"ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ;  ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆಗೆ ಕರೆ ಕೊಟ್ಟ ವಿಜಯೇಂದ್ರ

21-08-25 06:02 pm       Bangalore Correspondent   ಕರ್ನಾಟಕ

ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ "ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ಹೋರಾಟವನ್ನು ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಬೆಂಗಳೂರು, ಆ 22 : ಧರ್ಮಸ್ಥಳದ ವಿಚಾರವಾಗಿ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ "ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ಹೋರಾಟವನ್ನು ಮಾಡಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಮಾತನಾಡಿದ ಅವರು, "ಧರ್ಮಸ್ಥಳದ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ ಹೇಳಿಕೆಗಳು ಎಲ್ಲರಿಗೂ ತಿಳಿದಿದೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ವಿಚಾರವಾಗಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ನಮಗೂ ಅನುಮಾನಗಳು ಕಾಡುತ್ತಿವೆ" ಎಂದು ಹೇಳಿದರು.

"ರಾಜ್ಯ ಸರ್ಕಾರದ ಈ ಧೋರಣೆಯನ್ನು ಖಂಡಿಸಿ "ಧರ್ಮದ ಉಳಿವಿಗಾಗಿ ಧರ್ಮ ಯುದ್ಧ" ಪ್ರತಿಭಟನೆಯನ್ನು ನಾಳೆಯಿಂದ ಒಂದು ವಾರದವರೆಗೂ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಲಿದ್ದೇವೆ" ಎಂದು ಘೋಷಿಸಿದರು.

ಪಾರದರ್ಶಕ ತನಿಖೆಯಾಗಲಿ: "ಕಳೆದ ಒಂದು ತಿಂಗಳಿಂದ ಧರ್ಮಸ್ಥಳ ವಿಚಾರದಲ್ಲಿ ಯಾವ ಯಾವ ಬೆಳವಣಿಗೆ ಆಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯ ಸರ್ಕಾರ ಧರ್ಮಸ್ಥಳ ವಿಚಾರದಲ್ಲಿ ತನಿಖೆ ನಡೆಸಬೇಕೆಂದು ಎಸ್‍ಐಟಿ ರಚಿಸಿದಾಗ ಅದನ್ನು ಸ್ವಾಗತ ಮಾಡಿದ್ದೆವು. ಈ ವಿಚಾರದಲ್ಲಿ ಸಮಗ್ರವಾಗಿ, ಪಾರದರ್ಶಕವಾಗಿ ತನಿಖೆಯಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ನಾವು ಸಂಪೂರ್ಣವಾಗಿ ಬೆಂಬಲ ನೀಡಿದ್ದೆವು. ಇದು ಬಿಜೆಪಿಯ ಸ್ಪಷ್ಟ ನಿಲುವಾಗಿದೆ" ಎಂದು ತಿಳಿಸಿದರು.

"ತನಿಖೆ ವಿಚಾರದಲ್ಲಿ ಇಂದೂ ಕೂಡ ನಾವು ಹಿಂದೆ ಸರಿದಿಲ್ಲ. ಆದರೆ, ತನಿಖೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಶ್ರೀಕ್ಷೇತ್ರದ ಬಗ್ಗೆ ಅಪಪ್ರಚಾರಗಳು ಮಾಡಲಾಗುತ್ತಿದೆ. ಇಂಥ ಅಪಪ್ರಚಾರವನ್ನು ನಿಲ್ಲಿಸುವ, ತಡೆಯುವ ಮತ್ತು ಕಟ್ಟಿಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಏಕೆ ಮಾಡಲಿಲ್ಲ" ಎಂದು ಪ್ರಶ್ನಿಸಿದರು.

BJP Karnataka State President B.Y. Vijayendra has announced a statewide agitation titled “Dharma Yuddha – A Fight to Save Religion”, in protest against the state government's stance on the ongoing Dharmasthala controversy.