ಒಡಿಶಾ ರೈಲು ದುರಂತ ; ಬಹನಾಗ ನಿಲ್ದಾಣದ ಅಸಿಸ್ಟೆಂಟ್ ಸ್ಟೇಶನ್ ಮ್ಯಾನೇಜರ್ ಸೇರಿ ಐವರು ಸಿಬಿಐ ವಶಕ್ಕೆ

12-06-23 09:54 pm       HK News Desk   ದೇಶ - ವಿದೇಶ

ಒಡಿಶಾ ರೈಲು ದುರಂತ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಬಹನಾಗ ರೈಲು ನಿಲ್ದಾಣದ ಅಸಿಸ್ಟೆಂಟ್ ಸ್ಟೇಶನ್ ಮ್ಯಾನೇಜರ್ ಸಹಿತ ಐವರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಭುವನೇಶ್ವರ್, ಜೂನ್ 12: ಒಡಿಶಾ ರೈಲು ದುರಂತ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಬಹನಾಗ ರೈಲು ನಿಲ್ದಾಣದ ಅಸಿಸ್ಟೆಂಟ್ ಸ್ಟೇಶನ್ ಮ್ಯಾನೇಜರ್ ಸಹಿತ ಐವರು ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ.

ಒಂದು ವಾರದಿಂದ ಹತ್ತು ಮಂದಿ ಸಿಬಿಐ ಅಧಿಕಾರಿಗಳು ರೈಲು ದುರಂತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಒಂಬತ್ತು ಮಂದಿ ರೈಲ್ವೇ ಇಲಾಖೆಯ ಅಧಿಕಾರಿಗಳ ಬಗ್ಗೆ ನಿಗಾ ಇಟ್ಟಿದ್ದು, ಹಲವರನ್ನು ವಿಚಾರಣೆ ನಡೆಸಿದ್ದಾರೆ. ಇದೀಗ ರೈಲು ದುರಂತ ನಡೆದಿರುವ ಬಹನಾಗ ರೈಲ್ವೇ ನಿಲ್ದಾಣದ ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಗೇಟ್ ಮ್ಯಾನ್ ಅನ್ನು ವಶಕ್ಕೆ ಪಡೆದು ಗ್ರಿಲ್ ನಡೆಸುತ್ತಿದ್ದಾರೆ.ಇದೇ ವೇಳೆ ಬಹನಾಗ ಪೊಲೀಸ್ ಠಾಣೆಯನ್ನೂ ಸೀಲ್ ಮಾಡಲಾಗಿದೆ. ಅಲ್ಲದೆ, ವಿಧಿ ವಿಜ್ಞಾನ ತಜ್ಞರು ಸ್ಥಳದಿಂದ ಹಲವು ತಾಂತ್ರಿಕ ಸಾಕ್ಷ್ಯಗಳನ್ನು ಪತ್ತೆ ಮಾಡಿದ್ದಾರೆ. ಬಹನಾಗ ಬಝಾರ್ ರೈಲು ನಿಲ್ದಾಣದಲ್ಲಿ ಸಿಬಿಐ ಅನುಮತಿಯಿಲ್ಲದೆ ಯಾವುದೇ ರೈಲು ನಿಲ್ಲದಂತೆ ಸೂಚನೆ ನೀಡಲಾಗಿದೆ.

ಇದಲ್ಲದೆ, ರೈಲು ನಿಲ್ದಾಣದ ಎಲ್ಲ ಕಂಪ್ಯೂಟರ್ ಗಳ ಹಾರ್ಡ್ ಡಿಸ್ಕನ್ನು ಸಿಬಿಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ರೈಲು ದುರಂತ ನಡೆದ ಜೂನ್ 2ರಂದು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ವ್ಯಕ್ತಿಗಳು, ಎಕ್ಸ್ ಚೇಂಜ್ ಬುಕ್ ನಲ್ಲಿ ನಮೂದಾಗಿರುವ ಖಾಸಗಿ ವ್ಯಕ್ತಿಗಳ ಮೊಬೈಲ್ ನಂಬರ್ ಗಳನ್ನು ಸಂಗ್ರಹಿಸಿದ್ದಾರೆ. ರೈಲು ನಿಲ್ದಾಣದ ರಿಲೇ ರೂಮ್, ಪ್ಯಾನೆಲ್ ರೂಮ್, ಡಾಟಾ ಲಾಕರ್ ಕೊಠಡಿಯನ್ನು ಪೂರ್ತಿ ವಶಕ್ಕೆ ಪಡೆದಿದ್ದಾರೆ. ಜೂನ್ 2ರಂದು ಸಂಜೆ 7 ಗಂಟೆ ಸುಮಾರಿಗೆ ಬಹನಾಗ ರೈಲು ನಿಲ್ದಾಣದ ಎದುರಲ್ಲೇ ಮೂರು ರೈಲುಗಳು ಒಂದಕ್ಕೊಂದು ಡಿಕ್ಕಿಯಾಗಿ 288 ಜನರು ಸಾವಿಗೀಡಾಗಿದ್ದ ಘಟನೆ ನಡೆದಿತ್ತು.

Odisha Train Tragedy CBI detains Bahanaga Assistant Station Manager Four others Seals Accident Site.