಯರು ತೊಡಗಿಸಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ. ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸಂಸತ್ತಿನಲ್ಲಿ ಹೊಸ ಮಸೂದೆಯನ್ನು ಮಂಡನೆ ಮಾಡಿದ್ದಾರೆ. 

ದೇಶದಲ್ಲಿ ಒಟ್ಟು 950 ಮಿಲಿಯ ಅಧಿಕೃತ ಮತದಾರರಿದ್ದು ಈ ಪೈಕಿ ಅರ್ಧದಷ್ಟು ಮಹಿಳೆಯರಿದ್ದಾರೆ. ಆದರೆ ಸಂಸತ್ತಿನಲ್ಲಿ ಇವರ ಸಂಖ್ಯೆ ಇರುವುದು ಕೇವಲ ಹದಿನೈದು ಶೇಕಡಾ. ರಾಜ್ಯ ವಿಧಾನಸಭೆಗಳಲ್ಲಿ ಹತ್ತು ಶೇಕಡಾದಷ್ಟು ಮಹಿಳಾ ಪ್ರಾತಿನಿಧ್ಯ ಇದೆ. ಈ ಮಸೂದೆ ಜಾರಿಗೆ ಬಂದಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಈಗ ಇರುವ 82ರ ಬದಲು 181 ಆಗಲಿದೆ ಎಂದು ಸಚಿವ ಅರ್ಜುನ್ ರಾಮ್ ಮೇಘವಾಲ್ ಅಭಿಪ್ರಾಯ ಪಟ್ಟಿದ್ದಾರೆ. 

2010ರಲ್ಲಿ ರಾಜ್ಯಸಭೆಯಲ್ಲಿ  ಅಂಗೀಕರಿಸಲಾಗಿದ್ದ ಮಹಿಳಾ ಮೀಸಲಾತಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಸಿಗದೆ ಬಿದ್ದು ಹೋಗಿತ್ತು. ಇಂದು ಮಸೂದೆ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ರಾಜೀವ ಗಾಂಧಿ, ನರಸಿಂಹ ರಾವ್ ಕಾಲದಲ್ಲಿಯೇ ಮಹಿಳಾ ಮೀಸಲು ಮಸೂದೆ ಜಾರಿಗೆ ಪ್ರಯತ್ನ ನಡೆದಿತ್ತು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಮಾಡಲಾಗಿತ್ತು ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಅಮಿತ್ ಷಾ, ಆ ಮಸೂದೆ ಆಗಿನ ಕಾಲದಲ್ಲೇ ಲ್ಯಾಪ್ಸ್ ಆಗಿತ್ತು ಎಂದು ಕುಟುಕಿದರು.

The Women's Reservation Bill that seeks to provide 33 per cent quota for women in Lok Sabha and state assemblies was introduced in the Lok Sabha today in the ongoing special session of Parliament. Calling September 19 a "historic day", Prime Minister Narendra Modi urged the Opposition to unanimously pass the Bill - 'Nari Shakti Vandan Adhiniyam' - that has been hanging for nearly three decades.