Sowjanya Case, Dharmasthala: ಸೌಜನ್ಯಾ ಪ್ರಕರಣ ; ಸತ್ಯ ಮುಚ್ಚಿಡುವುದು ಅಪರಾಧ ಅಲ್ಲವೇ? ಬಿಜೆಪಿಯವರು ಯಾರ ಪರ ಇದ್ದಾರೆ ? ಸಿಬಿಐಗೆ ಹೇಳಿ ಮರು ತನಿಖೆ ಮಾಡಿಸಲಿ ; ಸಿಎಂ ಸಿದ್ದರಾಮಯ್ಯ ಟಾಂಗ್ 

02-09-25 08:37 pm       HK News Desk   ಕರ್ನಾಟಕ

ಧರ್ಮಸ್ಥಳ ಸೌಜನ್ಯಾ ಸಾವಿನ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಸಿಬಿಐ ಕೇಂದ್ರ ಸರ್ಕಾರದ್ದೇ ಸಂಸ್ಥೆಯಾಗಿದ್ದು ಅವರಿಗೆ ಹೇಳಿ ಮರು ತನಿಖೆ ನಡೆಸಲಿ. ಈ ಬಗ್ಗೆ ಸೌಜನ್ಯಾ ತಾಯಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಮೈಸೂರು, ಸೆ.2 : ಧರ್ಮಸ್ಥಳ ಸೌಜನ್ಯಾ ಸಾವಿನ ಪ್ರಕರಣದ ಮರು ತನಿಖೆ ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗಲಿ. ಸಿಬಿಐ ಕೇಂದ್ರ ಸರ್ಕಾರದ್ದೇ ಸಂಸ್ಥೆಯಾಗಿದ್ದು ಅವರಿಗೆ ಹೇಳಿ ಮರು ತನಿಖೆ ನಡೆಸಲಿ. ಈ ಬಗ್ಗೆ ಸೌಜನ್ಯಾ ತಾಯಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಮೈಸೂರಿನಲ್ಲಿ ಸಿದ್ದರಾಮಯ್ಯ  ಮಾಧ್ಯಮಕ್ಕೆ ಈ ಪ್ರತಿಕ್ರಿಯೆ ನೀಡಿದ್ದಾರೆ. 12 ವರ್ಷಗಳ ಹಿಂದೆ ಸೌಜನ್ಯ ಅಪಹರಣ ಆಗಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಎಸ್‌ಐಟಿಗೆ ಮಹಿಳೆಯೊಬ್ಬರು ದೂರು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದನ್ನು ಸಿಬಿಐ ತನಿಖೆ ನಡೆದಾಗ ಏಕೆ ಹೇಳಲಿಲ್ಲ? ಸತ್ಯ ಗೊತ್ತಿದ್ದ ಮೇಲೆ, ಅದನ್ನು ಮುಚ್ಚಿಡುವುದು ಅಪರಾಧ ಅಲ್ಲವೇ ಎಂದು ಪ್ರಶ್ನಿಸಿದರು.

ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿದೆ. ಬಿಜೆಪಿ ಈಗ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದೆ. ಹಾಗಾದರೆ ನಮ್ಮ ಪೊಲೀಸರ ಮೇಲೆ ಬಿಜೆಪಿಯವರಿಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು. ಎಸ್‌ಐಟಿ ರಚನೆಯಾದ ಪ್ರಾರಂಭದಲ್ಲಿ ಎನ್‌ಐಎ ತನಿಖೆ ಮಾಡಿ ಎನ್ನಲಿಲ್ಲ. ನಂತರ ಶವಗಳು ಸಿಗದೇ ಇದ್ದಾಗ ತನಿಖೆಯ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರೇ ಸತ್ಯ ಹೊರಬರಲಿ ಎಂದು ಎಸ್‌ಐಟಿ ರಚನೆಯನ್ನು ಸ್ವಾಗತಿಸಿದ್ದಾರೆ. ನಮ್ಮ ಮೇಲಿನ ಅನುಮಾನದ ತೂಗುಗತ್ತಿ ನಿವಾರಣೆಯಾಗಬೇಕು ಎಂದಿದ್ದಾರೆ. ಎಸ್ಐಟಿ ತನಿಖೆ ಸ್ವತಂತ್ರವಾಗಿ ಮಾಡುತ್ತಿದ್ದು ನಾವ್ಯಾರು ಅದರಲ್ಲಿ ಹಸ್ತಕ್ಷೇಪ ಮಾಡಿಲ್ಲ ಎಂದರು.

ಹೊರ ದೇಶಗಳಿಂದ ಹಣ ಬಂದಿದೆ ಎಂಬ ಬಿಜೆಪಿ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಬಿಜೆಪಿಯವರಿಗೆ ಹಣ ಬಂದಿದೆ. ವಿರೋಧಗಳ ಬಗ್ಗೆ ಟೀಕೆಯನ್ನು ಮಾಡಲಿ. ಆದರೆ ಎಲ್ಲಾ ವಿಷಯಗಳನ್ನೂ ರಾಜಕೀಯಕ್ಕೆ ಬಳಸಲು ಹೋಗಬಾರದು. ಇದರಲ್ಲಿ ಸತ್ಯವಿಲ್ಲ ಎಂದರು.

ಬಿಜೆಪಿಯವರು ಯಾರ ಪರ ಇದ್ದಾರೆ?

ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಬೇಕೆಂದು ಬಿಜೆಪಿ ಹೇಳುತ್ತಿದೆ. ಸೌಜನ್ಯ ಪ್ರಕರಣದಲ್ಲಿ ವೀರೇಂದ್ರ ಹೆಗ್ಗಡೆಯವರ ಕುಟುಂಬದ ಮೇಲೆ ಆರೋಪವಿದೆ. ಹಾಗಾದರೆ ಬಿಜೆಪಿ ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು. ಒಂದು ಕಡೆ ವೀರೇಂದ್ರ ಹೆಗಡೆಯವರ ಪರ ಎನ್ನುತ್ತಾರೆ, ಮತ್ತೊಂದಡೆ ಸೌಜನ್ಯಾ ಪರ ಎನ್ನುತ್ತಾರೆ ಎಂದು ಹೇಳಿದರು. ಒಂದು ಕಡೆ ವೀರೇಂದ್ರ ಹೆಗ್ಗಡೆಯವರಿಗೆ ಜೈಕಾರ ಹಾಕುತ್ತಾರೆ, ಮತ್ತೊಂದು ಕಡೆ ಸೌಜನ್ಯಾ ಪರ ಇರುವುದಾಗಿ ಹೇಳುತ್ತಾರೆ. ನಿಜವಾಗಿಯೂ ಇವರು ಯಾರ ಪರ ಇದ್ದಾರೆ ಎಂದು ಪ್ರಶ್ನಿಸಿದರು.

Karnataka Chief Minister Siddaramaiah has issued a strong rebuttal to the BJP's demands for a National Investigation Agency (NIA) probe into the Dharmasthala Sowjanya death case, suggesting instead that if a reinvestigation is necessary, the matter should be taken to court and the Central Bureau of Investigation (CBI) should be approached.