ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ ; ಬೆತ್ತಲೆಗೊಳಿಸಿ ವಿಡಿಯೋ ಚಿತ್ರೀಕರಣ, ಮೂವರ ಬಂಧನ

05-09-26 03:08 pm       HK News Staffer   ಕ್ರೈಂ

ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ 30 ವರ್ಷದ ಮಹಿಳೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಬಂಧನದಲ್ಲಿರಿಸಿ, ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಜ್ರತ್ ಬೇಗಂ, ರೇಷ್ಮಾ ಭಾನು ಮತ್ತು ಸುಹೇಲ್ ಬಂಧಿತ ಆರೋಪಿಗಳು.

ಬೆಂಗಳೂರು, ಸೆ 05:ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ 30 ವರ್ಷದ ಮಹಿಳೆಯನ್ನು ಅಪಹರಿಸಿ ಎರಡು ದಿನಗಳ ಕಾಲ ಬಂಧನದಲ್ಲಿರಿಸಿ, ಹಲ್ಲೆ ನಡೆಸಿದ ಆರೋಪದಡಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಜ್ರತ್ ಬೇಗಂ, ರೇಷ್ಮಾ ಭಾನು ಮತ್ತು ಸುಹೇಲ್ ಬಂಧಿತ ಆರೋಪಿಗಳು.

ಆರೋಪಿ ನಜ್ರತ್ ಬೇಗಂ ಬಳಿ ಸಂತ್ರಸ್ತ ಮಹಿಳೆ 50 ಸಾವಿರ ಹಾಗೂ ರೇಷ್ಮಾ ಬಳಿ 1 ಲಕ್ಷ ಸಾಲ ಪಡೆದಿದ್ದರು. ವಾರಕ್ಕೊಮ್ಮೆ ಬಡ್ಡಿ ಪಾವತಿಸುತ್ತಿದ್ದ ಸಂತ್ರಸ್ತೆಗೆ ಕಳೆದ ಕೆಲವು ವಾರಗಳಿಂದ ಬಡ್ಡಿ ಪಾವತಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಕೋಪಗೊಂಡ ಆರೋಪಿಗಳು ಆಗಸ್ಟ್ 27ರಂದು ಆಕೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ. ಬಳಿಕ ನಜ್ರತ್ ತನ್ನ ಮಗನೊಂದಿಗೆ ಸಂತ್ರಸ್ತೆಯನ್ನು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಕುಂಬಳಗೋಡಿನಲ್ಲಿರುವ ರೇಷ್ಮಾ ಮನೆಗೆ ಕರೆದೊಯ್ದಿದ್ದಾರೆ.​ ಅಲ್ಲಿ ಆರೋಪಿಗಳು ಮಹಿಳೆಯ ಮೇಲೆ ಮರದ ಕೋಲಿನಿಂದ ತೀವ್ರವಾಗಿ ಹಲ್ಲೆ ನಡೆಸಿ, ಕೊಠಡಿಯಲ್ಲಿ ಬಂಧಿಸಿಟ್ಟಿದ್ದಾರೆ.

ಅಷ್ಟೇ ಅಲ್ಲದೆ ಆರೋಪಿ ನಜ್ರತ್, ಸಂತ್ರಸ್ತ ಮಹಿಳೆಯನ್ನು ಬೆತ್ತಲೆಗೊಳಿಸಿ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ, ಹಣ ನೀಡದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಆ ಬಳಿಕ ವಕೀಲರ ಬಳಿ ಕರೆದೊಯ್ದು ಕೆಲವು ದಾಖಲೆಗಳಿಗೆ ಬಲವಂತವಾಗಿ ಸಹಿ ಮಾಡಿಸಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆಗಸ್ಟ್ 31ರಂದು ಸಂತ್ರಸ್ತ ಮಹಿಳೆ ಶೌಚಾಲಯ ಬಳಸಲು ತೆರಳಿದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅಷ್ಟರಲ್ಲಿ ಸುಳಿವು ಪಡೆದು ಸ್ಥಳಕ್ಕೆ ಬಂದ ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳು ಮತ್ತು ಸಂತ್ರಸ್ತೆ ಸ್ನೇಹಿತರಾಗಿದ್ದು, ಹಣಕಾಸಿನ ವೈಷಮ್ಯದಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.